ಅರಾಜಕತೆಗೆ ಮುನ್ನ
ಪ್ರಜೆಗಳು ನಿರಂಕುಶಮತಿಗಳಾಗಬೇಕು. ಆಗ ಮಾತ್ರ ನಿರಂಕುಶಪ್ರಭುತ್ವವನ್ನು ಎದುರಿಸಬಹುದು. ಅರಾಜಕತೆಯ ಹೊಸ್ತಿಲಿನಲ್ಲಿ ಭಾರತವಿದೆಯೆಂಬ ಪರಿಸ್ಥಿತಿ ಈಗಿದೆ. ಈ ಕಪ್ಪುಮೋಡಗಳು ಇನ್ನಷ್ಟು ಕಾಡುವ ಮೊದಲೇ ಜನರು ಎಚ್ಚೆತ್ತುಕೊಳ್ಳದಿದ್ದರೆ ಮೂರನೇ ಎರಡು ಬಹುಮತದ ಸರಕಾರದಿಂದ ಎಂತಹ ಸ್ಥಿತಿ ಬರಬಹುದು ಎಂಬುದನ್ನು ದೀರ್ಘವಾಗಿ ಯೋಚಿಸಬೇಕು. ಇನ್ನೊಬ್ಬರ ಕಾಲಿಗೆ ಬೀಳುವ ಕಲ್ಲು ನಮ್ಮ ಕಾಲಿಗೆ ಬಿದ್ದರೆ ಎಂತಹ ನೋವಾದೀತು ಎಂಬುದನ್ನು ಬಲ್ಲವರಿಗಷ್ಟೇ ಭವಿಷ್ಯ ಕಂಡೀತು. ಅರಾಜಕತೆ ಮತ್ತು ನಿರಂಕುಶ ಪ್ರಭುತ್ವ ಇವು ಕೈಕೈಹಿಡಿದು ನಡೆಯುವಾಗ ಪ್ರಜೆಗಳು ದುರಂತದ ಕಡೆಗೆ ನಡೆಯಬೇಕಾದೀತು. ಅಂತಹ ಅನಿವಾರ್ಯತೆಯಲ್ಲಿ ವಿವೇಕಿಗಳಿಗೆ ಆದಿಗೊಂದು ಅಂತ್ಯವಿದೆಯೆಂಬ ನಂಬಿಕೆಯಷ್ಟೇ ಬೆಳಕು ತೋರೀತೇನೋ?
ತಣ್ಣಗೆ ಯಾವುದೇ ಯೋಚನೆಯನ್ನು ಮಾಡಬೇಕಾದರೆ ಪುರಾಣಗಳನ್ನು ಆಶ್ರಯಿಸುವುದು ಒಳ್ಳೆಯದು. ಅಲ್ಲಿ ಬೇಕಷ್ಟು ರೂಪಕಗಳು ಸಿಗುತ್ತವೆ ಮಾತ್ರವಲ್ಲ ಒಳ್ಳೆಯದಾಗಲೀ, ಕೇಡಾಗಲೀ ಶಾಶ್ವತವಲ್ಲ, ಕಾಲವೊಂದೇ ಶಾಶ್ವತ ಎಂಬ ನಂಬಿಕೆ ದೃಢವಾಗುತ್ತದೆ. ಪುರಾಣಗಳು ಹೇಳಿದ ಕೃತ, ತ್ರೇತಾ ಮತ್ತು ದ್ವಾಪರ ಯುಗಗಳನ್ನು ಹೀಗೆಯೇ ನಾಟಕೀಯವಾಗಿ ಕೊನೆಗೊಳಿಸಲಾಗಿದೆ. ಆದರೆ ಅವು ರೂಪಕಗಳಷ್ಟೇ ಎಂದು ಗೊತ್ತಾಗಬೇಕಾದರೆ ಅವುಗಳ ಸೃಷ್ಟಿಯನ್ನು ಕೆಲವೇ ಸಾವಿರ ವರುಷಗಳ ಹಿಂದೆ ಮಾಡಲಾಗಿದೆಯೆಂಬುದನ್ನು ಗಮನಿಸಬೇಕು. ಪ್ರಳಯವಾಯಿತು ಆಗ ಆಲದ ಎಲೆಯ ಮೇಲೆ ಭಗವಂತ ತೇಲುತ್ತ ಮಲಗಿದ್ದನಂತೆ; ಶ್ರೀರಾಮ ತಮ್ಮಂದಿರೊಂದಿಗೆ ಸರಯೂ ನದಿಯಲ್ಲಿ ಮುಳುಗಿ ನಿರ್ಯಾಣ ಹೊಂದಿದನಂತೆ; ಕೃಷ್ಣ ಬೇಡನೊಬ್ಬನ ಬಾಣಕ್ಕೆ ಬಲಿಯಾದನಂತೆ; ಯಾದವೀ ಕಲಹದೊಂದಿಗೆ ದ್ವಾಪರದ ಕಥೆಯು ಮುಗಿಯಿತಂತೆ; ಕಲಿಯುಗವೆಂದು ನಂಬುವ ಈ ಕಾಲಕ್ಕೆ ಕಲ್ಕಿಯೆಂಬವನೊಬ್ಬ ಬಂದು ಅಂತ್ಯವನ್ನು ಕಾಣಿಸುತ್ತಾನಂತೆ. ಬೈಬಲ್ ನೋಹನ ಪ್ರಳಯ ಕಾಲದ ನೌಕೆಯಲ್ಲಿ ಎಲ್ಲ ಜೀವಿಗಳ ಒಂದೊಂದು ಸ್ಯಾಂಪಲ್‌ಗಳನ್ನು ತುಂಬಿಕೊಂಡು ರಕ್ಷಿಸಲಾಯಿತಂತೆ. ನಂಬಿಕೆಗೆ ಎಷ್ಟು ರೆಕ್ಕೆಗಳೋ? ಗೊತ್ತಿಲ್ಲ.
ಕಳೆದ 10-12 ವರ್ಷಗಳಲ್ಲಿ ಈ ದೇಶದಲ್ಲಿ ನಿಜವಾಗಿ ತೀವ್ರ ಘಾಸಿಗೊಂಡದ್ದು ಜನತೆ ಅಲ್ಲ, ಸಂವಿಧಾನ ಮತ್ತು ಕಾನೂನು. ಪ್ರಜಾಪ್ರಭುತ್ವದ ರಕ್ಷಣೆಗೆ ಅಗತ್ಯವಾಗಿರುವ ಈ ಎರಡು ವಿಶಿಷ್ಟ ವಿಚಾರಗಳು ತಮ್ಮನ್ನು ವಾಹಕವಾಗಿ ಆಡಳಿತ ನಡೆಸಬೇಕಾದವರ ನಿಯಂತ್ರಣದಲ್ಲಿ ನಲುಗಿವೆ. ಮೊನ್ನೆ ಮೊನ್ನೆ ನಡೆದ ರಾಜ್ಯಸಭಾ ಚುನಾವಣೆಗಳು ಆಳುವ ಪಕ್ಷವನ್ನು ಮೂರನೇ ಎರಡು ಬಹುಮತದ ಸನಿಹಕ್ಕೆ ಒಯ್ಯುತ್ತಿವೆ. ಇದಲ್ಲದೆ ನಮ್ಮ ಪ್ರತಿಪಕ್ಷಗಳ ಸಂಸದರು ಒಬ್ಬೊಬ್ಬರಾಗಿ ಆಳುವ ಪಕ್ಷಕ್ಕೆ ಆಹುತಿಯಾಗುತ್ತಿದ್ದಾರೆ. ತಾವು ಮಾಡುತ್ತಿರುವುದೇನು, ಅದರ ಪರಿಣಾಮವೇನು, ಅದರಿಂದ ಮುಂದಿನ ತಲೆಮಾರಿಗೆ ಒಳಿತಾಗುತ್ತದೆಯೇ ಮುಂತಾದ ಗಹನವಾದ ವಿಚಾರಗಳ ಗೋಜಿಗೆ ಹೋಗದೇ ಪ್ರಚೋದಕ ನೆಲೆಯಲ್ಲಿ ಇಂದು ತನಗೇನು ಲಾಭವಾಗುತ್ತದೆಯೆಂಬ ಏಕಮೇವ ಗುರಿಯತ್ತ ಬಹಳಷ್ಟು ಜನಪ್ರತಿನಿಧಿಗಳು ಸಾಗುತ್ತಿದ್ದಾರೆ. ಮತದಾರರ ಇಚ್ಛೆಯೇನಿದೆ ಮತ್ತು ಅದರಡಿ ತಾವು ನಿಭಾಯಿಸಬೇಕಾದ ಕರ್ತವ್ಯಗಳೇನು ಎಂಬುದು ಈಗ ಪಠ್ಯಪರಿವಿಡಿಯಲಿಲ್ಲ. ಒಮ್ಮೆ ಆಯ್ಕೆಯಾದರೆ ಮುಂದಿನ ಅವಧಿಯ ವರೆಗೆ ತಾವು ಏನು ಬೇಕಾದರೂ ಮಾಡಬಹುದೆಂಬ ನಹುಷಗರ್ವ ಜನಪ್ರತಿನಿಧಿಗಳಿಗಿದೆ. ಮುಂದಿನ ತಲೆಮಾರಿಗೆ ಅಂತಲ್ಲ, ಮುಂದಿನ ಚುನಾವಣೆಯ ವೇಳೆಗೆ ತಮ್ಮ ಗತಿ ಏನಾಗಬಹುದೆಂಬ ಪರಿವೆಯೇ ಇವರಿಗಿಲ್ಲ. ಮುಂದೆ ಏನು ಬೇಕಾದರೂ ಆಗಲಿ, ಅಧಿಕಾರವಿರುವಾಗ ದೇಶಕ್ಕೆ ಮತ್ತು ದೇಶದ ಜನರಿಗೆ ಎಷ್ಟು ಸಾಧ್ಯವೋ ಅಷ್ಟೂ ಹಾನಿಯನ್ನು ಮಾಡಿ ವೈಯಕ್ತಿಕ ಲಾಭವನ್ನು ಗಳಿಸಿ ದಾಟುವುದು ಕರ್ತವ್ಯವೆಂಬಂತೆ ನಡವಳಿಕೆಯಿದೆ. ಆಳುವ ಪಕ್ಷಕ್ಕೆ ಸೇರುವ ಪ್ರತಿಯೊಬ್ಬ ಸಂಸದನೂ ಅರಿತೋ ಅರಿಯದೆಯೋ ದೇಶನಾಶಕ್ಕೆ ತನ್ನ ಕೊಡುಗೆಯನ್ನು ನೀಡುತ್ತಿದ್ದಾನೆ.
ಸದ್ಯದ ಭಾರತದ ಸ್ಥಿತಿಯು ಅರಾಜಕತೆಗೆ ಮುನ್ನುಡಿಯ ರೂಪದಲ್ಲಿದೆ. ಇದನ್ನು ಹೇಳಿದರೆ ಇದೊಂದು ರಾಜಕೀಯ ನಿರ್ಣಯವೆಂದು ಹೇಳುವವರಿದ್ದಾರೆ. ಎಲ್ಲ ಕಾಲದಲ್ಲೂ ಯಾವುದೇ ಪರಿಸ್ಥಿತಿಗೆ ಪರ-ವಿರೋಧ ನೀತಿಯ ಬೇಕಷ್ಟು ಜನರಿರುತ್ತಾರೆ. 1975ರ ತುರ್ತುಸ್ಥಿತಿಯ ಪರ-ವಿರೋಧದ ಸಂಖ್ಯೆ ಸಾಕಷ್ಟಿತ್ತು. ಈಗಂತೂ ಜಗತ್ತಿನ ಅತೀ ಹೆಚ್ಚು ಜನಸಂಖ್ಯೆಯನ್ನು ಹೊತ್ತ ಭಾರತದಲ್ಲಿ ಈ ಸಂಖ್ಯೆ ಗಾಬರಿ ಹುಟ್ಟಿಸುವಷ್ಟಿರಬಹುದು. ಹಾಗಂತ ಇದೇನೂ ನಭೂತೋ ಎಂಬ ಸ್ಥಿತಿಯಲ್ಲ. ಇಂತಹ ಸ್ಥಿತಿ ಅನೇಕ ಬಾರಿ ಬಂದಿದೆ; ಹೋಗಿದೆ. ನಭವಿಷ್ಯತಿ ಖಂಡಿತಾ ಅಲ್ಲ. ಆಯಾಯ ಕಾಲದಲ್ಲಿ ಬದುಕುವ ಜನರ ಹಣೆಬರೆಹ ಇದ್ದಂತೆ ನಡೆಯುತ್ತದೆ. ಎಲ್ಲ ಕಾಲಕ್ಕೂ ಸಲ್ಲುವ ಅರಾಜಕತೆ ಹೇಗೆ ಉಗಮವಾಗುತ್ತದೆ ಮತ್ತು ವರ್ಧಿಸುತ್ತದೆ ಎಂಬುದಕ್ಕೆ ಕಾಲಾನುಕಾಲಕ್ಕೆ ನಿಯಮಗಳು ಬದಲಾಗುತ್ತಲೇ ಹೋಗಿವೆ. ಇಂದಿರಾಗಾಂಧಿ ಸ್ವಂತ ಅಧಿಕಾರಕ್ಕಾಗಿ ಕಾನೂನನ್ನು ಸೃಷ್ಟಿಸಿದರೆ, ಸಂವಿಧಾನವನ್ನು ಬದಲಾಯಿಸಿದರೆ, ಈಗ ನರೇಂದ್ರ ಮೋದಿಯವರ ಆಡಳಿತದಲ್ಲಿ ಅದು ದೇಶದ, ಪ್ರಜಾಪ್ರಭುತ್ವದ ಸರ್ವನಾಶಕ್ಕೆ ಕಾರಣವಾಗುತ್ತಿದೆ. ಚಿಂತಕ ರಾಮಚಂದ್ರ ಗುಹಾ ಹೇಳಿದಂತೆ ಮೋದಿ ಇರಬಹುದು, ಇಲ್ಲದಿರಬಹುದು, ಆದರೆ ದೇಶವನ್ನು ಪರಿಹರಿಸಲಾಗದ ಸಮಸ್ಯೆಗಳ ಕೂಪವಾಗಿಸಿದ್ದಂತೂ ನಿಜ. ಆಳುವ ಭಾರತೀಯ ಜನತಾ ಪಕ್ಷದ ಮುಂದಾಳತ್ವದಲ್ಲಿ ರಾಜಕೀಯ ಜಿಗುಪ್ಸೆ ಹಿಡಿಸುವಷ್ಟು ಆಳಕ್ಕಿಳಿದಿದೆ. ಈ ನೀಚತನದ ಸ್ಪರ್ಧೆಯಲ್ಲಿ ಉಳಿದ ಪಕ್ಷಗಳು ಹೇಳಿಕೊಳ್ಳುವಷ್ಟು ಹಿಂದೆ ಬಿದ್ದಿಲ್ಲ. ಏಕೆಂದರೆ ಅಗ್ಗದ ಲಾಭಕ್ಕಾಗಿ, ಸ್ವಾರ್ಥಕ್ಕಾಗಿ ತಮ್ಮ ಪಕ್ಷ, ಸಿದ್ಧಾಂತವನ್ನು ಬಲಿಗೊಟ್ಟು ನಿಷ್ಠೆ ಬದಲಾಯಿಸುವಂಥವರೇ ಈಗ ಪ್ರತಿಪಕ್ಷಗಳು. ಬಲಿಪಶುಗಳು ಮುಗ್ಧ ಮತ್ತು ಮೂರ್ಖ ಜನರು.
ಅರಾಜಕತೆಗೆ ಕಾರಣವೇನು? ಕೆಟ್ಟ ಆಡಳಿತವೇ? ಹೌದು. ಆದರೆ ಅಷ್ಟೇ ಅಲ್ಲ. ನಿರಂಕುಶ ಪ್ರಭುತ್ವವೂ ಕಾರಣ. ದೇಶದ ಒಳಿತನ್ನು ಜನರು ನಿರ್ಧರಿಸುವುದರ ಬದಲಿಗೆ ಆಯ್ಕೆಯಾದವರು ದೇಶದ ಭವಿಷ್ಯವನ್ನು ಜನರು ತಮ್ಮ ಸುಪರ್ದಿಗೆ ನೀಡಿದ್ದಾರೆಂಬ ಒಂದೇ ಒಂದು ನೆಪದಲ್ಲಿ ಇಷ್ಟಬಂದಂತೆ ನಡೆದಾಗ ಬೆಳೆಯೆಲ್ಲ ಹಾಳಾಗುವುದು ಖಚಿತ. ತನ್ನ ಹಿತ ಬೇರೆ ಲೋಕ ಹಿತ ಬೇರೆ. ತನಗೆ ಕಾಣುವ ಸತ್ಯ ಬೇರೆ; ಲೋಕಕ್ಕೆ ಕಾಣುವ ಸತ್ಯ ಬೇರೆ. ಇಂತಹ ನಿಯಮಗಳು ರಾಜಕಾರಣಕ್ಕೆ ಅನ್ವಯವಾಗುವುದಿಲ್ಲವೆಂದು ತಿಳಿದರೂ ತನಗೆ ಬೆಂಬಲ ನೀಡಿದ ಜನರು (ಸದ್ಯಕ್ಕೆ ಅವರನ್ನು ಮತದಾರರು ಎಂದು ಕರೆಯೋಣ) ತನ್ನನ್ನು ಕುರುಡು ಭಕ್ತಿಯಿಂದ ಪೂಜಿಸಿದರೂ ಅದನ್ನು ಬಂಡವಾಳವಾಗಿಸಿ ಅವರನ್ನು ಶೋಷಿಸಬಾರದಲ್ಲ! ಆದರೆ ಈಗೊಂದು ದಶಕದಿಂದ ನಡೆಯುತ್ತಿರುವುದೇ ಬೇರೆ: ಮತದಾರರು ಹಿಂದೆ-ಮುಂದೆ ಯೋಚಿಸದೆ ಮೋದಿಯವರನ್ನು (ನೆನಪಿಡಿ: ಅವರ ಪಕ್ಷವನ್ನಲ್ಲ!) ಬೆಂಬಲಿಸುತ್ತಿದ್ದಾರೆ. ಮತದಾರರಷ್ಟೇ ಅಲ್ಲ, ಆರಿಸಿಬಂದ ಇತರ ಜನಪ್ರತಿನಿಧಿಗಳೂ ಗೌರವಕ್ಕಿಂತಲೂ ಹೆಚ್ಚಾಗಿ ಭಯದಿಂದ ಮೋದಿಯವರನ್ನು ಬೆಂಬಲಿಸುತ್ತಿದ್ದಾರೆ ಮತ್ತು ಅದಕ್ಕೂ ಮೀರಿ ಸಮರ್ಥಿಸುತ್ತಿದ್ದಾರೆ. ನೀವು ಯಾವ ಮೋದಿ ಬೆಂಬಲಿಗರನ್ನೇ ಪ್ರಶ್ನಿಸಿ: ‘‘ನೀವೇಕೆ ಮೋದಿಯನ್ನು ಬೆಂಬಲಿಸುತ್ತೀರಿ? ಸಮರ್ಥಿಸುತ್ತೀರಿ? ಮೋದಿ ನಿಮಗಾಗಿ ಏನು ಮಾಡಿದ್ದಾರೆ? ಕಳೆದ ಒಂದು ದಶಕದಲ್ಲಿ ಅವರು ಮಾಡಿದ ಒಂದು ಒಳ್ಳೆಯ ಸಾಧನೆಯನ್ನು ಹೇಳಿ’’ ಎಂದರೆ ಅವರಲ್ಲಿ ಅಯೋಧ್ಯೆ ಮತ್ತದರ ಟಿಸಿಲುಗಳಾದ ಮತೀಯ ಚಟುವಟಿಕೆಗಳಲ್ಲದೆ ಯಾವ ತರ್ಕಬದ್ಧವಾದ ಉತ್ತರವಿಲ್ಲ. ಬೆಲೆಯೇರಿಕೆ ಬಗ್ಗೆ ಕೇಳಿ: ಜಾರಿಕೆಯಷ್ಟೇ ಉತ್ತರ. ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಿ: ಅವರು ಮರುಪ್ರಶ್ನೆ ಹಾಕುತ್ತಾರೆ. ಕಾಂಗ್ರೆಸ್ ಕಾಲದಲ್ಲಿ ಇರಲಿಲ್ಲವೇ?
ಹಾಗಾದರೆ ಕೇಡನ್ನು ವಿರೋಧಿಸಿ ಒಳಿತನ್ನು ಬಯಸಿ ಮತದಾರರು ಯಾವುದೋ ಆಸೆ-ಭರವಸೆಗಳ ಹಿಂದೆ ಹೋದರೆ ಹಾಗೆ ಆಯ್ಕೆಯಾದವನಿಗೆ ಬೆಂಬಲಿಗರನ್ನು ಶೋಷಿಸುವ ಹಕ್ಕಿದೆಯೇ? ಇದ್ದರೆ ಅದು ಒಳ್ಳೆಯ ಆಡಳಿತವಾಗುತ್ತದೆಯೇ? ದೇಶವು ಆಂತರಿಕವಾಗಿ, ಬಡತನದ ಬೇಗೆಯಲ್ಲಿದೆ. ಜಾಗತಿಕವಾಗಿ ನಿರಾಶಾದಾಯಕ ತಪ್ಪು ಹೆಜ್ಜೆಗಳ ಕುಣಿತದಲ್ಲಿದೆ. ಎಲ್ಲಿ ನಾವು ಎಡವುತ್ತಿದ್ದೇವೆ?
ಇದೊಂದು ಜಾಗತಿಕ ವಿದ್ಯಮಾನ. ಅಮೆರಿಕದ ಸ್ಥಿತಿಯನ್ನು ಗಮನಿಸಿದರೂ ಇದೇ ಸ್ಥಿತಿ: ಡೊನಾಲ್ಡ್ ಟ್ರಂಪ್ ಎಂಬ ವಿದೂಷಕನನ್ನು ಗೊತ್ತಿದ್ದೂ ಆಯ್ಕೆ ಮಾಡಿದ ಮನಸ್ಥಿತಿ ಯಾವುದು? ಇರಾನ್ ಯುದ್ಧ ತಪ್ಪೆಂದು ಗೊತ್ತಿದ್ದಾಗಲೂ ಬಹುಪಾಲು ಅಮೆರಿಕನ್ನರು ಟ್ರಂಪನ್ನು ಬೆಂಬಲಿಸಿದ್ದಾರೆ. ಯಾರಾದರೂ ಟೀಕಿಸಿದರೆ ಅದೊಂದು ದೊಡ್ಡ ಸುದ್ದಿಯಾಗುತ್ತದೆಯೇ ಹೊರತು ಕಾರ್ಯದಲ್ಲಿ ಫಲ ನೀಡುವುದಿಲ್ಲ. ಭಾರತದಲ್ಲಿ ಮೋದಿಯನ್ನು ಟೀಕಿಸುವ ಒಂದು ದೊಡ್ಡ ಚಿಂತಕರ ಸಮೂಹವಿದೆ. ಆದರೆ ಅದನ್ನು ಮೀರಿಸಿ ಬೆಂಬಲಿಸುವ ಬಹುವಿದ್ಯಾವಂತ, ಬುದ್ಧಿವಂತರ ತಂಡವೇ ಇದೆ. ಎರಡು ವಿರುದ್ಧ ಶಕ್ತಿಗಳು ಮುಖಾಮುಖಿಯಾದಾಗ ಆಡಳಿತದ ಬೆಂಬಲವಿರುವ, ಆಡಳಿತವನ್ನು ಬೆಂಬಲಿಸುವ, ಗುಂಪು ಗೆಲ್ಲುತ್ತದೆ. ಇದಕ್ಕೆ ಕಾರಣವೆಂದರೆ ಆಳುವ ವ್ಯವಸ್ಥೆಗೆ ತನ್ನ ಸರ್ವಶಕ್ತಿಯನ್ನು ಕ್ರೋಡೀಕರಿಸುವ ಅವಕಾಶವಿದೆ. ಮಿಲಿಟರಿ, ಪೊಲೀಸ್, ಅಲ್ಲದೆ ಸರಕಾರದ ನಿಯಂತ್ರಣದಲ್ಲಿರುವ ಎಲ್ಲ ಇಲಾಖೆಗಳು ಸರಕಾರವನ್ನು ಅದೆಷ್ಟೇ ತಪ್ಪು ಮಾಡಲಿ, ಅದರ ಅಧಿಕಾರವನ್ನು ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ. ಜೊತೆಗೆ ಇನ್ನೂ ಅಪಾಯಕಾರೀ ಲಕ್ಷಣವೆಂದರೆ ಸರಕಾರದ ಕಾರ್ಯಾಂಗ ಸರಕಾರದ ಎಲ್ಲ ತಪ್ಪು ನಿರ್ಣಯಗಳನ್ನೂ ಬೆಂಬಲಿಸುವುದು ಮತ್ತು ಸಮರ್ಥಿಸುವುದು. ಈಚೆಗೆ ಪ್ರಧಾನಿ ವಿದೇಶ ಪ್ರವಾಸದಲ್ಲಿದ್ದಾಗ ಮಾಧ್ಯಮದವರು ಕೆದಕಿದ ಪ್ರಶ್ನೆಗೆ ಉತ್ತರಿಸದೇ ಹೋದಾಗ ಎಲ್ಲರೂ ಟೀಕಿಸಿದರು. ಇದಕ್ಕೆ ಉತ್ತರವಾಗಿ ಸರಕಾರದ ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ಪ್ರತ್ಯೇಕವಾಗಿ ಪತ್ರಿಕಾಗೋಷ್ಠಿಯನ್ನು ನಡೆಸಿದರು. ಅಲ್ಲೂ ಕೇಳಿದ ಪ್ರಶ್ನೆಗೆ ಉತ್ತರಿಸದೆ ಭಾರತದ್ದೆಂದು ಹೇಳಿಕೊಳ್ಳುವ ‘ವಿಶಿಷ್ಟ ಸಂಸ್ಕೃತಿ’ ಮತ್ತು ‘ಜೀವನವಿಧಾನದ ದೀರ್ಘ ಪರಂಪರೆ’ಯನ್ನು ಶ್ಲಾಘಿಸಿದರು. ಅವರು ಆಡುವ ಮಾತುಗಳು ದೇಶದ ಮಾನವನ್ನು ಹೇಗಾದರೂ ರಕ್ಷಿಸುವ ಗಿಣಿಪಾಠದ ವಾಕ್ಯದಂತಿತ್ತು. ಇನ್ನೊಂದೆಡೆ ನ್ಯಾಯಾಂಗವು ಸರಕಾರಕ್ಕೆ ಅನಗತ್ಯ ಮತ್ತು ವಿಪರೀತ ಸೌಲಭ್ಯವನ್ನು ಎಲ್ಲ ರೀತಿಯಲ್ಲೂ ಅಂದರೆ ತನ್ನ ವ್ಯಾಪ್ತಿಯನ್ನೂ ಮೀರಿ ನೀಡುತ್ತಿದೆ. ವೈಯಕ್ತಿಕ ಪ್ರಕರಣ-ವಿವಾದಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ವರ್ತಿಸುವ ರೀತಿಗೂ ಸರಕಾರದ ನೇರ ಪಾತ್ರವಿರುವ ವಿವಾದಗಳಲ್ಲಿ ವರ್ತಿಸುವ ರೀತಿಗೂ ಅಜಗಜಾಂತರವಿದೆ. ಜಾಮೀನಿನಂತಹ ಸರಳ ಮಾನದಂಡದಲ್ಲೂ ನ್ಯಾಯಾಂಗವು ಸರಕಾರದ ಹಾದಿ, ಉದ್ದೇಶಗಳನ್ನು ಗಮನಿಸಿಯೇ ತನ್ನ ಮುದ್ರೆಯನ್ನು ಒತ್ತುತ್ತಿರುವುದು ಈಗ ಬಹಿರಂಗವಾಗಿದೆ.
ಒಂದು ಸರಕಾರವು ಜನರನ್ನು ಹಲವು ಬಗೆಯಲ್ಲಿ ನಿಯಂತ್ರಿಸುತ್ತ ಇರುತ್ತದೆ. ಇವುಗಳಲ್ಲಿ ಬುದ್ಧಿಜೀವಿಗಳಿಗೆ, ಕಲಾವಿದರಿಗೆ ನೀಡುವ ಪ್ರಶಸ್ತಿಗಳು. ಇವೇನೂ ಆಳುವ ಪಕ್ಷಗಳು ಪುಕ್ಕಟೆಯಾಗಿ ತಮ್ಮ ನಿಧಿಯಿಂದ ನೀಡುತ್ತಿಲ್ಲ. ಇವು ತೆರಿಗೆದಾರರ ಹಣ. ಆದರೆ ಇವನ್ನು ಜಾಗ್ರತೆಯಿಂದ ಕಲೆ-ಸಾಹಿತ್ಯ-ರಾಜಕೀಯ ಒಲವು ಇವುಗಳ ಸಂಯುಕ್ತವಾಗಿಸಿ ನೀಡಲಾಗುತ್ತದೆ. ಕೆಲವು ಯೋಗ್ಯ; ಇನ್ನು ಕೆಲವು ಅಯೋಗ್ಯವಾಗುವುದು ಈ ಕಾರಣದಿಂದಲೇ. ‘ಪದ್ಮ’ ಪ್ರಶಸ್ತಿಗಳನ್ನು ಪಡೆಯುವ ಅನೇಕರಿಗೆ ಈ ಪ್ರಶಸ್ತಿ ತಮ್ಮ ಯೋಗ್ಯತೆಗೆ, ಸಾಧನೆಗೆ ನೀಡಿದೆಯೆಂಬ ಪರಿವೇ ಇಲ್ಲ. ಇದನ್ನು ನೀಡುವುದು ಸರಕಾರ. ಆದರೆ ಅನೇಕ ಪದ್ಮ ಪ್ರಶಸ್ತಿ ವಿಜೇತರು ಪ್ರಶಸ್ತಿಯನ್ನು ಪಡೆಯುವ ಮೊದಲು ಪ್ರಧಾನಿಗೆ ಶಿರಸಾ ಎರಗಿ ಆನಂತರ ರಾಷ್ಟ್ರಪತಿಯವರಿಂದ ಪ್ರಶಸ್ತಿಯನ್ನು ಪಡೆದದ್ದನ್ನು ಕಾಣುತ್ತೇವೆ.
ಸರಕಾರ, ಅದರ ಪದಾಧಿಕಾರಿಗಳು, ಆಳುವ ಪಕ್ಷ, ದೇಶ ಇವುಗಳ ನಡುವಣ ವ್ಯತ್ಯಾಸದ ಸಾಮಾನ್ಯ ಜ್ಞಾನವು ಇರದಿದ್ದರೆ ಇಂತಹ ಅಸಂಭವಗಳು ನಡೆಯುತ್ತವೆ. ರಾಜಕೀಯ ಒಲವಿನ ಆಧಾರದಲ್ಲಿ ಸರಕಾರದ ಮುಫತ್ತು ಉಡುಗೊರೆಗಳನ್ನು ಪಡೆಯಬಹುದು. ಹಾಗೆಯೇ ಇದರ ಇನ್ನೊಂದು ಮುಖವೆಂದರೆ ಸರಕಾರವನ್ನು, ಅದರ ಆಳುವ ಪ್ರತಿನಿಧಿಗಳನ್ನು ಟೀಕಿಸಿದರೆ, ವಿರೋಧಿಸಿದರೆ ಆ ವ್ಯಕ್ತಿಯನ್ನು ‘ದೇಶದ್ರೋಹಿ’ಯೆಂಬ ಸ್ಥಾನಕ್ಕೆ ತಳ್ಳಲಾಗುತ್ತದೆ. ಎಂತಹ ಪ್ರತಿಭಾವಂತನೇ ಆಗಲಿ, ಎಷ್ಟೇ ಪಾಂಡಿತ್ಯವನ್ನು ಹೊಂದಿರಲಿ, ಅವ್ಯಾವುದನ್ನೂ ಮನ್ನಿಸದೆ ಆತನನ್ನು ಅವಮಾನಿಸಲಾಗುತ್ತದೆ. ಇದರಿಂದಾಗಿ ದೇಶದ ಮುನ್ನಡೆ, ಹಿನ್ನಡೆ ಈ ಅನಗತ್ಯ ಮತ್ತು ಅಪಾಯಕಾರಿ ಅಂಶಗಳನ್ನು ಹೊಂದಿರುತ್ತದೆ.
ಇವುಗಳಿಗಿಂತಲೂ ಅಪಾಯಕಾರಿಯೆಂದರೆ ಆಳುವವರು ತಮ್ಮ ಬೆಂಬಲಿಗರನ್ನು ತಮ್ಮ ವಿರೋಧಿಗಳೆಡೆಗೆ ಛೂಬಿಡುವುದು. ಇಂದು ದೇಶದಲ್ಲಿ ನಡೆಯುವ ಸಮೂಹ ಹಲ್ಲೆಗಳಿಗೆ ಆಳುವವರ ಆಶೀರ್ವಾದವಿರುತ್ತದೆ. ಸರಕಾರದ ಕಟ್ಟಪ್ಪಗಳಾಗಿರುವ ತನಿಖಾ ತಂಡಗಳು ಆಳುವವರ ನೀತಿಗನುಸಾರವಾಗಿ ತಮ್ಮ ನಿಯಮಗಳನ್ನು ವಿಸ್ತರಿಸುತ್ತವೆ. ಇದು ನಿಧಾನಕ್ಕಾಗಿ ಭಸ್ಮಾಸುರ ಮಹಿಮೆಯಾಗುತ್ತದೆ. ಒಮ್ಮೆ ಸ್ವೇಚ್ಛೆಯನ್ನು ಅಭ್ಯಸಿಸಿದ ಮಂದಿಗೆ ಅದನ್ನು ಯಾರ ಮೇಲೆ ಪ್ರಯೋಗಮಾಡಬೇಕೆಂಬ ವಿವೇಕ, ವಿವೇಚನೆಯಿರುವುದಿಲ್ಲ. ಮೊದಲಿಗೆ ವೈರಿ, ಆನಂತರ ಮುಗ್ಧ, ಕೊನೆಗೆ ಯಾರು ಸಿಕ್ಕರೋ ಅವರು. ಎಲ್ಲಿ ಆಡಳಿತವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲವೋ ಆಗ ಜನರಿಗೆ ರಕ್ತದ ವಾಸನೆಯನ್ನು ಹಿಡಿಸುವುದು ಆರಂಭದಲ್ಲಿ ಅನುಕೂಲಕರವಾಗಿ ಕಾಣಿಸುತ್ತದೆ. ತಾವೇ ಒಂದು ದಿನ ಅದಕ್ಕೆ ಬಲಿಯಾಗುತ್ತೇವೆಂಬ ಪ್ರಾಥಮಿಕ ಅರಿವೂ ಆಳುವವರಿಗಿರುವುದಿಲ್ಲ. ಇದು ಯಾವುದೇ ಪಕ್ಷದ ಆಳುವವರಿಗೂ ಸಮಾನವಾಗಿ ಅನ್ವಯಿಸುತ್ತದೆ. ಪಶ್ಚಿಮ ಬಂಗಾಳದಲ್ಲಿ ‘ದೀದಿ’ಯ ಜೊತೆಗಿದ್ದ ಅನೇಕರು ಈಗ ನಾಚಿಕೆ ಬಿಟ್ಟು ಅವರನ್ನು ತೊರೆದು ಹೊಸ ಕಿರೀಟಿಗಳಿಗೆ ಡೊಗ್ಗುಸಲಾಮು ಹೊಡೆಯುತ್ತಿದ್ದಾರೆ. ತಮಿಳುನಾಡಿನಲ್ಲೂ ಇದೇ ಚಮತ್ಕಾರ. ಜಿಸ್ಕೀ ಲಾಠೀ ಉಸ್ಕೀ ಭೈಂಸ್!
ಪ್ರಜೆಗಳು ನಿರಂಕುಶಮತಿಗಳಾಗಬೇಕು. ಆಗ ಮಾತ್ರ ನಿರಂಕುಶಪ್ರಭುತ್ವವನ್ನು ಎದುರಿಸಬಹುದು. ಅರಾಜಕತೆಯ ಹೊಸ್ತಿಲಿನಲ್ಲಿ ಭಾರತವಿದೆಯೆಂಬ ಪರಿಸ್ಥಿತಿ ಈಗಿದೆ. ಈ ಕಪ್ಪುಮೋಡಗಳು ಇನ್ನಷ್ಟು ಕಾಡುವ ಮೊದಲೇ ಜನರು ಎಚ್ಚೆತ್ತುಕೊಳ್ಳದಿದ್ದರೆ ಮೂರನೇ ಎರಡು ಬಹುಮತದ ಸರಕಾರದಿಂದ ಎಂತಹ ಸ್ಥಿತಿ ಬರಬಹುದು ಎಂಬುದನ್ನು ದೀರ್ಘವಾಗಿ ಯೋಚಿಸಬೇಕು. ಇನ್ನೊಬ್ಬರ ಕಾಲಿಗೆ ಬೀಳುವ ಕಲ್ಲು ನಮ್ಮ ಕಾಲಿಗೆ ಬಿದ್ದರೆ ಎಂತಹ ನೋವಾದೀತು ಎಂಬುದನ್ನು ಬಲ್ಲವರಿಗಷ್ಟೇ ಭವಿಷ್ಯ ಕಂಡೀತು. ಅರಾಜಕತೆ ಮತ್ತು ನಿರಂಕುಶ ಪ್ರಭುತ್ವ ಇವು ಕೈಕೈಹಿಡಿದು ನಡೆಯುವಾಗ ಪ್ರಜೆಗಳು ದುರಂತದ ಕಡೆಗೆ ನಡೆಯಬೇಕಾದೀತು. ಅಂತಹ ಅನಿವಾರ್ಯತೆಯಲ್ಲಿ ವಿವೇಕಿಗಳಿಗೆ ಆದಿಗೊಂದು ಅಂತ್ಯವಿದೆಯೆಂಬ ನಂಬಿಕೆಯಷ್ಟೇ ಬೆಳಕು ತೋರೀತೇನೋ?