ಒಬ್ಬ ವಯಸ್ಕ ವ್ಯಕ್ತಿ ಅವನ ಶಕ್ತಿ ಮತ್ತು ಮಾನಸಿಕ ಸ್ಥಿತಿ ಬಲವಾಗಿ ಪ್ರದರ್ಶನಗೊಳ್ಳುವ ಸಮಯದಲ್ಲಿ ಅವನಿಗೆ ಬಾಲ್ಯದ ಎಲ್ಲಾ ಮಾನಸಿಕ, ಭಾವನಾತ್ಮಕ ಮತ್ತು ಬೌದ್ಧಿಕ ಪ್ರಭಾವಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಲಿರುವ ಎಲ್ಲಾ ಸಾಧ್ಯತೆಗಳು ಉಂಟು. ಅದರಲ್ಲಿಯೂ ವೈಯಕ್ತಿಕವಾಗಿ ಚಿಂತನೆಗಳನ್ನು ಮಾಡುವ ರೂಢಿಯನ್ನು ಬೆಳೆಸಿಕೊಂಡಲ್ಲಿ ತಾತ್ವಿಕವಾಗಿ ಆಲೋಚನೆಗಳನ್ನು ಮಾಡಲು ತೊಡಗಿರುತ್ತಾರೆ. ಇದು ಸಾಧಾರಣವಾಗಿ ಪ್ರೌಢಶಾಲೆಯ ಅವಧಿಯಲ್ಲಿಯೇ ರೂಪುಗೊಳ್ಳಲು ಸಾಧ್ಯ. ಇಂತಹ ಸಂದರ್ಭದಲ್ಲಿಯೇ ವ್ಯಕ್ತಿ ತಾನೇ ಸರಿ ಎನ್ನುವ ಮನೋಭಾವದಿಂದ ವಾಸ್ತವ ಏನಿದೆ ಎಂಬುದರ ಕಡೆಗೆ ಯೋಚಿಸತೊಡಗಿದರೆ ಆ ವ್ಯಕ್ತಿಯ ಚಿಂತನಾಕ್ರಮದಲ್ಲಿಯೇ ಮಹತ್ತರ ಬದಲಾವಣೆ ಉಂಟಾಗುತ್ತದೆ.

ಅದರಲ್ಲಿಯೂ ಭಾರತೀಯ ದಾರ್ಶನಿಕ ಪರಂಪರೆಯ ಅತ್ಯಂತ ಸುಂದರ ಗುಣಗಳಲ್ಲಿ ಒಂದು ಪ್ರಶ್ನಿಸುವಿಕೆ. ಉಪನಿಷತ್ತುಗಳ ಸಂವಾದದಿಂದ ಬುದ್ಧನ ವಿಚಾರಣೆಯವರೆಗೆ, ಜೈನರ ಅನೇಕಾಂತವಾದದಿಂದ ಬಸವಣ್ಣನ ಅನುಭವ ಮಂಟಪದವರೆಗೆ; ಸತ್ಯವನ್ನು ಕೇವಲ ಸ್ವೀಕರಿಸದೆ ಪರಿಶೀಲಿಸುವ ಪರಂಪರೆ ಭಾರತೀಯರಿಗಿದೆ. ಆದರೆ ಪರಂಪರೆಯನ್ನು ಹೆಮ್ಮೆಯ ವಸ್ತುವಾಗಿಸುವುದಕ್ಕಿಂತ ವಿಚಾರಿಸುವ ವಿಧಾನವಾಗಿ ಮರಳಿ ಪಡೆಯಬೇಕಿದೆ. ಇದು ವ್ಯಕ್ತಿಗತವಾಗಿಯೂ ಮತ್ತು ಸಾಮಾಜಿಕವಾಗಿಯೂ ಕೂಡಾ ತುಂಬಾ ಅಗತ್ಯವೂ ಮತ್ತು ಸರಾಗ ಜೀವನ ವಿಧಾನವೂ ಆಗುವಂತಹ ಲಕ್ಷಣಗಳನ್ನು ಹೊಂದಿದೆ.

‘ನನ್ನ ಧರ್ಮ ಏನು ಹೇಳುತ್ತದೆ?’ ಎಂಬುದರ ಜೊತೆಗೆ, ‘ಇದು ಮನುಷ್ಯನಿಗೆ ಏನು ಮಾಡುತ್ತದೆ?’ ಎಂದು ಕೂಡಾ ಆಲೋಚಿಸುವಂತಾಗಬೇಕು. ‘ನನ್ನ ಪಕ್ಷ ಏನು ಹೇಳುತ್ತದೆ?’ ಎಂಬುದರ ಜೊತೆಗೆ ‘ಇದು ನ್ಯಾಯವೇ?’ ಎಂದು ಕೇಳುವ ಮನಸ್ಸು ಬೇಕಿದೆ.

ಆಗಲೇ ಮನಸ್ಸು ಸಾವಯವವಾಗಿ ಬೇರು ಮತ್ತು ಹೊಸ ಚಿಗುರು ಎರಡನ್ನೂ ಹೊಂದಲು ಸಾಧ್ಯವಾಗುವುದು.

ಒಂದು ಸಮಾಜ ಯಂತ್ರವಲ್ಲ; ಅದು ಜೀವವ್ಯವಸ್ಥೆ. ಕುಟುಂಬ, ಶಾಲೆ, ನೆರೆಹೊರೆ, ಮಾರುಕಟ್ಟೆ, ಧರ್ಮ, ಕಲೆ, ರಾಜಕೀಯ, ಮಾಧ್ಯಮ; ಎಲ್ಲವೂ ಪರಸ್ಪರ ಬೆಸೆದುಕೊಂಡಿರುವ ಅಂಗಗಳು.

ಕುಟುಂಬದಲ್ಲಿ ಪ್ರಶ್ನಿಸಲು ಅವಕಾಶವಿಲ್ಲದೆ ಶಾಲೆಯಲ್ಲಿ ವೈಚಾರಿಕ ಆಲೋಚನೆಯನ್ನು (critical thinking) ಕಲಿಸಲಾಗುವುದಿಲ್ಲ. ಶಾಲೆಯಲ್ಲಿ ಸಹಕಾರ ಕಲಿಸದೆ ಸಮಾಜದಲ್ಲಿ ಪ್ರಜಾಪ್ರಭುತ್ವ ನಿರೀಕ್ಷಿಸಲಾಗುವುದಿಲ್ಲ. ಮನೆಯೊಳಗೆ ಮಹಿಳೆ, ಮಗು, ವೃದ್ಧರ ಘನತೆಯನ್ನು ಗೌರವಿಸದೆ ಸಂವಿಧಾನದ ಸಮಾನತೆಯನ್ನು ವೇದಿಕೆಯ ಮೇಲೆ ಮಾತ್ರ ಆಚರಿಸಲಾಗುವುದಿಲ್ಲ.

ಹೀಗಾಗಿ ಭಾರತದ ಮನಸ್ಸಿನ ಬದಲಾವಣೆ ಮೇಲಿನಿಂದ ಹೇರಲ್ಪಡುವ ಯೋಜನೆ ಆಗಬಾರದು. ಅದು ಸಾವಯವ ರೂಪಾಂತರ (organic transformation) ಆಗಬೇಕು; ವ್ಯಕ್ತಿಯಿಂದ ಸಂಬಂಧಕ್ಕೆ, ಸಂಬಂಧದಿಂದ ಕುಟುಂಬಕ್ಕೆ, ಕುಟುಂಬದಿಂದ ಸಮುದಾಯಕ್ಕೆ, ಅಲ್ಲಿಂದ ಸಂಸ್ಥೆ ಮತ್ತು ಆಡಳಿತಕ್ಕೆ ವಿಸ್ತಾರಗೊಳ್ಳಬೇಕು.

ಭಾರತಕ್ಕೆ ಈಗ ಬೇಕಿರುವುದು ಗೆಲ್ಲುವ ಮನಸ್ಸು ಅಲ್ಲ. ಭಾರತದ ಮನಸ್ಸಿಗೆ ಇನ್ನೊಬ್ಬರನ್ನು ಸೋಲಿಸುವ ಶಕ್ತಿ ಮಾತ್ರ ಖಂಡಿತ ಬೇಕಿಲ್ಲ. ಭಯಪಡದೆ ಪ್ರಶ್ನಿಸುವ ಧೈರ್ಯ, ತಪ್ಪನ್ನು ಒಪ್ಪಿಕೊಳ್ಳುವ ಪ್ರಬುದ್ಧತೆ, ಭಿನ್ನತೆಯನ್ನು ಸಹಿಸುವ ನರಶಕ್ತಿ, ಇನ್ನೊಬ್ಬರ ನೋವನ್ನು ಅನುಭವಿಸುವ ಸಹಾನುಭೂತಿ, ತನ್ನದೇ ನಂಬಿಕೆಯನ್ನು ಪರಿಶೀಲಿಸುವ ಬೌದ್ಧಿಕ ವಿನಯ ಮತ್ತು ಒಟ್ಟಾಗಿ ಬದುಕುವುದನ್ನು ಕಲಿಯುವ ಸಾವಯವ ಬುದ್ಧಿಮತ್ತೆ ಬೇಕಿದೆ. ಈ ಮಾನಸಿಕ ಸಾಮರ್ಥ್ಯಗಳು ಹಿಂದೆ ಇರಲಿಲ್ಲ ಎಂದಲ್ಲ. ಆದರೆ ಅದು ಎಲ್ಲೆಲ್ಲಿಯೋ, ಆಯ್ದ ಕೆಲವೇ ವ್ಯಕ್ತಿಗಳಲ್ಲಿಯೋ ಇದ್ದಿದ್ದು ಈಗ ಎಲ್ಲರಲ್ಲಿಯೂ ಸಂಕಲಿತ ಮಾನಸಿಕ ಸಾಮರ್ಥ್ಯವಾಗಿ ಬೇಕಿದೆ.

ದೇಶದ ಆರೋಗ್ಯ ಜಿಡಿಪಿಯಲ್ಲಿ ಮಾತ್ರ ಕಾಣುವುದಿಲ್ಲ. ಅದರ ಜನರು ಪರಸ್ಪರ ಹೇಗೆ ಮಾತನಾಡುತ್ತಾರೆ, ಭಿನ್ನಾಭಿಪ್ರಾಯವನ್ನು ಹೇಗೆ ನಿಭಾಯಿಸುತ್ತಾರೆ, ದುರ್ಬಲರನ್ನು ಹೇಗೆ ನಡೆಸಿಕೊಳ್ಳುತ್ತಾರೆ, ಮಕ್ಕಳಿಗೆ ಯಾವ ಮನಸ್ಸನ್ನು ಹಸ್ತಾಂತರಿಸುತ್ತಾರೆ ಎಂಬುದರಲ್ಲಿಯೂ ಕಾಣುತ್ತದೆ. ಭಾರತದ ಮನಸ್ಸಿಗೆ ಈಗ ಹೊಸ ಶತ್ರು ಬೇಕಿಲ್ಲ. ಹೊಸ ಕನ್ನಡಿ ಬೇಕಿದೆ. ಆ ಕನ್ನಡಿಯಲ್ಲಿ ಇತರರು ಹೇಗಿದ್ದಾರೆ? ಎಂದು ನೋಡುವುದಕ್ಕಿಂತ; ನಾವು ಏನಾಗುತ್ತಿದ್ದೇವೆ? ಎಂದು ಕೇಳಿಕೊಳ್ಳುವ ಧೈರ್ಯ ಬೇಕಿದೆ. ಖಂಡಿತವಾಗಿಯೂ ಇದು ಆರಂಭವಾಗಬೇಕಿರುವುದು ವ್ಯಕ್ತಿ ಮತ್ತು ವ್ಯಕ್ತಿಗಳ ನಡುವಿನ ಸಂಬಂಧಗಳಲ್ಲಿ ಮತ್ತು ಕುಟುಂಬದ ಮಾನಸಿಕ ವಾತಾವರಣದಲ್ಲಿ. ಸಾಮಾನ್ಯವಾಗಿ ಲೌಕಿಕ ಮತ್ತು ಭೌತಿಕ ವಿಷಯಗಳನ್ನು ಗಂಭೀರವಾಗಿ ಗಮನಿಸುವ ಪೋಷಕರು ಮಕ್ಕಳ ಮತ್ತು ಕುಟುಂಬದ ಮಾನಸಿಕ, ಭಾವನಾತ್ಮಕ, ಭೌದ್ಧಿಕ ಅಗತ್ಯಗಳು ಹಾಗೂ ಸಂಬಂಧಗಳು ತಾಂತ್ರಿಕ ಮತ್ತು ತಾತ್ವಿಕವಾಗಿ ನಡೆಯುವ ವಿಧಾನಗಳನ್ನು ಪರಿಶೀಲಿಸಿಕೊಳ್ಳಬೇಕಿರುತ್ತದೆ. ತಾತ್ವಿಕವಾಗಿ ಹರಳುಗಟ್ಟುವ ಚಿಂತನೆಗಳು ತಾಂತ್ರಿಕವಾಗಿ ನಿಭಾಯಿಸುವ ರೀತಿಗಳಲ್ಲಿ ವ್ಯಕ್ತವಾಗುತ್ತವೆ. ಅದರ ಮೊದಲ ತಾತ್ವಿಕ ಮತ್ತು ತಾಂತ್ರಿಕ ವಿಧಾನವೇ ತನ್ನನ್ನು ತಾನು ಪ್ರಶ್ನಿಸಿಕೊಳ್ಳುವ ಸಾಮರ್ಥ್ಯ. ತನ್ನ ನಡೆ, ನುಡಿ ಮತ್ತು ವರ್ತನೆಗಳನ್ನು ತಾನೇ ಗಮನಿಸಿಕೊಳ್ಳುವ ರೀತಿ ವ್ಯಕ್ತಿಯಲ್ಲಿ ಕನ್ನಡಿಯಲ್ಲಿ ನೋಡಿಕೊಳ್ಳುವ ಧೈರ್ಯ ಮಾಡುತ್ತಾನೆ.

(ಅಂಕಣಕಾರರು: ಹಿರಿಯ ಬರಹಗಾರರು, ಚಿಂತಕರು)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಯೋಗೇಶ್ ಮಾಸ್ಟರ್,

contributor