ಕಟಪಾಡಿ ಪಳ್ಳಿಗುಡ್ಡೆ ಮೈದಾನ ತೆರವಿಗೆ ಕ್ರಮ ಕೈಗೊಳ್ಳಲು ಆಗ್ರಹ
ಉಡುಪಿ, ಮಾ.9: ಕಾಪು ತಾಲೂಕು ಕೋಟೆ ಗ್ರಾಪಂ ವ್ಯಾಪ್ತಿಯಲ್ಲಿರುವ ಒಟ್ಟು ಸುಮಾರು 6.96ಎಕರೆ ಸರಕಾರಿ ಭೂಮಿಯನ್ನು ಖಾಸಗೀ ಶಿಕ್ಷಣ ಸಂಸ್ಥೆಯಾದ ಕಟಪಾಡಿ ಎಸ್‌ವಿಎಸ್ ಹೈಸ್ಕೂಲ್ ಹೆಸರಿನಲ್ಲಿ ಪಹಣಿ ಕಲಂ 11ರಲ್ಲಿ ಎಲಿನೇಶನ್ ಮಾಡಿದ್ದು, ಅದನ್ನು ಆ ಸಂಸ್ಥೆ ದುರುಪಯೋಗ ಪಡಿಸಿ ಕೊಳ್ಳುತ್ತಿದೆ. ಆದ್ದರಿಂದ ಅದನ್ನು ಸಾರ್ವಜನಿಕರ ಬಳಕೆಗೆ ತೆರವುಗೊಳಿಸಬೇಕು ಎಂದು ಗ್ರಾಮಸ್ಥ ಪ್ರಭಾಕರ ಕೋಟ್ಯಾನ್ ಒತ್ತಾಯಿಸಿದ್ದಾರೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಸ್‌ವಿಎಸ್ ಹೈಸ್ಕೂಲ್ ಕಟಪಾಡಿ ಎಂಬ ಖಾಸಗಿ ವಿದ್ಯಾಸಂಸ್ಥೆ ಸರಕಾರಿ ಜಾಗದಲ್ಲಿ ಆಟದ ಮೈದಾನವನ್ನು ಎಲಿನೇಶನ್ ಮೂಲಕ ಹೊಂದಿದ್ದು, ಇದೀಗ ಆಟದ ಮೈದಾನಕ್ಕೆ ಗೇಟು ಅಳವಡಿಸಿ, ಬೀಗ ಹಾಕಿದ್ದಾರೆ. ಅಲ್ಲದೇ ಇದಕ್ಕೆ ಎಸ್‌ವಿಎಸ್ ಕ್ರೀಡಾಂಗಣ ಎಂಬ ನಾಮಫಲಕವನ್ನೂ ಅಳವಡಿಸಿದ್ದಾರೆ ಎಂದು ದೂರಿದರು.
ಹಲವು ದಶಕಗಳಿಂದ ಪಳ್ಳಿಗುಡ್ಡೆ ಮೈದಾನವೆಂದು ನಿತ್ಯ ಬಳಕೆಯಲ್ಲಿ, ನೆಹರೂ ಮೈದಾನವೆಂದು ಸಾರ್ವಜನಿಕ ವಾಗಿ ಕರೆಯಲ್ಪಡುತಿದ್ದ ಈ ಮೈದಾನ ಸಾರ್ವಜನಿಕರ ಬಳಕೆ, ಮಕ್ಕಳ ದೈನಂದಿನ ಆಟಕ್ಕೆ ಬಳಕೆಯಾಗುತ್ತಿತ್ತು. ಆದರೇ ಈಗ ಸಂಸ್ಥೆಯವರು ಮೈದಾನಕ್ಕೆ ಗೇಟು ಅಳವಡಿಸಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಆಟವಾ ಡಲು ಪ್ರತಿದಿನಕ್ಕೆ 3,000ರೂ.ಗಳನ್ನು ಅಕ್ರಮವಾಗಿ ವಸೂಲಿ ಮಾಡುತಿದ್ದಾರೆ. ಈ ದಂಧೆ ಕಳೆದ ಹಲವು ವರ್ಷಗಳಿಂದ ನಡೆಯುತ್ತಿದೆ ಎಂದವರು ಆರೋಪಿಸಿದರು.
ಅಲ್ಲದೇ ಸರಕಾರಿ ಜಾಗದಲ್ಲಿ ಬೇರೆ ಬೇರೆ ಕಟ್ಟಡಗಳನ್ನು, ವೇದಿಕೆಯನ್ನು ನಿರ್ಮಿಸಲು ಮುಂದಾಗಿದ್ದು, ಗ್ರಾಮಪಂಚಾಯತ್ ಈಗಾಗಲೇ ಅದನ್ನು ತೆರವು ಗೊಳಿಸುವಂತೆ ನಿರ್ಣಯ ತೆಗೆದುಕೊಂಡು ನೋಟೀಸು ನೀಡಿದ್ದರೂ ಅದನ್ನು ನಿರ್ಲಕ್ಷಿಸಿದ್ದಾರೆ ಎಂದು ಪ್ರಭಾಕರ ಕೋಟ್ಯಾನ್ ತಿಳಿಸಿದರು.
ಈ ಮೈದಾನವನ್ನು ಕಾಪು ತಾಲೂಕಿನ ‘ತಾಲೂಕು ಕ್ರೀಡಾಂಗಣ’ವಾಗಿ ಘೋಷಿಸಿ, ಈ ಬಗ್ಗೆ ಕ್ರಮ ಕೈಗೊಳ್ಳಬೇಕು. 10 ದಿನದೊಳಗೆ ಮೈದಾನಕ್ಕೆ ಹಾಕಿರುವ ಬೀಗವನ್ನು ತೆರವುಗೊಳಿಸದಿದ್ದರೆ, ಕ್ರೀಡಾಪಟುಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಸೇರಿ ಪ್ರತಿಭಟನೆ ಹಮ್ಮಿ ಕೊಳ್ಳಲಾಗುವುದು ಎಂದವರು ಎಚ್ಚರಿಸಿದ್ದಾರೆ. ಗ್ರಾಮಸ್ಥ ಶೈಲೇಶ್ ಉಪಸ್ಥಿತರಿದ್ದರು.