×
Ad

ʼಕಾಂಗ್ರೆಸ್ಸಿನಲ್ಲಿ 4 ಪವರ್ ಸೆಂಟರ್ʼ; ಜಿಬಿಎ, ಸ್ಥಳೀಯ ಸಂಸ್ಥೆ ಜೊತೆಗೆ ವಿಧಾನಸಭೆ ಚುನಾವಣೆ ಎದುರಿಸಿ : ವಿಜಯೇಂದ್ರ ಸವಾಲು

Update: 2026-06-05 18:53 IST

ಬೆಂಗಳೂರು : ‘ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಧೈರ್ಯವಿದ್ದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಸ್ಥಳೀಯ ಸಂಸ್ಥೆ ಜೊತೆಗೆ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆ ಎದುರಿಸಬೇಕು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸವಾಲು ಹಾಕಿದ್ದಾರೆ.

ಶುಕ್ರವಾರ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು ವರ್ಷದಿಂದ ಸಿಎಂ ಕುರ್ಚಿಗೆ ಹಗ್ಗ ಜಗ್ಗಾಟ ನಡಿಯುತ್ತಿತ್ತು. ಇದೀಗ ಸಿಎಂ ಆಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ 48 ಗಂಟೆಗಳ ಒಳಗೆ ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿದ್ದಾರೆ. ಇನ್ನೂ ಈ ಸರಕಾರ ಕಚ್ಚಾಟದಿಂದ ಹೊರಗೆ ಬರುವ ಲಕ್ಷಣ ಇಲ್ಲ ಎಂದು ಟೀಕಿಸಿದರು.

ರಾಜ್ಯದಲ್ಲಿ ಏನೂ ಅಭಿವೃದ್ಧಿ ಕಾರ್ಯ ಮಾಡದ ಕಾಂಗ್ರೆಸ್ ಸರಕಾರ ಇನ್ನೂ ಕಚ್ಚಾಟದಿಂದ ಹೊರಗೆ ಬಂದಿಲ್ಲ. ಈ ಸರಕಾರದ ಬಗ್ಗೆ ಜನ ಬೇಸತ್ತಿದ್ದಾರೆ. ರೈತರು ಬೀದಿದಿಳಿದು ಹೋರಾಟ ಮಾಡುತ್ತಿದ್ದಾರೆ. ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವಲ್ಲಿ ಸಿಎಂ ಶಿವಕುಮಾರ್ ವಿಫಲರಾಗಿದ್ದಾರೆ. ಡಿಕೆಶಿ, ಬಿ.ಕೆ ಹರಿಪ್ರಸಾದ್, ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಹೀಗೆ ನಾಲ್ಕು ಅಧಿಕಾರ ಕೇಂದ್ರಗಳ ನಡುವೆ ಕಾಂಗ್ರೆಸ್ ಒದ್ದಾಡುತ್ತಿದೆ ಎಂದರು.

ಬಡವರು ಮತ್ತು ರೈತರಿಗೆ ಏನೂ ಒಳಿತು ಮಾಡಲು ಆಗದ ಸರಕಾರ ರಾಜ್ಯವನ್ನು ಗಾಂಧಿ ಕುಟುಂಬಕ್ಕೆ ಮಾರಾಟ ಮಾಡುವ, ಅಡಮಾನ ಇಡುವ ಹಾಗೂ ಬೊಕ್ಕಸದಿಂದ ಲೂಟಿ ಮಾಡುವ ಕೆಲಸವನ್ನು ಮೂರು ವರ್ಷದಿಂದ ಮಾಡುತ್ತಿದ್ದಾರೆ. ಅದು ಈಗ ಮುಂದುವರಿಯಲಿದೆ. ಅದಕ್ಕೆ ಬೇಕಾದ ಷಡ್ಯಂತ್ರ ನಡೆಯುತ್ತಿದೆ ಎಂದು ಅವರು ಟೀಕಿಸಿದರು.

ಸರಕಾರ ತೊಲಗಲಿ: ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿದ್ದಾರೆ. ಕೆ.ಎಚ್.ಮುನಿಯಪ್ಪ, ಕೆ.ಜೆ.ಜಾರ್ಜ್ ತಮ್ಮ ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿಗಿಂತ ಇವರಿಗೆ ಅಧಿಕಾರದ ಹಪಾಹಪಿ ಹೆಚ್ಚಾಗಿದೆ. ಇದರಿಂದ ಬೇಸತ್ತ ಜನ ವಿಧಾನಸಭಾ ಚುನಾವಣೆ ಆಗಿ ದರಿದ್ರ ಈ ಸರಕಾರ ತೊಲಗಬೇಕು ಎಂದು ಬಯಸಿದ್ದಾರೆಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News