ತುಮಕೂರು : ಒಂದು ವರ್ಷಕ್ಕೆ 1.20 ಕೋಟಿ ಜನರು ಪದವಿಧರರಾಗಿ ಹೊರಬರುತ್ತಾರೆ. ಅವರಲ್ಲಿ ಶೇ.40 ಜನರಿಗೆ ಮಾತ್ರ ಉದ್ಯೋಗ ದೊರೆಯಲು ಸಾಧ್ಯ. ಉಳಿದ ಶೇ.60 ಜನರಿಗೂ ದುಡಿಯುವ ಅವಕಾಶ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಸರಕಾರ ಕೌಶಲ್ಯಾಧಾರಿತ ಸ್ವಯಂ ಉದ್ಯೋಗ ಮತ್ತು ಉದ್ದಿಮೆದಾರರಿಗೆ ಪರಿವರ್ತಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಉಪಮುಖ್ಯಮಂತ್ರಿ, ಕಂದಾಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ನಗರದ ಅಮಾನೀಕೆರೆ ಗಾಜಿನಮನೆಯಲ್ಲಿ ಜಿಲ್ಲಾಡಳಿತ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಒಟ್ಟಾರೆ ಜನಸಂಖ್ಯೆಯ ಶೇ.60ಷ್ಟು ಇರುವ ಯುವಜನರನ್ನು ಒಂದಿಲೊಂದು ಜವಾಬ್ದಾರಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಮೂಲಕ ಅವರನ್ನು ನಶೆಗಳಿಂದ ಹೊರತರುವುದೇ ಇಂತಹ ಕಾರ್ಯಕ್ರಮಗಳ ಉದ್ದೇಶವಾಗಿದೆ ಎಂದರು.

ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದ್ದು, 2023ರಿಂದ ಸ್ವಯಂ ಉದ್ಯೋಗ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. 2027ರಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸುವ ಮೂಲಕ ರಾಜ್ಯದಲ್ಲಿ ಉದ್ದಿಮೆ ಪ್ರಾರಂಭಿಸಲು ಸರಕಾರ ಉತ್ತೇಜನ ನೀಡುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್‌ರಾಜ್ ಮೌರ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಎಂ.ಎನ್.ಅನುಚೇತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ ಸುಭಾಷ್ ಚಂದ್ರ ಕೆ.ಎಲ್., ಸಹಾಯಕ ನಿರ್ದೇಶಕ ಸಂತೋಷ, ಜಿಪಂ ಸಿಇಒ ಅಶ್ವಿಜಾ, ಪ್ರಭಾರ ಎಸ್‌ಪಿ ಸಿ.ಗೋಪಾಲ್, ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ, ತಹಶೀಲ್ದಾರ್ ರಾಜೇಶ್ವರಿ , ಪಾಲಿಕೆ ಆಯುಕ್ತೆ ಶುಭಾ, ಅಧಿಕಾರಿಗಳು ಉಪಸ್ಥಿತರಿದ್ದರು.

ಎಸ್‌ಸಿ, ಎಸ್‌ಟಿ ವಿದ್ಯಾರ್ಥಿ ವೇತನ ಪಾವತಿಗೆ ಪ್ರತ್ಯೇಕ ನಿರ್ದೇಶನಾಲಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನಿಗದಿತ ಅವಧಿಯಲ್ಲಿ ವಿದ್ಯಾರ್ಥಿ ವೇತನ ಪಾವತಿಸಲು ಸರಕಾರ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ. ಆದರೂ ಕೆಲವೊಮ್ಮೆ ವಿವಿಧ ಕಾರಣಗಳಿಂದ ವಿಳಂಬವಾಗುತ್ತಿರುವುದು ಸರಕಾರದ ಗಮನಕ್ಕೆ ಬಂದಿರುವುದರಿಂದ ವಿದ್ಯಾರ್ಥಿವೇತನ ಪಾವತಿಸಲು ಪ್ರತ್ಯೇಕ ನಿರ್ದೇಶನಾಲಯದ ಸ್ಥಾಪನೆಗಾಗಿ ಸರಕಾರ ಚಿಂತನೆ ನಡೆಸಿದೆ.

ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor