ನಾಳೆ(ಮೇ 19) ಸರಕಾರದ ಮೂರು ವರ್ಷಗಳ ಸಾಧನಾ ಸಮಾವೇಶ; 1.52 ಲಕ್ಷ ಫಲಾನುಭವಿಗಳಿಗೆ ಸವಲತ್ತು ವಿತರಣೆ : ಜಿ.ಪರಮೇಶ್ವರ್
ತುಮಕೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ಮೂರು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಮೇ 19ರಂದು ತುಮಕೂರಿನ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸಾರ್ಥಕ ಸೇವೆಯ ಸಂಭ್ರಮ ಎಂಬ ಹೆಸರಿನಲ್ಲಿ ಸಮಾವೇಶವನ್ನು ಸರಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿವೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸಾರ್ಥಕ ಸೇವೆಗಳ ಸಂಭ್ರಮ ಕಾರ್ಯಕ್ರಮದ ವೇದಿಕೆಯ ಬಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಮಾರು 1,52,492 ಜನ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸುತ್ತಿದ್ದು, ಏಕ ಕಾಲಕ್ಕೆ 600ಕ್ಕೂ ಹೆಚ್ಚು ಅಂಗನವಾಡಿ ನೌಕರರಿಗೆ ನೇಮಕಾತಿ ಪತ್ರ ವಿತರಿಸುವ ಮೂಲಕ ತುಮಕೂರು ಕಾರ್ಯಕ್ರಮ ಗಿನ್ನಿಸ್ ಬುಕ್ ಅಫ್ ರೇಕಾರ್ಡ್‍ಗೆ ಸೇರಲಿದೆ ಎಂದರು.
ಸರಕಾರದ ಮೂರು ವರ್ಷಗಳ ಸಾಧನೆಯ ಕಾರ್ಯಕ್ರಮ ಯಾರ ವಿರುದ್ದದ ಸಮಾವೇಶವಲ್ಲ. ಬದಲಾಗಿ ಸರಕಾರದ ಸಾಧನೆಗಳೇನು ಎಂದು ಪ್ರಶ್ನೆ ಮಾಡುವ ವಿರೋಧಪಕ್ಷಗಳಿಗೆ, ಸರಕಾರ ಮೂರು ವರ್ಷದಲ್ಲಿ ಜನಸಾಮಾನ್ಯರಿಗೆ ಏನು ಮಾಡಿದೆ ಎಂಬ ಜನಸಾಮಾನ್ಯರ ಪ್ರಶ್ನೆಗಳಿಗೆ ಉತ್ತರ ನೀಡುವ ಸಮಾರಂಭವಾಗಿದೆ. ಸರಕಾರ ಈಗಾಗಲೇ ವಿಜಯನಗರ ಜಿಲ್ಲೆ, ಹಾವೇರಿ ಜಿಲ್ಲೆಗಳಲ್ಲಿ ಇಂತಹದ್ದೇ ಕಾರ್ಯಕ್ರಮಗಳ ಮೂಲಕ ಸುಮಾರು 13 ಲಕ್ಷ ಕುಟುಂಬಗಳಿಗೆ ಸವಲುತ್ತು ನೀಡಲಾಗಿದೆ. ಒಂದೇ ಬಾರಿಗೆ 1.52 ಲಕ್ಷ ಜನರಿಗೆ ಪೌತಿ ಖಾತೆ, ಕಂದಾಯ ಗ್ರಾಮದ ಹಕ್ಕುಪತ್ರ ಸೇರಿದಂತೆ ಹಲವು ಸವಲತ್ತುಗಳನ್ನು ಏಕ ಕಾಲಕ್ಕೆ ವಿತರಿಸುತಿದ್ದು,ಇದನ್ನು ವೀಕ್ಷಿಸಿ, ಸರ್ಟಿಪಿಕೇಟ್ ನೀಡಲು ಗಿನ್ನಿಸ್ ಬುಕ್ ಅಫ್ ರೇರ್ಕಾಡ್‍ನ ಹಿರಿಯ ಅಧಿಕಾರಿಗಳು ಮೇ.19ರಂದು ತುಮಕೂರಿಗೆ ಆಗಮಿಸುತ್ತಿದ್ದಾರೆ ಎಂದು ಡಾ.ಜಿ.ಪರಮೇಶ್ವರ್ ನುಡಿದರು.
682 ಕೋಟಿ ರೂಗಳ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ: ಕಂದಾಯ ಇಲಾಖೆಯ ಜೊತೆಗೆ, ಗ್ರಾಮೀಣಾಭಿವೃದ್ದಿ ಇಲಾಖೆ, ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಸುಮಾರು 682 ಕೋಟಿ ರೂಗಳ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ, ಉದ್ಘಾಟನೆ ನೆರವೇರಲಿದೆ. ಚುನಾವಣೆಗೆ ಪೂರ್ವದಲ್ಲಿ ಜನರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿದ್ದೇವೆ ಎಂಬುದನ್ನು ಜನರಿಗೆ ಮನದಟ್ಟು ಮಾಡಿಕೊಡಲು, ನುಡಿದಂತೆ ನಡೆದಿದ್ದೇವೆ ಎಂದು ಮನವರಿಕೆ ಮಾಡಿಕೊಡಲು ಈ ಸಮಾವೇಶ ಆಯೋಜಿಸಿದ್ದೇವೆ ಎಂದರು.
ವಸ್ತು ಪ್ರದರ್ಶನ: ಸರಕಾರದ ಮೂರು ವರ್ಷಗಳ ಸಾಧನೆ ಕುರಿತು ಒಂದು ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಇದರಲ್ಲಿ ಇಡೀ ಕರ್ನಾಟಕವನ್ನು ಕೇಂದ್ರೀಕರಿಸಿ ಪ್ರಮುಖ ಕಾಮಗಾರಿಗಳು, ಯೋಜನೆಗಳ ಕುರಿತು ವಸ್ತು ಪ್ರದರ್ಶನವಿದ್ದರೆ, ಮತ್ತೊಂದೆಡೆ ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ ಮತ್ತೊಂದು ವಸ್ತು ಪ್ರದರ್ಶನವಿದೆ. ವಿರೋಧ ಪಕ್ಷಗಳ ಟೀಕೆಗೆ ಈ ವಸ್ತು ಪ್ರದರ್ಶನದಲ್ಲಿ ದಾಖಲೆಗಳ ಸಮೇತ ಉತ್ತರ ನೀಡಲಾಗಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
2 ಲಕ್ಷ ಜನರ ನಿರೀಕ್ಷೆ: ಕಾರ್ಯಕ್ರಮ ರಾಜ್ಯಮಟ್ಟದ್ದಾಗಿದ್ದು, ತುಮಕೂರು ಜಿಲ್ಲೆ 11 ತಾಲೂಕುಗಳಿಂದ ಸುಮಾರು 2000 ಬಸ್ಸುಗಳಲ್ಲಿ 2 ಲಕ್ಷ ಜನರಿಗೆ ಕಾರ್ಯಕ್ರಮಕ್ಕೆ ಬರಲು ಅವಕಾಶ ಕಲ್ಪಿಸಲಾಗಿದೆ. ಸೋಮವಾರ ಸಂಜೆಯೇ ನಿಗಧಿ ಪಡಿಸಿದ ಜಾಗಕ್ಕೆ ಹೋಗಿ ಬಸ್ಸುಗಳು ಹಾಲ್ಟ್ ಆಗಲಿದ್ದು, ಬೆಳಗ್ಗೆ ಉಪಹಾರದನಂತರ ಹೊರಟು 10 ಗಂಟೆಯ ಒಳಗೆ ಕಾರ್ಯಕ್ರಮದ ವೇದಿಕೆಗೆ ಬರಲಿವೆ. ಕಾರ್ಯಕ್ರಮ ಮುಗಿದ ನಂತರ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಜನರಿಗೆ ಯಾವುದೇ ತೊಂದರೆಯಾಗದ ರೀತಿ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.
ಎಲ್ಲಾ ಸಚಿವರು,ಶಾಸಕರು ಹಾಗೂ ಸಂಸದರಿಗೆ ಆಹ್ವಾನ: ಇದೊಂದು ಸರಕಾರಿ ಕಾರ್ಯಕ್ರಮವಾಗಿದ್ದು, ನಾನೇ ಖುದ್ದಾಗಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸರಕಾರದ ಎಲ್ಲಾ ಸಚಿವರಿಗೆ ಆಹ್ವಾನ ಪತ್ರಿಕೆ ನೀಡಿ, ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇನೆ. ಉಳಿದಂತೆ 225 ಶಾಸಕರು, 75 ಜನ ವಿಧಾನಪರಿಷತ್ ಸದಸ್ಯರು ಹಾಗೂ 28 ಸಂಸದರನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಅಲ್ಲದೆ ತುಮಕೂರು ಜಿಲ್ಲೆಯ 11 ಶಾಸಕರಿಗೂ ನಾನೇ ಖುದ್ದಾಗಿ ದೂರವಾಣಿಯಲ್ಲಿ ಮಾತನಾಡಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಿದ್ದೇನೆ. ಎಲ್ಲರೂ ಬರಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಮಂಗಳವಾರ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ: ಸರಕಾರದ ಮೂರು ವರ್ಷಗಳ ಸಾಧನೆಯ ಸಾರ್ಥಕ ಸೇವೆಗಳ ಸಂಭ್ರಮ ಕಾರ್ಯಕ್ರಮ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ ಎಂದರು.
ಸಾಧನೆಗೆ ಪುಸ್ತಕದ ರೂಪ: ಸರಕಾರದ ಮೂರು ವರ್ಷಗಳ ಸಾಧನೆಯನ್ನು ಜನರಿಗೆ ತಿಳಿಸಲು ಎರಡು ಪುಸಕ್ತಗಳನ್ನು ಸಿದ್ದಪಡಿಸಲಾಗಿದೆ. ಒಂದರಲ್ಲಿ ಇಡೀ ಸರಕಾರದ ಮೂರು ವರ್ಷಗಳ ಸಾಧನೆಯ ಭಾವಚಿತ್ರ ಸಮೇತ ವಿವರಣೆ ಒಳಗೊಂಡಿದ್ದರೆ, ಮತ್ತೊಂದು ಪುಸ್ತಕದಲ್ಲಿ ತುಮಕೂರು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ನಡೆದಿರುವ ಅಭಿವೃದ್ದಿ ಕಾರ್ಯಗಳ ಪಕ್ಷಿನೋಟ ಇರಲಿದೆ. ಇದೊಂದು ದಾಖಲೆಯಾಗಿ ಜಿಲ್ಲಾಡಳಿತ ಮತ್ತು ಜನರ ಮನಸ್ಸಿನಲ್ಲಿ ಉಳಿಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ವಿ.ವೆಂಕಟೇಶ್,ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ಬಿ.ಎಂ.ಟಿ.ಸಿ ಉಪಾಧ್ಯಕ್ಷ ನಿಕೇತರಾಜ್ ಮೌರ್ಯ, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಉಪಸ್ಥಿತರಿದ್ದರು.