×
Ad

ಡಾ.ಶ್ರೀ ಶಿವಕುಮಾರ ಸ್ವಾಮೀಜಿ 119ನೇ ಜನ್ಮಜಯಂತಿ, ಗುರುವಂದನಾ ಕಾರ್ಯಕ್ರಮ

Update: 2026-04-02 01:15 IST

ತುಮಕೂರು : ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರು ಭೌತಿಕವಾಗಿ ನಮ್ಮ ನಡುವೆ ಇಲ್ಲವಾದರೂ ಅವರ ಮಾಡಿದ ಸಮಾಜ ಸೇವೆ, ಇನ್ನೂ ನೂರು ವರ್ಷಗಳೂ ಕಳೆದರೂ ಸಮಾಜವನ್ನು ಪೊರೆಯುತ್ತಲೇ ಇರುತ್ತದೆ ಎಂದು ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅಭಿಪ್ರಾಯಪಟ್ಟಿದ್ದಾರೆ.

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಹಮ್ಮಿಕೊಂಡಿದ್ದ ಡಾ.ಶ್ರೀಶಿವಕುಮಾರ ಸ್ವಾಮೀಜಿಯವರ 119ನೇ ಜನ್ಮಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಇಂತಹ ನಿಜ ಸಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನನಗೆ ಅತೀವ ಸಂತಸವನ್ನು ಉಂಟು ಮಾಡಿದೆ ಎಂದರು.

ಸಿದ್ದಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿಗಳಂತಹ ಸಂತರೇ ನಮ್ಮ ಸಮಾಜ ಮತ್ತು ರಾಷ್ಟ್ರದ ಆತ್ಮಕ್ಕೆ ರೂಪ ನೀಡಿದ್ದಾರೆ ಎಂದು ನನಗೆ ಅನಿಸುತ್ತದೆ. ನೂರು ವರ್ಷ ಬದುಕಿದೆವು ಎಂಬುದು ಮುಖ್ಯವಲ್ಲ. ನೂರು ವರ್ಷ ಹೇಗೆ ಪರೋಪಕಾರಿಯಾಗಿ ಬದುಕಿದೆವು ಎಂಬುದಕ್ಕೆ ಡಾ.ಶ್ರೀಶಿವಕುಮಾರಸ್ವಾಮೀಜಿಯವರ ಜೀವನವೇ ಉದಾಹರಣೆಯಾಗಿದೆ ಎಂದು ರಾಷ್ಟ್ರಪತಿಯವರು ಅಭಿಮಾನದಿಂದ ನುಡಿದರು.

ಡಾ.ಶ್ರೀಶಿವಕುಮಾರಸ್ವಾಮೀಜಿಯವರ ಸತ್ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಿರುವ ಶ್ರೀಮಠದ ಪರಂಪರೆಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ಈ ಮಠವು ಅನೇಕ ಗ್ರಾಮೀಣ ಮಕ್ಕಳಿಗೆ ಉಚಿತ ಅನ್ನ, ವಸತಿ ಮತ್ತು ಶಿಕ್ಷಣವನ್ನು ನೀಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ. ಪ್ರಾಥಮಿಕ ಶಾಲೆಯಿಂದ ಹಿಡಿದು ಇಂಜಿನಿಯರಿಂಗ್, ಮೆಡಿಕಲ್ ಮತ್ತು ಮ್ಯಾನೇಜ್ಮೆಂಟ್‌ನ ಉನ್ನತ ಶಿಕ್ಷಣದವರೆಗೆ ವ್ಯವಸ್ಥೆ ಮಾಡಿರುವುದು ವಿಶೇಷ ಸಂತೋಷದ ಸಂಗತಿ. ಇದಕ್ಕಾಗಿ ಅನೇಕ ಶಿಕ್ಷಣ ಸಂಸ್ಥೆಗಳು ಸ್ಥಾಪಿಸಲ್ಪಟ್ಟಿವೆ. ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸ್ಥಾಪಿತವಾದ ಶ್ರೀ ಸಿದ್ಧಗಂಗಾ ಆಸ್ಪತ್ರೆಯು ಸಾಮಾನ್ಯ ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಮಠದಿಂದ ಅನ್ನಗಂಗಾ, ಕರುಣೆಗಂಗಾ ಮತ್ತು ಶಿಕ್ಷಣಗಂಗಾ ಎಂಬ ಮೂರು ಮಹಾನ್ ಧಾರೆಗಳ ಮಹಾಸಂಗಮವಾಗಿದೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್‌, ಕೇಂದ್ರ ಸಚಿವರಾದ ವಿ.ಸೋಮಣ್ಣ, ಕರ್ನಾಟಕ ಸರಕಾರದ ಸಚಿವರಾದ ಎಂ.ಬಿ.ಪಾಟೀಲ್, ಲಕ್ಷ್ಮೀಹೆಬ್ಬಾಳ್ಕರ್, ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಕರ್ನಾಟಕವು ಪುಣ್ಯಭೂಮಿಯಾಗಿದ್ದು, ಇಲ್ಲಿನ ವೀರಶೈವ ಲಿಂಗಾಯತ ಮಠಗಳು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿವೆ. ಹಿರಿಯ ಶ್ರೀಗಳು 111ವರ್ಷಗಳ ಕಾಲ ಕಠಿಣ ಹಾದಿಯಲ್ಲಿ ಸಾಗಿ, ಗ್ರಾಮಾಂತರ ಭಾಗದ ಮಕ್ಕಳು ಶಿಕ್ಷಣವಂತರಾಗಬೇಕು ಎಂಬ ಮಹದಾಸೆಯನ್ನು ಹೊಂದಿದ್ದರು. ಅವರ ಶ್ರಮದಿಂದಾಗಿ ಸಿದ್ದಗಂಗಾ ಮಠ ವಿಶ್ವಮಾನ್ಯತೆ ಪಡೆದಿದೆ,ಬುಡಕಟ್ಟು ಸಮುದಾಯದಿಂದ ಬಂದು ದೇಶದ ಉನ್ನತ ಸ್ಥಾನಕ್ಕೇರಿರುವ ರಾಷ್ಟ್ರಪತಿಯವರ ಜೀವನ ಎಲ್ಲರಿಗೂ ಪ್ರೇರಣೆಯಾಗಿದೆ.

-ಶ್ರೀಸಿದ್ದಲಿಂಗ ಸ್ವಾಮೀಜಿ, ಸಿದ್ದಗಂಗಾ ಮಠಾಧ್ಯಕ್ಷ, ತುಮಕೂರು

ತುಮಕೂರಿನ ಸಿದ್ದಗಂಗಾಮಠದ ಜವಾಬ್ದಾರಿ ಹೊತ್ತ ಶ್ರೀಗಳು ಲಕ್ಷಾಂತರ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಮತ್ತು ಆಶ್ರಯ ನೀಡುವ ಮೂಲಕ ತ್ರಿವಿಧ ದಾಸೋಹವನ್ನು ಸಾಕಾರಗೊಳಿಸಿದರು. ಸಿದ್ದಗಂಗಾ ಮಠವು ಶಿಸ್ತು, ಸರಳತೆ ಮತ್ತು ಮಾನವೀಯತೆಗೆ ಹೆಸರುವಾಸಿಯಾಗಿದೆ. ಪ್ರಸ್ತುತ ಸಿದ್ದಲಿಂಗ ಸ್ವಾಮೀಜಿಯವರು ಕೂಡ ಹಿರಿಯ ಶ್ರೀಗಳ ದಾರಿಯಲ್ಲೇ ಮಠವನ್ನು ಮುನ್ನಡೆಸುತ್ತಿರುವುದು ಶ್ಲಾಘನೀಯ.

-ಡಾ.ಜಿ.ಪರಮೇಶ್ವರ್, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News