×
Ad

ರಾಜ್ಯದಲ್ಲಿ ಅಂತರ್ಜಲ ವೃದ್ಧಿಸಲು ಅಗತ್ಯ ಕ್ರಮ: ಸಚಿವ ಬೋಸರಾಜು

Update: 2026-05-13 20:48 IST

ಉಡುಪಿ, ಮೇ 13: ಅಂತರ್ಜಲ ವೃದ್ಧಿಸಲು ಬೇಕಾದ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. 447 ಏತ ನೀರಾವರಿ ಮೂಲಕ ಕೆರೆಗಳನ್ನು ತುಂಬುವ ಕಾರ್ಯ ಮಾಡುತ್ತಿದ್ದೇವೆ. ಕೆರೆ ತುಂಬುವುದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ಬೆಂಗಳೂರು, ಕೋಲಾರ, ಚಿಕ್ಕಬಾಳ್ಳಪುರ ಜಿಲ್ಲೆಗಳಲ್ಲಿನ ಕೆರೆಗಳನ್ನು ತುಂಬುವ ಮೂಲಕ 1500 ಅಡಿ ಬದಲು 250 ಅಡಿಯಲ್ಲಿ ನೀರು ಸಿಗುವ ರೀತಿಯಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಎಂದು ರಾಜ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಹೇಳಿದ್ದಾರೆ.

ಮಣಿಪಾಲ ಪ್ರಗತಿನಗರದಲ್ಲಿ ನಿರ್ಮಾಣವಾಗುತ್ತಿರುವ ಉಡುಪಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕಟ್ಟಡ ಕಾಮಗಾರಿಯನ್ನು ಬುಧವಾರ ಪರಿಶೀಲಿಸಿ ಅವರು ಮಾಧ್ಯಮದವರೊಂದಿಗೆ ಮಾತನಾಡುತಿದ್ದರು.

ಸುಮಾರು 427 ಏತ ನೀರಾವರಿ ಮೂಲಕ 1184 ಕೆರೆಗಳನ್ನು ತುಂಬಲಾಗುತ್ತಿದೆ. ರಾಜ್ಯದ ಮೂರು ವ್ಯಾಲಿ ಗಳಲ್ಲಿನ ಎಲ್ಲ 700 ಕೆರೆಗಳನ್ನು ತುಂಬುವ ಕಾರ್ಯ ನಡೆದರೆ ಆರು ಜಿಲ್ಲೆಗಳ ರೈತರಿಗೆ ಅನುಕೂಲವಾಗುತ್ತದೆ. ಆ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ. ಒಟ್ಟಾರೆ ಅಂತರ್ಜಲ ವೃದ್ಧಿ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದರು.

ಹಿಂದಿನ ಸರಕಾರದಲ್ಲಿ ನೀರಾವರಿ ಇಲಾಖೆಯಲ್ಲಿ 1645ಕೋಟಿ ರೂ. ವಾರ್ಷಿಕ ಬಜೆಟ್ ಇತ್ತು. ಆದರೆ ಅವರು 12696ಕೋಟಿ ರೂ. ಕಾಮಗಾರಿ ಬಾಕಿ ಇಟ್ಟು ಹೋಗಿದ್ದಾರೆ. ಅವರ ಕಾಮಗಾರಿ 2000ಕೋಟಿ ರೂ. ಒಳಗೆ ಇರಬೇಕಾಗಿತ್ತು. ಇದು ನಮಗೆ ಈಗ ದೊಡ್ಡ ಹೊರೆಯಾಗಿದೆ. ಅದನ್ನು ಸರಿಪಡಿಸುವ ಕಾರ್ಯ ಮಾಡುತ್ತಿದ್ದೇವೆ. ನಮ್ಮ ಇಲಾಖೆಯ ವಾರ್ಷಿಕ ಬಜೆಟ್ 3400ಕೋಟಿ ರೂ.ವರೆಗೆ ಹೆಚ್ಚಿಸಿದ್ದೇವೆ ಎಂದರು.

ತಂಡದಿಂದ ಪರಿಶೀಲಿಸಿ ವರದಿ: ಕಾರ್ಕಳ ಎಣ್ಣೆಹೊಳೆ ಏತ ನೀರಾವರಿ ಕಾಮಗಾರಿ ಅವ್ಯವಹಾರದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕಾಮಗಾರಿ ಇತ್ತೀಚೆಗಷ್ಟೆ ಪೂರ್ಣಗೊಂಡಿದೆ. ಅದನ್ನು ಪರಿಶೀಲಿಸಲು ಇಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ. ಕರಾವಳಿಯಲ್ಲಿ ಉಪ್ಪು ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಅಣೆಕಟ್ಟಿನ ಸಾಧಕ ಬಾಧಕ, ಸೊರಿಕೆ ಸರಿಪಡಿಸಲು ಕ್ರಮ ತೆಗೆದುಕೊಳ್ಳುವಂತೆ ಇಂಜಿನಿಯರ್‌ಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾ ಗಿದೆ. ಈ ಸಂಬಂಧ ವಾರದೊಳಗೆ ತಂಡ ಆಗಮಿಸಿ ಪರಿಶೀಲಿಸಿ ವರದಿ ನೀಡಲಿದೆ. ಅದರಂತೆ ಶೀಘ್ರವೇ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಕೇಂದ್ರದ ಸರ್ವೆ ಪ್ರಕಾರ ರಾಜ್ಯದಲ್ಲಿ 37ಲಕ್ಷ ಕೊಳವೆ ಬಾವಿಗಳು ಇವೆ. ಇನ್ನು ಅನಧಿಕೃತ ಬಾವಿಗಳು ತುಂಬಾ ಇವೆ. ಕೊಳವೆ ಬಾವಿ ಕೊರೆಯಲು ಗ್ರಾಪಂ ಅನುಮತಿ ಕಡ್ಡಾಯ ಮಾಡಲಾಗಿದೆ. ಅದೇ ರೀತಿ ಗೈಡ್‌ಲೈನ್ಸ್ ಪಾಲನೆಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಸದ್ಯ ರಾಜ್ಯದ 12 ಕಡೆಗಳಲ್ಲಿ ವಿಜ್ಞಾನ ಕೇಂದ್ರ ಇದ್ದು, ಉಳಿದ ಕಡೆ ಕಾಮಗಾರಿ ಪ್ರಗತಿಯಲ್ಲಿದೆ. ಕೋಲಾರ, ಚಿತ್ರದುರ್ಗ ವಿಜಯನಗರ, ಶಿವಮೊಗ್ಗ, ರಾಯಚೂರು, ಚಿಕ್ಕಮಗಳೂರು, ಯಾದರಿಗಿ ಜಿಲ್ಲೆಗಳಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ಮಾಡುತ್ತಿದ್ದೇವೆ. ಇದರಲ್ಲಿ ವಿಜಯ ನಗರ 50ಕೋಟಿ ರೂ. ಹಾಗೂ ಉಳಿದವು 24ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿರ್ದೇಶಕ ಸದಾಶಿವ ಪ್ರಭು ಮೊದಲಾದವರು ಉಪಸ್ಥಿತರಿದ್ದರು.

‘ನಾಲ್ಕೈದು ತಿಂಗಳಲ್ಲಿ ಉಡುಪಿ ಕೇಂದ್ರ ಪೂರ್ಣ’

ಉಡುಪಿ ತಾಲೂಕಿನ ಅಲೆವೂರು ಗ್ರಾಪಂ ವ್ಯಾಪ್ತಿಯ ಪ್ರಗತಿ ನಗರದ ಐದು ಎಕರೆ ಜಾಗದಲ್ಲಿ ನಿರ್ಮಿಸಲಾಗುತ್ತಿರುವ ಉಡುಪಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕಾಮಗಾರಿಯು ಮುಂದಿನ ನಾಲ್ಕೈದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿರ್ದೇಶಕ ಸದಾಶಿವ ಪ್ರಭು ತಿಳಿಸಿದರು.

ಎರಡು ವರ್ಷಗಳ ಹಿಂದೆ ಕೇಂದ್ರ ಮಂಜೂರಾಗಿದ್ದು, ಜಾಗದ ವಿವಾದ ದಿಂದ ಕಾಮಗಾರಿ ವಿಳಂಬವಾಗಿದೆ. ಈ ಕೇಂದ್ರದ ಕಟ್ಟಡಕ್ಕೆ 4ಕೋಟಿ ರೂ. ಹಾಗೂ ಗ್ಯಾಲರಿ ನಿರ್ಮಾಣಕ್ಕೆ 2.5ಕೋಟಿ ರೂ. ಬಿಡುಗಡೆಯಾಗಿದೆ. ಉಡುಪಿ ಮೂಲಕ ವಿಜ್ಞಾನಿ ಯು.ಆರ್.ರಾವ್ ಹೆಸರಿನಲ್ಲಿ ಈ ಕೇಂದ್ರ ಮಂಜೂರಾಗಿದ್ದು, ಇದರಲ್ಲಿ ಅವರ ಕ್ಷೇತ್ರವಾದ ಏರೋ ಸ್ಪೆಸ್‌ಗೆ ಸಂಬಂಧಿಸಿದ ಗ್ಯಾಲರಿ ಇರುತ್ತದೆ. ಅದೇ ರೀತಿ ಮಿಸ್ಟ್ರಿಸ್ ಆಫ್ ಓಷಿಯನ್, ಫನ್ ಸೈಯನ್ಸ್ ಹಾಗೂ ಔಟ್ ಡೋರ್ ಗ್ಯಾಲರಿಗಳು ಇರುತ್ತವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News