ಎಸ್‌ಐಆರ್ ಬಹುಸಂಖ್ಯಾತರ ಸಂವಿಧಾನಿಕ ಹಕ್ಕು ಕಿತ್ತುಕೊಳ್ಳುವ ಕುತಂತ್ರ: ಪ್ರೊ.ಫಣಿರಾಜ್
ಕರ್ನಾಟಕದಲ್ಲಿ ಎಸ್‌ಐಆರ್ ರದ್ದುಗೊಳಿಸುವಂತೆ ಆಗ್ರಹಿಸಿ ಧರಣಿ
ಉಡುಪಿ, ಮೇ 30: ಎಸ್‌ಐಆರ್ ಎಂಬುದು ಕೇವಲ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಾಗಿ ಉಳಿದಿಲ್ಲ. ಅದನ್ನು ದೇಶದ ಬಹುಸಂಖ್ಯಾತರ ನಾಗರಿಕರ ಹಕ್ಕು, ಪೌರತ್ವ, ಸಂವಿಧಾನಿಕ ಹಕ್ಕುಗಳನ್ನು ಕಿತ್ತು ಕೊಳ್ಳುವ ಕುತಂತ್ರದ ಭಾಗವಾಗಿ ಜಾರಿಗೆ ತರಲಾಗುತ್ತಿದೆ ಎಂದು ಹಿರಿಯ ಚಿಂತಕ ಪ್ರೊ.ಫಣಿರಾಜ್ ಆರೋಪಿಸಿದ್ದಾರೆ.
ಎಸ್‌ಐಆರ್ ವಿರೋಧಿ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ಉಡುಪಿ ಇದರ ನೇತೃತ್ವದಲ್ಲಿ ಎಸ್‌ಐಆರ್ ರದ್ದುಗೊಳಿಸುವಂತೆ ಆಗ್ರಹಿಸಿ ಶನಿವಾರ ಉಡುಪಿ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಎದುರು ಹಮ್ಮಿಕೊಳ್ಳಲಾದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಚುನಾವಣಾ ಆಯೋಗದ ಅಧಿಕಾರ ಮತದಾರ ಪಟ್ಟಿಯನ್ನು ತಯಾರಿಸು ವುದೇ ಹೊರತು ಭಾರತದ ಮತದಾರರ ಪೌರತ್ವ ಪಶ್ನೆ ಮಾಡುವುದು ಅಲ್ಲ. ಎಸ್‌ಐಆರ್ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಭಾರತದ 90ಕೋಟಿ ಜನರ ಪೌರತ್ವವನ್ನು ಕಟಕಟೆಯನ್ನು ನಿಲ್ಲಿಸಿದೆ. ಇದು ಜನವಿರೋಧಿ ತೀರ್ಪು ಆಗಿದೆ. ಶಾಸಕಾಂಗ, ಚುನಾವಣಾ ಆಯೋಗ ಸಂವಿಧಾನ ವಿರೋಧಿ ಯಾದರೆ, ಸುಪ್ರೀಂ ಕೋರ್ಟ್ ಜನರ ಪರ ಮಾತನಾಡಿ ದ್ದರೆ ಸಂವಿಧಾನ ವನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಹಾಗಾಗಿ ಬೀದಿಗೆ ಇಳಿಯುವುದು ಅನಿವಾರ್ಯವಾಗಿದೆ ಎಂದರು.
ಎನ್‌ಆರ್‌ಸಿಯನ್ನು ಹಿಂಬಾಗಿಲಿನಿಂದ ನುಗ್ಗಿಸಿ ಎಸ್‌ಐಆರ್ ಪ್ರತ್ರಿಯೆ ತರಲಾಗಿದೆ. ಮೇಲ್ನೋಟಕ್ಕೆ ಇದು ಮತದಾ ರರ ಪಟ್ಟಿಯ ಸಮಗ್ರ ಪರಿಷ್ಕರಣೆಯಂತೆ ಕಂಡರೂ ಅದರ ಮೂಲ ಉದ್ದೇಶ ಪೌರತ್ವ ಸಾಬೀತು ಪಡಿಸುವ ಹುನ್ನಾರದ ಭಾಗವಾಗಿದೆ. ಇದು ನಮ್ಮ ಮಾಡುವ ಇಲ್ಲವೇ ಮಡಿ ಹೋರಾಟ. ಯಾಕೆಂದರೆ ಕರ್ನಾಟಕದಲ್ಲಿ ಎಸ್‌ಐಆರ್‌ನ್ನು ರದ್ದುಗೊಳಿಸ ಬೇಕು ಎಂದು ಅವರು ಆಗ್ರಹಿಸಿದರು.
ಸಾಮಾಜಿಕ ಕಾರ್ಯಕರ್ತ ಇದ್ರೀಸ್ ಹೂಡೆ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಅಧಿಕಾರಿ ಎಂಬುದು ಸುಪ್ರೀಂ. ಇಂದು ಅದನ್ನು ನಿರಾಕರಿಸುವ ಹುನ್ನಾರ ನಡೆಸಲಾಗುತ್ತಿದೆ. ಚುನಾವಣಾ ಆಯೋಗವನ್ನು ಬಲಹೀನವನ್ನಾಗಿಸಲಾಗುತ್ತಿದೆ. ಆಯೋಗ ಒಂದು ಪಕ್ಷವನ್ನು ಸಮರ್ಥಿಸಿ ಕೊಂಡು, ಅವರ ಪ್ರಣಾಳಿಕೆಗೆ ಅನುಗುಣವಾಗಿ ನಡೆದುಕೊಳ್ಳುತ್ತಿದೆ. ಎಸ್‌ಐಆರ್ ಮೂಲಕ ಮತದಾರರ ಅಧಿಕಾರವನ್ನು ಕಿತ್ತುಕೊಳ್ಳುವ ಕಾರ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಎಸ್‌ಡಿಪಿಐ ಮುಖಂಡ ಶಾಹೀದ್ ಅಲಿ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ್, ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿದರು. ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು.
ಧರಣಿಯಲ್ಲಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ, ಸಿಐಟಿಯು ಮುಖಂಡರಾದ ಕವಿರಾಜ್, ಬಲ್ಕೀಸ್, ವಿವಿಧ ಸಂಘಟನೆಗಳ ಪ್ರಮುಖರಾದ ಹನೀಫ್ ಮೂಳೂರು, ವಾಲ್ಟರ್ ಪಿಂಟೋ, ಆಲ್ವಿನ್ ನೋರನ್ಹಾ, ಜಾಯಿಸ್ ಡೇಸಾ, ಶಾರದಾ ಮೂಡಸಗ್ರಿ, ಜಫರುಲ್ಲಾ, ಇಕ್ಬಾಲ್ ಮನ್ನಾ, ಹುಸೇನ ಕೋಡಿಬೆಂಗ್ರೆ ಮೊದಲಾದವರು ಉಪಸ್ಥಿತರಿದ್ದರು.
‘ಎಸ್‌ಐಆರ್ ತಡೆಯುವಂತೆ ದಾವೆ ಹೂಡಿ’
ರಾಜ್ಯ ಸರಕಾರ ತಕ್ಷಣವೇ ಎಲ್ಲ ಮತದಾರರ ಅರ್ಹತೆ ಸಾಬೀತು ಪಡಿಸುವ ಕಾಗದ ಪತ್ರಗಳನ್ನು ಒದಗಿಸುವ ಕಾರ್ಯಸಾಧ್ಯ ಸಮಯದ ವರೆಗೆ ಎಸ್‌ಐಆರ್ ಪ್ರಕ್ರಿಯೆ ತಡೆಯುವಂತೆ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಬೇಕು.
ಅರ್ಹ ಮತದಾರರಿಗೆ ಅಗತ್ಯವಾದ ಅಧಿಕೃತ ಕಾಗದ ಪತ್ರವನ್ನು ಒದಗಿಸುವುದಕ್ಕೆ ಶೀಘ್ರ ಸಕ್ಷಮ ಕ್ರಮ ಕೈಗೊಳ್ಳ ಬೇಕು. ಎಲ್ಲ ಜಿಲ್ಲೆಗಳಲ್ಲಿ ಅಗತ್ಯ ಇರುವಷ್ಟು ಸಂಖ್ಯೆಯಲ್ಲಿ ಮತದಾರರ ಸಹಾಯ ಕೇಂದ್ರಗಳನ್ನು ಸ್ಥಾಪಿಸಿ ಅರ್ಹ ಮತದಾರರಿಗೆ ಸಹಾಯ ನೀಡುವಂತೆ ಜಿಲ್ಲಾಡಳಿತಕ್ಕೆ ಆದೇಶಿಸ ಬೇಕು. ಪ್ರಸ್ತುತ ಎಸ್‌ಐಆರ್ ಪ್ರತ್ರಿಯೆ ಭಾಗವಾಗಿ ರುವ ತಾರ್ಕಿಕವಾಗಿ ತಾಳೆಯಾಗದಿರುವಿಕೆ ನಡಾವಳಿಗಳನ್ನು ಕೈ ಬಿಡುವಂತೆ ಆಗ್ರಹಿಸಬೇಕು ಎಂಬ ಬೇಡಿಕೆಗಳನ್ನು ಎಸ್‌ಐಆರ್ ವಿರೋಧಿ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ಉಡುಪಿ ಮನವಿಯಲ್ಲಿ ತಿಳಿಸಿದೆ.