ಕೊಡವೂರು: ಮೇ18ಕ್ಕೆ ಮಹಾರುದ್ರಯಾಗದಲ್ಲಿ ಬೃಹತ್ ಉದ್ಯೋಗ
ಉಡುಪಿ, ಮೇ 13: ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನ ದಲ್ಲಿ ಪ್ರಸಾದ್‌ರಾಜ್ ಕಾಂಚನ್ ನೇತೃತ್ವ ದಲ್ಲಿ ನಡೆಯಲಿರುವ ಮಹಾ ರುದ್ರಯಾಗದ ಪ್ರಯುಕ್ತ ಮೇ18ರಂದು ಕೊಡವೂರಿನ ವಿಪ್ರಶ್ರೀ ಸಭಾಭವನ ದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಉದ್ಯೋಗ ಮೇಳವನ್ನು ಸಂಯೋಜಿಸಲಿರುವ ಸಾರಲತಾ ಐಟಿ ಸೊಲ್ಯೂಷನ್ಸ್‌ನ ಹಾಗೂ ಉದ್ಯೋಗ ಮೇಳದ ಮುಖ್ಯಸ್ಥೆ ಡಾ.ದಿವ್ಯಾ ರಾಣಿ ತಿಳಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಯುವಜನತೆಗೆ ಉದ್ಯೋಗ, ಇಂಟರ್ನ್‌ಶಿಪ್ ಹಾಗೂ ವೃತ್ತಿ ಮಾರ್ಗದರ್ಶನವನ್ನು ನೀಡುವ ಉದ್ದೇಶದಿಂದ ಈ ಉದ್ಯೋಗ ಮೇಳವನ್ನು ಹಮ್ಮಿ ಕೊಳ್ಳಲಾಗಿದೆ. ಇದನ್ನು ಸಾರಲತಾ ಐಟಿ ಸೊಲ್ಯೂಷನ್ಸ್ ಮತ್ತು ಸರಳಾ ಬಾಬುರಾವ್ ಚಾರಿಟೇಬಲ್ ಟ್ರಸ್ಟ್ ವತಿ ಯಿಂದ ಶ್ರೀಶಂಕರನಾರಾಯಣ ದೇವಸ್ಥಾನ ಹಾಗೂ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದರು.
ಈ ಮೇಳದಲ್ಲಿ 70ಕ್ಕೂ ಅಧಿಕ ದೇಶದ ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸಲಿದ್ದು, 9000ಕ್ಕೂ ಅಧಿಕ ಉದ್ಯೋಗಾ ವಕಾಶಗಳು ಲಭ್ಯವಿರಲಿವೆ. ಈಗಾಗಲೇ 1,600ಕ್ಕೂ ಅಧಿಕ ಮಂದಿ ಮೇಳಕ್ಕೆ ಹೆಸರು ನೊಂದಾಯಿಸಿ ಕೊಂಡಿ ದ್ದಾರೆ. 2000ಕ್ಕ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯನ್ನು ಹೊಂದಿದ್ದೇವೆ. ಉದ್ಯೋಗ ಮೇಳ ಬೆಳಗ್ಗೆ 9:00ರಿಂದ ಸಂಜೆ 4:00ರವರೆಗೆ ನಡೆಯಲಿದೆ ಎಂದರು.
ಮ್ಯಾನೇಜ್ಮೆಂಟ್, ಇಂಜಿನಿಯರಿಂಗ್, ಉತ್ಪಾದನಾ ವಲಯ, ಆರೋಗ್ಯ ಸೇವೆ, ಹೋಟೆಲ್, ಬ್ಯಾಂಕಿಂಗ್ ಮತ್ತು ಹಣಕಾಸು, ಮಾರಾಟ ಮತ್ತು ಮಾರುಕಟ್ಟೆ, ತಾಂತ್ರಿಕ ಸೇವೆಗಳು, ಲಾಜಿಸ್ಟಿಕ್ಸ್ ಹಾಗೂ ಸೇವಾ ವಲಯ, ಕೌಶಲ್ಯ ವಿವಿಧ ಕ್ಷೇತ್ರಗಳ 70ಕ್ಕೂ ಅಧಿಕ ಪ್ರತಿಷ್ಠಿತ ಕಂಪೆನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ ಎಂದರು.
ಟೊಯೋಟಾ-ಕಿರ್ಲೋಸ್ಕರ್, ಇನ್ವೆಂಜರ್ ಟೆಕ್ನಾಲಜೀಸ್, ಮೆಜೆಸ್ಟಿಕ್ ಗ್ಲೋಬಲ್ ಲಾಜಿಸ್ಟಿಕ್ಸ್, ಅನಾನ್ ಗ್ರೂಪ್, ವಿನ್‌ಮ್ಯಾನ್ ಸಾಫ್ಟ್‌ವೇರ್, ಅಮೆಜಾನ್, ಬ್ರೇವರಾ ಟೆಕ್ನಾಲಜೀಸ್, ವಿಆರ್‌ಎನ್ ಇನ್ಫೋಟೆಕ್, ಡಾ. ರೆಡ್ಡೀಸ್ ಫೌಂಡೇಶನ್, ಸ್ವಿಗ್ಗಿ, ಎಚ್‌ಡಿಎಫ್‌ಸಿ ಬ್ಯಾಂಕ್, ಮಣಿಪಾಲ್ ಪೇಮೆಂಟ್ ಅಂಡ್ ಐಡೆಂಟಿಟಿ ಮತ್ತು ಅಕೋಲೇಡ್ ಸೇರಿದಂತೆ ಅನೇಕ ಪ್ರಮುಖ ಕಂಪನಿಗಳು ಪಾಲ್ಗೊಳ್ಳಲಿವೆ.
ಪದವಿ, ಡಿಪ್ಲೊಮಾ, ಇಂಜಿನಿಯರಿಂಗ್, ಐಟಿಐ, ಪಿಯುಸಿ, ಎಸೆಸೆಲ್ಸಿ ಅಲ್ಲದೇ ವಿವಿಧ ಕೌಶಲ್ಯ ಆಧಾರಿತ ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ 6,000 ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸುವುದು, ಕಂಪನಿ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸುವುದು ಹಾಗೂ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಉಡುಪಿಯಲ್ಲಿ ಉದ್ಯೋಗ ಅವಕಾಶಗಳನ್ನು ಅರಿಯುವ ಅವಕಾಶ ಸಿಗಲಿದೆ ಎಂದು ಡಾ.ದಿವ್ಯಾ ರಾಣಿ ತಿಳಿಸಿದರು.
ಈ ಬಾರಿ ವಿಶೇಷವಾಗಿ ಸ್ಟಾರ್ಟ್‌ಅಪ್ ಹಾಗೂ ಸ್ವಯಂ ಉದ್ಯೋಗ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಮೊದಲ ಬಾರಿಗೆ ಉಡುಪಿಯಲ್ಲಿ ಪರಿಚಯಿಸಲಾಗುತ್ತಿದೆ. ಮಣಿಪಾಲ್ ಯುನಿವರ್ಸಲ್ ಬಿಸಿನೆಸ್ ಇನ್‌ಕ್ಯೂಬೇಟರ್ಸ್, ಯೆನೆಪೊಯ ಟೆಕ್ನಾಲಜಿ ಇನ್‌ಕ್ಯೂಬೇಟರ್ಸ್ ಮತ್ತು ರುಡೈಟಿ ಸಂಸ್ಥೆಗಳು ಉದ್ಯಮ ಆರಂಭಿಸಲು ಬಯಸುವ ಯುವಕರಿಗೆ ಮಾರ್ಗದರ್ಶನ ಹಾಗೂ ಮೆಂಟರ್‌ಶಿಪ್ ನೀಡಲಿವೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉದ್ಯೋಗ ಮೇಳದ ಕಾರ್ಯದರ್ಶಿ ರೇವತಿ ನಾಡಿಗೇರ್, ಸಾತ್ವಿಕ್ ಎಸ್ ಆಚಾರ್ಯ, ಧೃವ್‌ರಾಜ್ ಉಪಸ್ಥಿತರಿದ್ದರು.