ಕೆಮ್ಮಣ್ಣು ಸಂತೆಕಟ್ಟೆಯಲ್ಲಿ ಹಲಸು ಮತ್ತು ಹಣ್ಣಿನ ಮೇಳ
ಉಡುಪಿ, ಮೇ 8: ಸಂತೆಕಟ್ಟೆ ಕೆಮ್ಮಣ್ಣು ಲಿಟ್ಲ್ ಫ್ಲವರ್ ಹಾಲ್‌ನಲ್ಲಿ ಮೇ 8ರಿಂದ 10ರವರೆಗೆ ಹಲಸು ಮತ್ತು ಹಣ್ಣು ಮೇಳವನ್ನು ಆಯೋಜಿಸಲಾಗಿದೆ ಎಂದು ಮುಹಮ್ಮದ್ ಮುಖ್ತಾರ್ ಹುಸೇನ್ ಹೊನ್ನಾಳ ತಿಳಿಸಿದ್ದಾರೆ.
ಇಂದು ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಚಂದ್ರ ಹಲಸು, ಕೇಸರ್ ಹಲಸು, ಏಕದಶಿ ಹಾಗೂ ರುದ್ರಾಕ್ಷಿ ಈ ನಾಲ್ಕು ತಳಿಯ ಹಲಸು ಈ ಬಾರಿ ಮೇಳದ ಪ್ರಮುಖ ಆಕರ್ಷಣೆಯಾಗಿದೆ. ಈ ಹಲಸಿನ ಹಣ್ಣುಗಳನ್ನು ಆಂಧ್ರಪ್ರದೇಶದಿಂದ ತರಿಸಲಾಗಿದೆ ಎಂದರು.
ಇವುಗಳ ಜೊತೆಗೆ ಹಲಸಿನ ವಿವಿಧ ಬಗೆಯ ತಿಂಡಿಗಳು, ಖಾದ್ಯಗಳು ಇಲ್ಲಿ ಲಭ್ಯವಿರುತ್ತದೆ. ಹಲಸಿನ ಹಣ್ಣಿನ ಸಂಡಿಗೆ, ಹಪ್ಪಳ, ದೋಸೆ, ಹೋಳಿಗೆ, ಜಿಲೇಬಿ ಹಾಗೂ ವಿವಿಧ ಹಲಸಿನ ಉತ್ಪನ್ನಗಳ ಮಾರಾಟವೂ ನಡೆಯಲಿದೆ ಎಂದರು.
ಮೂರು ದಿನಗಳ ಮೇಳದಲ್ಲಿ 30ಕ್ಕಿಂತಲೂ ಅಧಿಕ ಸ್ಟಾಲ್‌ಗಳು ಇರಲಿದ್ದು, ಹಲಸಿನ ಹಣ್ಣಿನ ಸ್ಟಾಲ್ ಇರಲಿವೆ. ಜೊತೆಗೆ ವಿವಿಧ ಮಾವಿನ ಹಣ್ಣು, ಅನಾನಸ್ ಹಾಗೂ ಇತರ ಹಣ್ಣಿನ ಸ್ಟಾಲ್ ಸಹ ಇರಲಿದೆ. ಸ್ಥಳೀಯ ಹಾಗೂ ವಿವಿಧ ಜಿಲ್ಲೆಗಳ ವಿವಿಧ ತಳಿಯ ಮಾವಿನಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ.
ಪ್ರತಿದಿನ ಸಂಜೆ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಿಫಾದ್, ರಾಹಿಲ್ ಅಹಮದ್, ರತ್ನಾಕರ್ ಭಂಡಾರಿ, ಮುಸ್ತಫಾ ಉಪಸ್ಥಿತರಿದ್ದರು.