ನೀಟ್ ಪರೀಕ್ಷಾ ವ್ಯವಸ್ಥೆ ರದ್ದಾಗಲಿ : ಟಿ.ಎ.ನಾರಾಯಣಗೌಡ
ಬೆಂಗಳೂರು, : ನೀಟ್ ಪರೀಕ್ಷಾ ವ್ಯವಸ್ಥೆ ರದ್ದಾಗಲಿ, ನಮಗೆ ಸಿಇಟಿ ಸಾಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಗ್ರಹಿಸಿದ್ದಾರೆ.
ಶುಕ್ರವಾರ ಈ ಕುರಿತು ಪ್ರಕಟನೆ ನೀಡಿರುವ ಅವರು, ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯ ವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ ಯುವಜನರು ಕೇಳುತ್ತಿರುವುದಾದರೂ ಏನನ್ನು? 21 ಮಕ್ಕಳನ್ನು ಬಲಿ ತೆಗೆದುಕೊಂಡ ಈ ಹಗರಣಕ್ಕೆ ಕಾರಣಕರ್ತರು ಯಾರು? ಅವರಿಗೆ ಶಿಕ್ಷೆಯಾಗಲಿ. ಮುಂದೆಂದೂ ಇಂಥ ಹಗರಣಗಳು ನಡೆಯದಿರಲಿ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ ಎಂಬುದು ವಿದ್ಯಾರ್ಥಿಗಳ ಮುಖ್ಯ ಬೇಡಿಕೆ. ಆದರೆ ನರೇಂದ್ರ ಮೋದಿಯವರ ನೇತೃತ್ವದ ಎನ್‍ಡಿಎ ಸರಕಾರಕ್ಕೆ ಏನಾಗಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಒಬ್ಬ ಮಂತ್ರಿಯ ರಾಜೀನಾಮೆ ಪಡೆಯಲು ಸರಕಾರಕ್ಕೆ ಸಾಧ್ಯವಿಲ್ಲವೇ? ಧರ್ಮೇಂದ್ರ ಪ್ರಧಾನ್ ಅಷ್ಟು ದೊಡ್ಡ ವ್ಯಕ್ತಿಯೇ? ಪ್ರಭಾವಶಾಲಿಯೇ? ಒಬ್ಬನ ರಾಜಕೀಯ ಭವಿಷ್ಯಕ್ಕಾಗಿ ಲಕ್ಷಾಂತರ ಮಕ್ಕಳ ಭವಿಷ್ಯವನ್ನು ನಾಶಪಡಿಸಬೇಕಾ? ಸಣ್ಣ ಮಕ್ಕಳೂ ಈಗ ಈ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸುತ್ತಿದ್ದಂತೆ ಸರಕಾರ ಮಾಡಬೇಕಿದ್ದ ಮೊದಲ ಕೆಲಸ ಶಿಕ್ಷಣ ಸಚಿವರ ಬದಲಾವಣೆ. ಅದನ್ನು ಯಾರೋ ಹೇಳಿ ಕೇಳಿ ಮಾಡಬೇಕಾಗಿರಲಿಲ್ಲ. ಸರಕಾರಕ್ಕೆ ವಿದ್ಯಾರ್ಥಿಗಳ ಮೇಲೆ ಕಾಳಜಿ ಇದ್ದಿದ್ದರೆ ಮೊದಲ ದಿನವೇ ಅದನ್ನು ಮಾಡಬೇಕಿತ್ತು. 21 ವಿದ್ಯಾರ್ಥಿಗಳ ಹೆಣ ಬಿದ್ದರೂ ಶಿಕ್ಷಣ ಸಚಿವನನ್ನು ಸಂಪುಟದಲ್ಲಿ ಇಟ್ಟುಕೊಳ್ಳುವುದು ಸರಕಾರಕ್ಕೆ ನಾಚಿಕೆಗೇಡಿನ ವಿಷಯ ಎಂದು ಸ್ವತಃ ಮೋದಿಯವರಿಗೇ ಅನ್ನಿಸಬೇಕಿತ್ತು ಎಂದು ತಿಳಿಸಿದ್ದಾರೆ.
ನಮ್ಮ ಪ್ರಧಾನಿ ಮೋದಿಯವರನ್ನು ಅವರ ಬೆಂಬಲಿಗರು ವಿಶ್ವಗುರು ಎಂದು ಹೇಳುತ್ತಾರೆ. ಅವರನ್ನು ವಿಶ್ವನಾಯಕ ಎಂದು ಬಿಂಬಿಸುತ್ತಾರೆ. ನಮ್ಮ ದೇಶದ ಪ್ರಧಾನಿ ವಿಶ್ವನಾಯಕರಾಗುವುದು ನಮಗೆ ಹೆಮ್ಮೆಯ ವಿಷಯವೇ. ಆದರೆ ತನ್ನದೇ ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಯಲ್ಲಿ ನಿಂತು ನ್ಯಾಯಕ್ಕಾಗಿ ಬೇಡುತ್ತ ಲಾಠಿ, ಬೂಟಿನೇಟು ತಿನ್ನುತ್ತಿರುವಾಗ ಪ್ರಧಾನಿ ಮೋದಿಯವರು ವಿಶ್ವನಾಯಕ ಎಂದು ಹೇಳಿಕೊಳ್ಳುವ ನೈತಿಕತೆ ಉಳಿಸಿಕೊಳ್ಳುತ್ತಾರೆಯೇ? ಇಷ್ಟು ಸಣ್ಣ ವಿಷಯ ಇವರಿಗೆ ಅರ್ಥವಾಗುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ವಿದ್ಯಾರ್ಥಿಗಳ ಬೆನ್ನಿಗೆ ಇಡೀ ದೇಶದ ಜನತೆ ಇದೆ. ಕನ್ನಡದ ಜನತೆಯೂ ಇದೆ. ಈ ಆಂದೋಲನ ಯಶಸ್ವಿಯಾಗಲಿ, ಶಿಕ್ಷಣ ವ್ಯವಸ್ಥೆ ಸರಿಯಾದ ದಾರಿಗೆ ಬರಲಿ. ಎಲ್ಲದಕ್ಕಿಂತ ಮುಖ್ಯವಾಗಿ ನೀಟ್ ಎಂಬ ವ್ಯವಸ್ಥೆಯೇ ರದ್ದಾಗಲಿ, ನಮಗೆ ಸಿಇಟಿ ಪರೀಕ್ಷೆಯೇ ಸಾಕು ಎಂದು ಆಗ್ರಹಿಸಿದ್ದಾರೆ.