‘ಬಿಪಿಎಲ್ ಪಡಿತರ ಚೀಟಿ’ ಆದಾಯ ಮಿತಿ 3 ಲಕ್ಷ ರೂ.ಗಳಿಗೆ ಹೆಚ್ಚಿಸಲು ಕ್ರಮ : ಸಚಿವ ಕೆ.ಎಚ್.ಮುನಿಯಪ್ಪ

Update: 2026-07-24 20:17 IST

ಬೆಂಗಳೂರು : ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಪಡಿತರ ಚೀಟಿ ಪಡೆಯಲು ನಿಗದಿಪಡಿಸಿರುವ 1.20ಲಕ್ಷ ರೂ.ವಾರ್ಷಿಕ ಆದಾಯದ ಮಿತಿಯನ್ನು ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸಿನಂತೆ 3 ಲಕ್ಷ ರೂ.ಗಳಿಗೆ ಹೆಚ್ಚಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ಶುಕ್ರವಾರ ನಗರದ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಕಚೇರಿಯಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಜೊತೆಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಕೇಂದ್ರ ಸರಕಾರದ ಮಾನದಂಡಗಳ ಅನ್ವಯ ಪಡಿತರ ಚೀಟಿಗಳ ಪರಿಶೀಲನೆ ನಡೆಯುತ್ತಿದ್ದು, ನಾವು ಯಾವ ಪಡಿತರ ಚೀಟಿಯನ್ನು ರದ್ದು ಮಾಡುವುದಿಲ್ಲ. ಬಿಪಿಎಲ್‍ಗೆ ಅನರ್ಹವಾಗಿರುವ ಪಡಿತರ ಚೀಟಿಗಳನ್ನು ಎಪಿಎಲ್‍ಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಮುನಿಯಪ್ಪ ಹೇಳಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಅನ್ನಭಾಗ್ಯ ಯೋಜನೆಯ ಮೂಲಕ ರಾಜ್ಯದ ಸುಮಾರು 4.42 ಕೋಟಿ ಫಲಾನುಭವಿಗಳಿಗೆ ಪ್ರತಿ ತಿಂಗಳು 10 ಕೆಜಿ ಪಡಿತರ ವಿತರಣೆ ಮಾಡುತ್ತಿದೆ. ಇದರ ಮೂಲಕ ನಮ್ಮ ಸರಕಾರವು ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯೂ ಪ್ರಮುಖವಾಗಿದೆ. ಯಾರೊಬ್ಬರೂ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಅಂದಿನ ನಮ್ಮ ಯುಪಿಎ ಸರಕಾರ ಆಹಾರ ಭದ್ರತೆ ಕಾಯ್ದೆಯನ್ನು ಜಾರಿಗೊಳಿಸಿದ್ದರಿಂದ, ಈ ಮಹತ್ವದ ಯೋಜನೆ ಅನುಷ್ಠಾನವಾಗಿದೆ ಎಂದು ಮುನಿಯಪ್ಪ ತಿಳಿಸಿದರು.

ಕಾನೂನು ಮಾಪನ ಶಾಸ್ತ್ರ ಇಲಾಖೆಯ ಮೂಲಕ ತೂಕ ಮತ್ತು ಅಳತೆಯಲ್ಲಿ ತಪಾಸಣೆ ಮಾಡಲು ಸುಮಾರು 33 ವಾಹನಗಳನ್ನು ಇಲಾಖೆಗೆ ಹಂಚಿಕೆ ಮಾಡಿದ್ದು ಇಲ್ಲಿಯವರೆಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯು ಕಳೆದ ಮೂರು ವರ್ಷದಲ್ಲಿ ಸುಮಾರು 250 ಕೋಟಿರೂ.ಗಳ ರಾಜಸ್ವ ಸಂಗ್ರಹ ಮಾಡಿದ್ದು ಗ್ರಾಹಕರಿಗೆ ತೂಕದಲ್ಲಿ ಯಾವುದೆ ವ್ಯತ್ಯಾಸಗಳು ಕಾಣದಂತೆ ಕ್ರಮ ವಹಿಸುತ್ತಿದೆ ಎಂದು ಅವರು ತಿಳಿಸಿದರು

ಪಡಿತರ ವಿತರಣೆಯಲ್ಲಿ ಕಾಳಸಂತೆಯನ್ನು ತಡೆಯಲು ಕ್ರಮ ವಹಿಸಲಾಗಿದ್ದು, ಗೋದಾಮುಗಳಿಗೆ ಸಿಸಿ ಕ್ಯಾಮರಾ ಹಾಗೂ ಪಡಿತರ ವಾಹನಗಳಿಗೆ ಅಳವಡಿಸಿರುವ ಜಿಪಿಎಸ್ ಕುರಿತು ನಿಗಾವಹಿಸಲು ಕಮಾಂಡ್ ಕಂಟ್ರೋಲ್ ರೂಂ ಅನ್ನು ಕೇಂದ್ರ ಕಚೇರಿಯಲ್ಲಿ ನಿರ್ಮಿಸಲಾಗುತ್ತಿದೆ ಎಂದು ಮುನಿಯಪ್ಪ ಹೇಳಿದರು.

ಎಂಎಸ್‍ಪಿ ಯೋಜನೆಯಡಿ 5.60 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಖರೀದಿಸಿದ್ದು ಅದನ್ನು ಶುದ್ದೀಕರಿಸಿ ಗ್ರಾಹಕರಿಗೆ ವಿತರಣೆ ಮಾಡಲಾಗುತ್ತಿದೆ. ಇಂದಿರಾ ಕಿಟ್ ನೀಡಲು ಟೆಂಡರ್ ಪ್ರಕ್ರಿಯೆಯು ನಡೆಯುತ್ತಿದ್ದು ಅಂತಿಮ ಹಂತದಲ್ಲಿ ಇದೆ. ಮುಂದಿನ ಎರಡು ತಿಂಗಳಲ್ಲಿ ಕಿಟ್ ವಿತರಣೆಗೆ ಕಾರ್ಯರೂಪಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಇಂದಿರಾ ಕಿಟ್ ಬಹಳ ದೊಡ್ಡಮಟ್ಟದ ಯೋಜನೆ ಸುಮಾರು 6000 ಕೋಟಿ ರೂ.ಗಳು ವೆಚ್ಚವಾಗಲಿದ್ದು ಬಹಳ ಸೂಕ್ಷ್ಮವಾಗಿ ನಡೆಸಬೇಕಾಗಿರುವುದರಿಂದ ಸ್ವಲ್ಪ ವಿಳಂಬವಾಗುತ್ತಿದೆ. ಆದಷ್ಟು ಬೇಗ ಈ ಪ್ರಕ್ರಿಯೆಯು ಅಂತಿಮವಾಗಲಿದೆ ಎಂದು ಮುನಿಯಪ್ಪ ಹೇಳಿದರು.

ಕಾಳಸಂತೆಗೆ ಮಾರಾಟವಾಗುವ ಪಡಿತರ ಅಕ್ರಮ ತಡೆಯಲು ಸುಮಾರು 1497 ಎಫ್‍ಐಆರ್ ದಾಖಲಿಸಿದ್ದು, 50 ಕೋಟಿ ರೂ.ಗಳ ಪಡಿತರ ವಶಪಡಿಸಿಕೊಂಡಿದ್ದೇವೆ. ರಾಜ್ಯಾದ್ಯಂತ ಇರುವ 20,259 ನ್ಯಾಯಬೆಲೆ ಅಂಗಡಿಗಳಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರು, ಗ್ಯಾರಂಟಿ ಯೋಜನೆಯ ಅಧ್ಯಕ್ಷರ ಭಾವಚಿತ್ರ ಹಾಗೂ ಅವರ ದೂರವಾಣಿ ಸಂಖ್ಯೆಯನ್ನು ಅಳವಡಿಸಲು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದರು.

ನ್ಯಾಯಬೆಲೆ ಅಂಗಡಿಗಳನ್ನು ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೂ ತೆರೆದು ಪಡಿತರ ವಿತರಿಸಲು ಸೂಚಿಸಲಾಗಿದ್ದು, ತಪ್ಪಿದ್ದಲ್ಲಿ ಇಲಾಖೆಯ ಸಹಾಯವಾಣಿ ಸಂಖ್ಯೆ 1967 ಸಹಾಯವಾಣಿಗೆ ಕರೆ ಮಾಡಿ ದೂರು ನೀಡುವಂತೆ ಮುನಿಯಪ್ಪ ತಿಳಿಸಿದರು.

ಮುಂದಿನ ದಿನಗಳಲ್ಲಿ ಫಲಾನುಭವಿಗಳಿಗೆ ಕರ್ತವ್ಯ ಆಪ್ ನ ಮಾದರಿಯಂತೆ ಸ್ವತಃ ಫಲಾನುಭವಿಗಳೆ ಮೊಬೈಲ್ ಮೂಲಕ ಇಕೆವೈಸಿ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ವಿಚಾರ ಚರ್ಚೆ ಹಂತದಲ್ಲಿದೆ. ಬೆಂಗಳೂರು ನಗರದಲ್ಲಿನ ನ್ಯಾಯಬೆಲೆ ಅಂಗಡಿಗಳ ಹಾಗೂ ಅಧಿಕಾರಿಗಳ ಮೇಲೆ ಬಂದ ದೂರುಗಳ ಮೇಲೆ ತ್ವರಿತ ಕ್ರಮ ಕೈಗೊಳ್ಳಲು ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುನಿಯಪ್ಪ ಹೇಳಿದರು.

ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ, ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ, ಎಸ್.ಆರ್.ಪಾಟೀಲ್, ಡಾ.ಪುಷ್ಪಾ ಅಮರನಾಥ್, ಎಸ್.ಆರ್.ಮೆಹ್ರೋಝ್ ಖಾನ್, ಕೃಷ್ಣಪ್ಪ, ರಮೇಶ್ ಕುಮಾರ್, ಪ್ರಜಾಸೇವಾ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ, ಸರಕಾರದ ಕಾರ್ಯದರ್ಶಿ ಕನಗವಲ್ಲಿ, ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಗದೀಶ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಎಚ್.ನಟರಾಜ್, ನಿಗಮದ ಪ್ರಧಾನ ವ್ಯವಸ್ಥಾಪಕ ಮಂಜುನಾಥ್ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News