ಅಮಾಸೆಬೈಲು: ಯಕ್ಷಗಾನ ಕಲಾರಂಗದ 97ನೆ ಮನೆ ಹಸ್ತಾಂತರ
ಉಡುಪಿ: ವಿದ್ಯಾಪೋಷಕ್ ಯಕ್ಷಗಾನ ಕಲಾರಂಗದ ವತಿಯಿಂದ ಅಮಾಸೆಬೈಲಿನ ಸರಕಾರಿ ಪ್ರೌಢಶಾಲೆಯ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಾನ್ವಿತ ಇವಳಿಗೆ ಕುಂದಾಪುರ ತಾಲೂಕಿನ ಅಮಾಸೆಬೈಲಿನಲ್ಲಿ ಉಡುಪಿ ಅಂಬಲಪಾಡಿಯ ಮೀರಾ ರಾಮಮೂರ್ತಿ ಭಟ್ಟ ಮತ್ತು ಮಕ್ಕಳು ರಾಮಮೂರ್ತಿ ಭಟ್ಟ ಇವರ ಸ್ಮರಣೆಯಲ್ಲಿ ನಿರ್ಮಿಸಿದ ನೂತನ ಮನೆ ‘ರಾಮಮೂರ್ತಿ’ಯನ್ನು ಗುರುವಾರ ಫಲಾನುಭವಿಗಳಿಗೆ ಹಸ್ತಾಂತರ ಗೊಳಿಸಲಾಯಿತು.
ಅಮಾಸೆಬೈಲಿನ ಸುರೇಶ್ ಕೊಠಾರಿ ಮತ್ತು ಶೋಭಾ ದಂಪತಿ ಪುತ್ರಿಯಾದ ಸಾನ್ವಿತಳಿಗೆ ದಾನಿಗಳ ಮೂಲಕ ನಿರ್ಮಿಸಿದ ಮನೆಯನ್ನು ಮೀರಾ ರಾಮಮೂರ್ತಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬ ದಾಸರ ಕೀರ್ತನೆಯಂತೆ ಭಗವಂತ ನನಗೆ ನೀಡಿದ್ದರಲ್ಲಿ ಒಂದಂಶವನ್ನು ದಾನಮಾಡಿದ್ದೇನಷ್ಟೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಕಿರಣ್‌ಕುಮಾರ್ ಕೊಡ್ಗಿ ಮಾತನಾಡಿ, ಕಲಾರಂಗ ನೇತೃತ್ವದಲ್ಲಿ ಯಾವ ಆಡಂಬರ, ದುಂದುವೆಚ್ಚ ವಿಲ್ಲದೇ ಮಾಡುತ್ತಿರುವ ಸಮಾಜಪರ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ರಾಮಮೂರ್ತಿ ಅವರ ಮಕ್ಕಳಾದ ಮನು ಭಾರದ್ವಾಜ್, ಡಾ. ಪೂರ್ಣಶ್ರೀ ಉಪಸ್ಥಿತರಿದ್ದರು.
ಕೋಟೇಶ್ವರ ಗೀತಾ ಎಚ್. ಎಸ್. ಎನ್. ಫೌಂಡೇಶನ್ ಅಧ್ಯಕ್ಷ ಎ. ಶಂಕರ ಐತಾಳ್, ಶಿಕ್ಷಣಪ್ರೇಮಿ ಸಖಾರಾಮ್ ಸೋಮಯಾಜಿ, ಸಹನಾ ಭಾರದ್ವಾಜ್, ಮೂಕಾಂಬಿಕಾ ವಾರಂಬಳ್ಳಿ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ನಿರಂಜನ ಬಲ್ಲಾಳ್, ಲಲಿತಾ ಬಲ್ಲಾಳ್, ಯಶೋದಾ ನಾಗೇಶನ್, ಶ್ಯಾಮಲಾ ಪ್ರಸಾದ್, ದೇವಕಿ ಉಪಸ್ಥಿತರಿದ್ದರು.
ಯಕ್ಷಗಾನ ಕಲಾರಂಗದ ಪ್ರೊ. ಕೆ. ಸದಾಶಿವ ರಾವ್, ವಿದ್ಯಾಪ್ರಸಾದ್, ಯು.ವಿಶ್ವನಾಥ ಶೆಣೈ, ವಿಜಯಕುಮಾರ್ ಮುದ್ರಾಡಿ, ಭುವನಪ್ರಸಾದ್ ಹೆಗ್ಡೆ, ಅನಂತರಾಜ್ ಉಪಾಧ್ಯ, ಡಾ.ರಾಜೇಶ್ ನಾವುಡ, ಹಿರಿಯಣ್ಣ ಕಿದಿಯೂರು, ಕೆ. ಅಜಿತ್ ಕುಮಾರ್, ಡಾ. ಪ್ರತಿಮಾ ಜೆ. ಆಚಾರ್ಯ, ಜಯರಾಮ ಪಡಿಯಾರ್ ಹಾಗೂ ಡಾ. ಶ್ರೀಕಾಂತ್ ಸಿದ್ಧಾಪುರ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.
ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.