×
Ad

ವಿದೇಶಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳದಂತೆ ಹಾರ್ವರ್ಡ್ ವಿವಿಗೆ ನಿರ್ಬಂಧ ವಿಧಿಸಿದ ಟ್ರಂಪ್ ಆಡಳಿತ!

Update: 2025-05-23 10:36 IST

Photo | NDTV

ವಾಷಿಂಗ್ಟನ್ : ಟ್ರಂಪ್ ಆಡಳಿತ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳದಂತೆ ನಿರ್ಬಂಧವನ್ನು ವಿಧಿಸಿದೆ. ಇದು ಹಾರ್ವರ್ಡ್ ವಿವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಭಾರತ ಸೇರಿದಂತೆ ಇತರ ದೇಶಗಳ ವಿದ್ಯಾರ್ಥಿಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ.

ಹೋಮ್‌ಲ್ಯಾಂಡ್‌ ಸೆಕ್ಯುರಿಟಿ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ʼಹಿಂಸೆ, ಯೆಹೂದ್ಯ ವಿರೋಧಿತ್ವವನ್ನು ಬೆಳೆಸಿದ್ದಕ್ಕಾಗಿ ಮತ್ತು ಕ್ಯಾಂಪಸ್‌ನಲ್ಲಿ ಚೀನೀ ಕಮ್ಯುನಿಸ್ಟ್ ಪಕ್ಷದೊಂದಿಗೆ ಸಮನ್ವಯ ಸಾಧಿಸಿದ್ದಕ್ಕಾಗಿ ಟ್ರಂಪ್ ಆಡಳಿತವು ಹಾರ್ವರ್ಡ್ ವಿವಿಯನ್ನು ಹೊಣೆಗಾರರನ್ನಾಗಿ ಮಾಡುತ್ತಿದೆʼ ಎಂದು ಹೇಳಿದರು.

ಹಾರ್ವರ್ಡ್ ವಿದ್ಯಾರ್ಥಿ ಮತ್ತು ವಿನಿಮಯ ಸಂದರ್ಶಕ ಕಾರ್ಯಕ್ರಮ (SEVP) ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಹೋಮ್‌ಲ್ಯಾಂಡ್‌ ಸೆಕ್ಯುರಿಟಿ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಆದೇಶಿಸಿದ್ದಾರೆ. ಕಳೆದ ತಿಂಗಳು ವಿದೇಶಿ ವಿದ್ಯಾರ್ಥಿಗಳ ನಡವಳಿಕೆ ದಾಖಲೆಗಳನ್ನು ಕೋರಿದಾಗ ವಿಶ್ವವಿದ್ಯಾಲಯವು ನೀಡಲು ನಿರಾಕರಿಸಿದೆ ಎಂದು ಆರೋಪಿಸಲಾಗಿದೆ.

ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ಕಳುಹಿಸಲಾದ ಪತ್ರದಲ್ಲಿ, ಮುಂಬರುವ ಶೈಕ್ಷಣಿಕ ವರ್ಷದ ಮೊದಲು ಹಾರ್ವರ್ಡ್ SEVP ಪ್ರಮಾಣೀಕರಣವನ್ನು ಮರಳಿ ಪಡೆಯುವ ಅವಕಾಶವನ್ನು ಬಯಸಿದರೆ, 72 ಗಂಟೆಗಳ ಒಳಗೆ ಅಗತ್ಯವಿರುವ ಮಾಹಿತಿಯನ್ನು ಒದಗಿಸಬೇಕು ಎಂದು ಉಲ್ಲೇಖಿಸಲಾಗಿದೆ.

ಟ್ರಂಪ್ ಆಡಳಿತದ ಈ ಕ್ರಮವು ಹಾರ್ವರ್ಡ್‌ ವಿವಿಯಲ್ಲಿ ಓದುತ್ತಿರುವ ಸಾವಿರಾರು ವಿದೇಶಿ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಲಿದೆ. ಹಾರ್ವರ್ಡ್ ವಿದೇಶಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಅವಕಾಶವನ್ನು ಕಳೆದುಕೊಳ್ಳುತ್ತದೆ. ಪ್ರಸ್ತುತ ವ್ಯಾಸಾಂಗ ಮಾಡುತ್ತಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ವರ್ಗಾವಣೆಯಾಗಬೇಕಾಗುತ್ತದೆ ಅಥವಾ ಅವರ ಕಾನೂನು ಸ್ಥಾನಮಾನವನ್ನು ಕಳೆದುಕೊಳ್ಳಬೇಕಾಗುತ್ತದೆ.

ಈ ನಿರ್ಧಾರವು ವಿದ್ಯಾರ್ಥಿಗಳ ಮೇಲೆ ಮಾತ್ರವಲ್ಲದೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಲ್ಲೂ ತೀವ್ರ ಕಳವಳವನ್ನು ಉಂಟುಮಾಡಿದೆ. ಹಾರ್ವರ್ಡ್‌ನಿಂದ ಪ್ರಾಧ್ಯಾಪಕರು, ವಿದೇಶಿ ವಿದ್ಯಾರ್ಥಿಗಳು ಹೊರಹೋಗುವುದರಿಂದ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News