×
Ad

ಡಿಮೆನ್ಶಿಯಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ: ಡಾ.ಚಂದ್ರಶೇಖರ್

ಉಡುಪಿ: ಮಾನಸಿಕ ಆರೋಗ್ಯದ ಕುರಿತು ಕಾರ್ಯಾಗಾರ

Update: 2026-03-10 21:02 IST

ಉಡುಪಿ, ಮಾ.10: ಸಮಾಜದಲ್ಲೀಗ ನೆನಪಿನ ಶಕ್ತಿ, ಆಲೋಚನಾ ಸಾಮರ್ಥ್ಯ ಕುಂಠಿತಗೊಳ್ಳುವ ಡಿಮೆನ್ಶಿಯಾ ರೋಗಿಗಳ ಸಂಖ್ಯೆಯಲ್ಲಿ ಕಳವಳಕರ ರೀತಿಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ಈ ರೋಗದ ಲಕ್ಷಣ ಗಳೊಂದಿಗೆ ಪ್ರತಿದಿನ 3-4 ಮಂದಿ ನನ್ನನ್ನು ಭೇಟಿಯಾಗುತಿದ್ದಾರೆ ಎಂದು ಖ್ಯಾತ ಮನೋರೋಗ ತಜ್ಞ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶಿವಮೊಗ್ಗದ ಡಾ.ಸಿ.ಆರ್.ಚಂದ್ರಶೇಖರ್ ಹೇಳಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಉಡುಪಿ, ಜಿಲ್ಲಾಸ್ಪತ್ರೆ ಉಡುಪಿ, ಡಾ.ಎ ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ, ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಹಾಗೂ ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಇದರ ಸಂಯುಕ್ತ ಆಶ್ರಯದಲ್ಲಿ ಇಂದು ನಾಯರ್‌ಕೆರೆಯ ಐಎಂಎ ಭವನದಲ್ಲಿ ಆಯೋಜಿಸಲಾದ ‘ಉಡುಪಿ ಜಿಲ್ಲೆಯಲ್ಲಿ ಎರಡು ದಶಕಗಳ ಸಮುದಾಯ ಮಾನಸಿಕ ಆರೋಗ್ಯ ಸೇವೆ’ ಕುರಿತಾದ ಕಾರ್ಯಾಗಾರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಮುದಾಯ ಮಾನಸಿಕ ಆರೋಗ್ಯ ಸೇವೆ ಅಂಗವಾಗಿ ನಗರದ ಮನ:ಶಾಸ್ತ್ರ ಹಾಗೂ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ದೇಶದ 16ರಾಜ್ಯಗಳಲ್ಲಿ ಜನರ ಮಾನಸಿಕ ಆರೋಗ್ಯದ ಕುರಿತು ಅಧ್ಯಯನ ನಡೆಸಿದಾಗ, ಶೇ.16 ಮಂದಿಯಲ್ಲಿ ಕ್ಲಿನಿಕಲ್ ಮನೋರೋಗದ ಲಕ್ಷಣಗಳು ಕಂಡುಬಂದಿದ್ದವು. ಆದರೆ ಬಳಿಕ ಬಂದ ಕೋವಿಡ್ ನಂತರ ಈ ಸಂಖ್ಯೆ ದುಪ್ಪಟ್ಟುಗೊಂಡಿದೆ ಎಂದು ಡಾ.ಚಂದ್ರಶೇಖರ್ ತಿಳಿಸಿದರು.

ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಮನೋರೋಗ ತಜ್ಞರ ಬಳಿ ತೆರಳಲು ಈಗಲೂ ಜನ ಹಿಂಜರಿಯುತಿ ದ್ದಾರೆ. ಆದ್ದರಿಂದ ಮೊದಲು ಮಾನಸಿಕ ಆರೋಗ್ಯದ ಕುರಿತಂತೆ ಇರುವ ಸಾಮಾಜಿಕ ಕಳಂಕವನ್ನು ತೊಳೆಯ ಬೇಕಾಗಿದೆ. ಇದಕ್ಕಾಗಿ ಜನರಿಗೆ ಈ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಡಾ.ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಮಾನಸಿಕ ಅನಾರೋಗ್ಯಕ್ಕೆ ಯಾರೂ, ಯಾವುದೇ ಸಂದರ್ಭದಲ್ಲಿ ತುತ್ತಾಗ ಬಹುದು. ಮನುಷ್ಯ ಯಾವ ಗಳಿಗೆ ಯಲ್ಲೂ ಬೇರೆ ಬೇರೆ ಕಾರಣಗಳಿಗಾಗಿ ಡಿಫ್ರೆಶನ್‌ಗೆ ಒಳಗಾಗಬಹುದು. ಸರಿಯಾದ ಚಿಕಿತ್ಸೆಯಿಂದ ತ್ವರಿತಗತಿಯಲ್ಲಿ ಗುಣಮುಖವಾಗಬಹುದು. ಆದರೆ ಅದನ್ನು ಕಳಂಕದ ದೃಷ್ಟಿಯಲ್ಲಿ ನೋಡುವುದು ಸರಿಯಲ್ಲ ಎಂದರು.

ನಮ್ಮ ಶೇ.90ರಷ್ಟು ಮಂದಿ ಶಿಕ್ಷಕರಿಗೆ ‘ಕಲಿಕೆಯಲ್ಲಿನ ನ್ಯೂನತೆ’ (ಲರ್ನಿಂಗ್ ಡಿಸಾರ್ಡರ್) ಬಗ್ಗೆ ತಿಳಿದೇ ಇಲ್ಲ. ಇದು ವಿದ್ಯಾರ್ಥಿಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಅವರು ಎಡವುದಕ್ಕೆ ಕಾರಣವಾಗುತ್ತದೆ ಎಂದ ಡಾ.ಚಂದ್ರ ಶೇಖರ್, ಅಧ್ಯಯನವೊಂದು ಹೇಳುವಂತೆ ಶೇ.70ರಷ್ಟು ಮಂದಿ ಮೊಬೈಲ್, ಮಾದಕ ವಸ್ತುಗಳಂಥ ‘ಚಟ’ಕ್ಕೆ ಬಲಿಯಾಗಿ ದ್ದಾರೆ ಎಂದು ವಿವರಿಸಿದರು.

ಇದೀಗ ಇರಾನ್- ಇಸ್ರೇಲ್ ನಡುವೆ ಯುದ್ಧದ ಸನ್ನಿವೇಶ ಉದ್ಭಾವವಾ ಗಿರುವುದರಿಂದ ಜನರ ಚಿಂತೆ ಹೆಚ್ಚಾಗು ತ್ತಿದೆ. ಅತಿಯಾದ ಚಿಂತೆಗಳು ಮಾನಸಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲು ಕಾರಣವಾಗುತ್ತದೆ ಎಂದು ನಾಡಿನ ಪ್ರಮುಖ ಮಾನಸಿಕ ತಜ್ಞರಲ್ಲೊಬ್ಬರಾದ ಡಾ.ಸಿಆರ್‌ಸಿ ಹೇಳಿದರು.

ಹಿಂದೆಲ್ಲಾ 60ರ ಆಸುಪಾಸಿನಲ್ಲಿ ಕಾಣಿಸಿಕೊಳ್ಳುತಿದ್ದ ಹೃದಯಾಘಾತ ಇಂದು ಯುವಜನತೆಯಲ್ಲಿ ಹಾಗೂ ವಿದ್ಯಾರ್ಥಿ ಗಳಲ್ಲೂ ಕಂಡುಬರುತ್ತಿದೆ. ಇಂದು ಸಾಯುವವರಲ್ಲಿ ಶೇ.30ರಷ್ಟು ಮಂದಿ ಹೃದಯಾಘಾತದಿಂದಲೇ ಸಾಯುತಿ ದ್ದಾರೆ. ಅದೇ ರೀತಿ ಮಧುಮೇಹದಿಂದ ಶೇ.40ರಷ್ಟು ಮಂದಿ ನರಳುತಿದ್ದರೆ ಶೇ.59ರಷ್ಟು ಮಂದಿ ಬೊಜ್ಜು ದೇಹಿಗಳಾಗಿದ್ದಾರೆ ಎಂದವರು ಹೇಳಿದರು.

ಮಾನಸಿಕ ಆರೋಗ್ಯ ಎಂಬುದು ಇಂದು ಸ್ಫೋಟಕ ರೀತಿಯಲ್ಲಿ ಬೆಳೆಯುತ್ತಿದೆ. ಇಂದು ಜಗತ್ತಿನಲ್ಲಿ ಪ್ರತಿ ನಿಮಿಷಕ್ಕೊ ಬ್ಬರು ಆತ್ಮಹತ್ಯೆ ಮಾಡಿಕೊಳ್ಳುತಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತವೆ ಎಂದ ಅವರು, ಇದರಲ್ಲಿ ಅತಿಯಾದ ಮೊಬೈಲ್ ‘ಗೀಳು’ ಪ್ರಮುಖ ಕಾರಣವಾಗಿದೆ ಎಂದರು.

ಉಡುಪಿಯ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ, ಖ್ಯಾತ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಸ್ಪತ್ರೆಯ ಹಿರಿಯ ವೈದ್ಯ ಡಾ.ವಾಸುದೇವ ಎಸ್., ಜಿಲ್ಲಾಸ್ಪತ್ರೆಯ ಮನೋವೈದ್ಯ ಡಾ.ಸುನಿಲ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯೆ ಡಾ.ರಿತಿಕಾ, ಐಎಂಎ ಉಡುಪಿ-ಕರಾವಳಿ ಅಧ್ಯಕ್ಷ ಡಾ.ಅಶೋಕ್‌ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಮನೋವೈದ್ಯ ಡಾ.ಮಾನಸ್ ಎ.ಆರ್. ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News