Tumakuru | ಚಿನ್ನಾಭರಣ ದರೋಡೆಕೋರರನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಿದ ಪೊಲೀಸರು
ಅರಣ್ಯ ಪ್ರದೇಶಕ್ಕೆ ನುಗ್ಗಿದ್ದ ಆರೋಪಿಗಳನ್ನು ಸುತ್ತುವರಿದು ಬಂಧನ
ತುಮಕೂರು : ಚಿನ್ನಡ ಅಂಗಡಿಗೆ ನುಗ್ಗಿ ಮಾಲೀಕರ ಮೇಲೆ ಕಾರದ ಪುಡಿ ಎರಚಿ, ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಅಂತರ್ ರಾಜ್ಯ ಆರೋಪಿಗಳನ್ನು ಕಳ್ಳಂಬೆಳ್ಳ ಪೊಲೀಸರು ಬಂಧಿಸಿ, ಅವರಿಂದ 14 ಲಕ್ಷ ರೂ.ಗಳ ಚಿನ್ನದ ಒಡವೆ ಸೇರಿದಂತೆ ಒಟ್ಟು 26 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ರವಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 75 ಕ್ಕೆ ಹೊಂದಿಕೊಂಡಂತೆ ಕಳ್ಳಂಬೆಳ್ಳದಲ್ಲಿರುವ ಜುವೆಲ್ಲರಿ ಶಾಫ್‍ಗೆ ನಾಲ್ವರು ನುಗ್ಗಿ ವ್ಯಾಪಾರದಲ್ಲಿ ತೊಡಗಿದ್ದ ದಿನೇಶ್ ಮತ್ತು ನಾತಿದೇವಿ ಎಂಬವವರ ಕಣ್ಣಿಗೆ ಖಾರದ ಪುಡಿ ಎರಚಿ, ಅಂಗಡಿಯ ರೋಲಿಂಗ್ ಶೆಟರ್ ಎಳೆದು, ಅಂಗಡಿಯಲ್ಲಿದ್ದ ಚಿನ್ನ-ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿಕೊಂಡು, ಬುಲೆರೋ ವಾಹನದಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ಮಾಲೀಕ ದಿನೇಶ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಕಳ್ಳಬೆಳ್ಳ ಪೊಲೀಸರು, ತನಿಖೆ ಆರಂಭಿಸಿದ್ದರು.
ಪ್ರೋಬೆಷನರಿ ಐಪಿಎಸ್ ಅಧಿಕಾರಿ ರಾನ್ ಗುಪ್ತ ಮಾರ್ಗದರ್ಶನದಲ್ಲಿ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಪೊಲೀಸರು, ಎಲ್ಲೆಡೆ ನಾಕಾಬಂದಿ ವಿಧಿಸಿದ್ದರು. ಕದ್ದ ಮಾಲಿನೊಂದಿಗೆ ಚಿತ್ರದುರ್ಗ ಕಡೆ ಹೊರಟಿದ್ದ ಆರೋಪಿಗಳ ತಂಡ, ರಸ್ತೆಯಲ್ಲಿ ನಾಕಾಬಂದಿ ಇರುವುದನ್ನು ಕಂಡು, ವಾಹನವನ್ನು ವಾಪಸ್ ತಿರುಗಿಸಿ, ಶಿರಾ ಕಡೆಗೆ ಆಗಮಿಸುತ್ತಿರುವ ಮಾಹಿತಿ ಪಡೆದ ಹಿರಿಯ ಅಧಿಕಾರಿಗಳು, ಭುವನಹಳ್ಳಿ, ಸೊರೆಕುಂಟೆ, ಮೇಕೇರಹಳ್ಳಿ, ಕೆಂಚಪ್ಪನಹಳ್ಳಿ, ಕಿತ್ತಗಾನಹಳ್ಳಿ, ನಿಂಬೆಮರದಹಳ್ಳಿ, ಸುತ್ತಮುತ್ತಲ ಗ್ರಾಮಸ್ಥರನ್ನು ಎಚ್ಚರಿಸಿ, ರಸ್ತೆಯನ್ನು ಬ್ಲಾಕ್ ಮಾಡುವಂತೆ ಮಾಡಿದ್ದರು. ಆರೋಪಿಗಳು ಜನರಿಂದ ತಪ್ಪಿಸಿಕೊಳ್ಳಲು ಮುದಿಗೆರೆ ಕಾವಲ್, ಮೇಕೆರಹಳ್ಳಿ ಅರಣ್ಯ ಪ್ರದೇಶಕ್ಕೆ ನುಗ್ಗಿದ್ದು, ಈ ವೇಳೆ ಸುತ್ತುವರಿದ ಪೊಲೀಸರು ಆರೋಪಿಗಳನ್ನು ಮಾಲಿನ ಸಮೇತ ಬಂದಿಸಿದ್ದರು.
ಬಂಧಿತರನ್ನು ಅರವಿಂದಕುಮಾರ್ ಬಿನ್ ಬಮೇಶ್ಚಿ(28), ಡುಂಗರ್ ಸಿಂಗ್ ಬಿನ್.ಕೋಜ್ ಸಿಂಗ್(24), ಮಹೇಂದರ್ ಸಿಂಗ್ ಬಿನ್ ಭವಾನಿ ಸಿಂಗ್(32), ಮಧು ಸಿಂಗ್ ಬಿನ್.ಛೈಲ್ ಸಿಂಗ್ (28) ಎಂದು ಗುರುತಿಸಲಾಗಿದ್ದು, ಬಂಧಿತರಿಂದ 14 ಲಕ್ಷ ರೂ. ಬೆಲೆಯ ಚಿನ್ನಾಭರಣ, ಒಂದೂವರೆ ಕೆ.ಜಿ. ಬೆಳ್ಳಿ ಒಡವೆಗಳು, 2.75 ಲಕ್ಷ ಬೆಲೆಯ ಚಿನ್ನ ಲೇಪಿತ ಬೆಳ್ಳಿ ಒಡವೆ, ಐದು ಲಕ್ಷ ರೂ. ಬೆಲೆಯ ಬುಲೇರೋ ವಾಹನ, ಒಂದು ಲಕ್ಷ ಬೆಲೆಯ ಎರಡು ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.