×
Ad

ಕೊಲ್ಲೂರು ಶ್ರೀಮೂಕಾಂಬಿಕಾ ದೇವಿ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್

ವಿಶೇಷ ಪೂಜೆ, ಬೆಳ್ಳಿ ಖಡ್ಗ ಸಮರ್ಪಣೆ: ದೇವಳದಿಂದ ದಳಪತಿಗೆ ಗೌರವ

Update: 2026-06-12 21:02 IST

ಕುಂದಾಪುರ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಶುಕ್ರವಾರ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದರು.

ದೇವಸ್ಥಾನದ ವತಿಯಿಂದ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳ ಲಾಯಿತು. ದೇವಳದ ತಂತ್ರಿಗಳಾದ ರಾಮಚಂದ್ರ ಅಡಿಗ, ನಿತ್ಯಾನಂದ ಅಡಿಗ, ಅರ್ಚಕ ವಿಘ್ನೇಶ್ ಅಡಿಗ ಹಾಗೂ ಸುರೇಶ್ ಭಟ್ ಅವರ ಮಾರ್ಗದರ್ಶನ ದಲ್ಲಿ ಸಂಕಲ್ಪ, ತುಪ್ಪದ ದೀಪಾರಾಧನೆ, ಮಂಗಳಾರತಿ ಹಾಗೂ ಪ್ರಾರ್ಥನೆ ನೆರವೇರಿಸಿ, ವಿಜಯ್ ಅವರಿಗೆ ಪ್ರಸಾದ ನೀಡಿ ಆಶೀರ್ವದಿಸಲಾಯಿತು.

ಈ ವೇಳೆ ವಿಜಯ್ ಗರ್ಭಗುಡಿ ಸುತ್ತ ಪ್ರದಕ್ಷಿಣೆ ಬಂದು ಆದಿ ಶಂಕರಾಚಾರ್ಯ ಪೀಠ, ಚಿನ್ನದ ರಥ, ಶ್ರೀವೀರಭದ್ರ ಹಾಗೂ ಪರಿಹಾರ ದೇವತೆಗಳ ದರ್ಶನ ಪಡೆದರು. ಮುಖ್ಯಮಂತ್ರಿ ವಿಜಯ್ ಅವರನ್ನು ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ ಹಾಗೂ ಕಾರ್ಯನಿರ್ವಹಣಾಧಿಕಾರಿ ಪ್ರಶಾಂಕತ್ ಕುಮಾರ್ ಶೆಟ್ಟಿ ಗೌರವಿಸಿದರು.

ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರನ್ನು ಗೌರವಿಸಲು ದೇವಸ್ಥಾನದ ವತಿಯಿಂದ ಆಸನಗಳನ್ನು ಸಿದ್ಧಪಡಿಸ ಲಾಗಿತ್ತು. ಆದರೆ ಅವುಗಳನ್ನು ಬದಿಗಿರಿಸಿ, ನಿಂತುಕೊಂಡೇ ಗೌರವ ಸ್ವೀಕರಿಸಿದ ಅವರು ತಮ್ಮ ಸರಳತೆಯನ್ನು ಪ್ರದರ್ಶಿಸಿದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ.ಅಭಿಲಾಷ್, ರಾಜೇಶ್ ಕಾರಂತ್, ರಘುರಾಮ ದೇವಾಡಿಗ ಆಲೂರು, ಸುರೇಂದ್ರ ಶೆಟ್ಟಿ, ಧನಾಕ್ಷಿ ವಿಶ್ವನಾಥ್ ಪೂಜಾರಿ, ಸುಧಾ ಬೈಂದೂರು ಇದ್ದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಉಪ ವಿಭಾಗಾಧಿಕಾರಿ ರಶ್ಮೀ ಎಸ್.ಆರ್., ಗೃಹರಕ್ಷಕದಳದ ಸೆಕೆಂಡ್ ಇನ್ ಕಮಾಂಡೆಂಟ್ ರಾಜೇಶ್ ಕೆ.ಸಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬಿಗಿ ಪೊಲೀಸ್ ಭದ್ರತೆ: ಮುಖ್ಯಮಂತ್ರಿ ವಿಜಯ್ ಅವರಿಗೆ ಝಡ್ ಪ್ಲಸ್ ಭದ್ರತೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಾಗೂ ಕೊಲ್ಲೂರು ದೇವಸ್ಥಾನದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಉಡುಪಿ ಗಡಿ ಪ್ರದೇಶ ಹೆಜಮಾಡಿಯಿಂದ ಕುಂದಾಪುರ ವಂಡ್ಸೆಯವರೆಗೆ ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಜಂಕ್ಷನ್‌ಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಸಿಎಂ ಕಾರು ಆಗಮಿಸುತ್ತಿದ್ದಂತೆ ಒಂದು ಬದಿಯ ಸಂಚಾರ ವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುತ್ತಿತ್ತು. ಇದರಿಂದ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

ವಿಜಯ್‌ಗೆ ಉಡುಪಿ ಕರಾವಳಿ ಬೈಪಾಸ್‌ನಲ್ಲಿರುವ ಹೊಟೇಲ್‌ನಲ್ಲಿ ಅನಿವಾರ್ಯವಾದರೆ ವಿಶ್ರಾಂತಿ ತೆಗೆದು ಕೊಳ್ಳಲು ಹಾಗೂ ಭೋಜನಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಮಂಗಳೂರಿನಿಂದ ಆಗಮಿಸುವಾಗಲೇ ವಿಳಂಬವಾಗಿ ರುವುದರಿಂದ ಅಲ್ಲಿ ಯಾವುದೇ ನಿಲುಗಡೆ ಇಲ್ಲದೇ ನೇರ ಕೊಲ್ಲೂರಿಗೆ ತೆರಳಿದರು. ಸ್ಥಳದಲ್ಲಿ ಉಡುಪಿ ನಗರ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿತ್ತು.

ದೇವಸ್ಥಾನದ ಸುತ್ತಮುತ್ತ ಸಾರ್ವಜನಿಕ ಸಂಚಾರ ಮತ್ತು ಭಕ್ತರ ದರ್ಶನಕ್ಕೆ ಕೆಲಕಾಲ ನಿರ್ಬಂಧ ಹೇರಲಾಗಿತ್ತು. ತಮಿಳುನಾಡು ಭದ್ರತಾ ಅಧಿಕಾರಿಗಳ ಕೆಲ ಸೂಚನೆಗಳು ದೇವಸ್ಥಾನದ ಸಂಪ್ರದಾಯಕ್ಕೆ ವಿರುದ್ಧವಾಗಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಸಮಾಧಾನ ವ್ಯಕ್ತಪಡಿಸಿತ್ತು. ಶಿಷ್ಟಾಚಾರವನ್ನು ಗೌರವಿಸುತ್ತೇವೆ, ಆದರೆ ದೇವಸ್ಥಾನದ ಸಂಪ್ರದಾಯವನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.

ಜಿಲ್ಲಾ ಎಸ್.ಪಿ ಹರಿರಾಮ್ ಶಂಕರ್, ಹೆಚ್ಚುವರಿ ಎಸ್ಪಿ ಸುಧಾಕರ ನಾಯಕ್, ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ ಅವರ ನೇತೃತ್ವದಲ್ಲಿ ಸಿಪಿಐಗಳಾದ ಶಿವಕುಮಾರ್, ಸಂತೋಷ್ ಕಾಯ್ಕಿಣಿ, ಪಿಎಸೈಗಳಾದ ವಿನಯ್ ಕೊರ್ಲಹಳ್ಳಿ, ಭೀಮಾಶಂಕರ್, ಪವನ್ ನಾಯಕ್ ದಾರಿಯುದ್ದಕ್ಕೂ ವಿಶೇಷ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದರು.

ಸ್ವತಃ ಕಾರು ಚಲಾಯಿಸಿದ ದಳಪತಿ!

ದೇವರ ದರ್ಶನದ ಮುಗಿಸಿ ದೇವಸ್ಥಾನದ ಮುಖ್ಯದ್ವಾರದಿಂದ ಹೊರಬಂದ ವಿಜಯ್, ಬೆಳಗ್ಗೆಯಿಂದಲೇ ಮಳೆ ನಡುವೆ ಕಾದು ನಿಂತಿದ್ದ ಅಭಿಮಾನಿಗಳತ್ತ ಕೈ ಬೀಸಿ ಅವರ ಹರ್ಷೋದ್ಗಾರಕ್ಕೆ ಸ್ಪಂದಿಸಿದರು.

ಬಳಿಕ ತಮ್ಮ ಕಾರಿನ ಚಾಲಕ ಸ್ಥಾನದಲ್ಲಿ ತಾವೇ ಕುಳಿತು ವಾಹನ ಚಲಾಯಿಸಿ ದೇವಳದಿಂದ ಅನತಿ ದೂರದಲ್ಲಿ ರುವ ಗೆಸ್ಟ್ ಹೌಸ್‌ಗೆ ತೆರಳಿ ಕೆಲ ನಿಮಿಷ ವಿಶ್ರಾಂತಿ ಪಡೆದುಕೊಂಡರು. ಬಳಿಕ ತಾವೇ ಕಾರು ಚಲಾಯಿಸಿಕೊಂಡು ಮಂಗಳೂರು ಕಡೆ ತೆರಳಿದರು. ಕೊಲ್ಲೂರಿನಿಂದ ಕುಂದಾಪುರದವರೆಗೆ ರಸ್ತೆ ಬದಿಯಲ್ಲಿ ನೆರೆದಿದ್ದ ಅಭಿಮಾನಿಗಳು ನೆಚ್ಚಿನ ನಟ ಹಾಗೂ ಮುಖ್ಯಮಂತ್ರಿಗಳನ್ನು ಕಂಡು ಖುಷಿಯಾದರು.

ಅಭಿಮಾನಿಗಳ ದಂಡು, ವಿಶಲ್ ಹೊಡೆದು ಸಂಭ್ರಮ!

ಮಾಧ್ಯಮದ ಕ್ಯಾಮೆರಾಗಳು ಕಂಡೊಡನೆ ’ಧಳಪತಿ’ ತಲೈವಾ ಎಂದು ಘೋಷಣೆ ಕೂಗಿ ವಿಶಲ್ ಬಾರಿಸುವ ಮೂಲಕ ಅಭಿಮಾನಿಗಳು ತಮ್ಮ ಅಭಿಮಾನಯನ್ನು ವ್ಯಕ್ತಪಡಿಸಿದರು.

ದೇವಳದ ಆನೆಬಾಗಿಲು ಪ್ರವೇಶ ದ್ವಾರದ ಬಳಿ ನಿಂತಿದ್ದ ಅಭಿಮಾನಿಗಳು ವಿಜಯ್ ಹಾಗೂ ಮೂಕಾಂಬಿಕಾ ದೇವಿಯ ಚಿತ್ರವಿರುವ ವೆಲ್ಕಮ್ ಟು ಕರ್ನಾಟಕ ಬ್ಯಾನರ್ ಪ್ರದರ್ಶಿಸಿದರು. ಜೊತೆಗೆ ಟಿವಿಕೆ ಪಕ್ಷದ ಬಾವುಟವನ್ನು ಹಾರಿಸಿದರು.

ಕೊಲ್ಲೂರು, ಜಡ್ಕಲ್, ಚಿತ್ತೂರು ಜಂಕ್ಷನ್, ವಂಡ್ಸೆ, ನೆಂಪು ಜಂಕ್ಷನ್, ಬಗ್ವಾಡಿ ಕ್ರಾಸ್, ಹೆಮ್ಮಾಡಿ, ತಲ್ಲೂರು, ಕುಂದಾಪುರಗಳಲ್ಲಿ ನೆಚ್ಚಿನ ನಟನಿಗಾಗಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ವಿಜಯ್ ಚಲಾಯಿಸುತ್ತಿದ್ದ ಕಾರು ಬರುತ್ತಿದ್ದಂತೆ ಅವರ ಹರ್ಷೋದ್ಗಾರ ಹಾಗೂ ಜಯಕಾರ ಮುಗಿಲು ಮುಟ್ಟಿತ್ತು. ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸಂಪರ್ಕ ಕಲ್ಪಿಸುವ ಹೆಮ್ಮಾಡಿ ಜಂಕ್ಷನ್ನಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ದರು.

ಭದ್ರತಾ ವಲಯ ದಾಟಿ ಬಂದ ಸಿಎಂ

ಮೂಕಾಂಬಿಕಾ ದರ್ಶನ ಮುಗಿಸಿ ಹೊರಬಂದ ವಿಜಯ್ ನೇರವಾಗಿ ಕಾರು ಏರುವ ಬದಲು ಭದ್ರತಾ ವಲಯ ದಾಟಿ ಅಭಿಮಾನಿಗಳತ್ತ ನಡೆದು ಬಂದರು. ಇದರಿಂದ ಕೆಲಕಾಲ ಪೊಲೀಸರು ತಬ್ಬಿಬ್ಬಾದರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದು, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸ್ವತಃ ಸ್ಥಳದಲ್ಲೇ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದರು. ಸುಮಾರು ಎರಡು ನಿಮಿಷಗಳ ಕಾಲ ಅಭಿಮಾನಿಗಳೊಂದಿಗೆ ಇದ್ದ ವಿಜಯ್ ಬಳಿಕ ಕಾರು ಏರಿದರು.




 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News