×
Ad

ಕುಂದಾಪುರ ತಾಲೂಕು ಆಸ್ಪತ್ರೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ: ಶಾಸಕ ಕಿರಣ್ ಕುಮಾರ್

Update: 2026-06-19 21:51 IST

ಕುಂದಾಪುರ, ಜೂ.19: ಕುಂದಾಪುರ ತಾಲೂಕು ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಶಿಥಿಲಗೊಂಡ ಹಳೆ ಕಟ್ಟಡ ತೆರವು ಮಾಡಿ, ಹೊಸ ಕಟ್ಟಡ ನಿರ್ಮಾಣ ಹಾಗೂ ಹೆಚ್ಚುವರಿ ಅಗತ್ಯದ 30 ಕೆಎಲ್‌ಡಿ ಸಾಮರ್ಥ್ಯದ ಎಸ್‌ಟಿಪಿ ರಚನೆ ಸಂಬಂಧ ಇಲಾಖೆಯ ಎಂಜಿನಿಯರ್‌ಗಳು ಪರಿಶೀಲಿಸಿ, ಅಂದಾಜು ಪಟ್ಟಿಯ ವರದಿ ಸಲ್ಲಿಸಬೇಕು ಎಂದು ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹೇಳಿದ್ದಾರೆ.

ಕುಂದಾಪುರದ ಉಪ ವಿಭಾಗೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಆರೋಗ್ಯ ರಕ್ಷಾ ಸಮಿತಿಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ರಾಜ್ಯ ಮಾಲಿನ್ಯ ಮಂಡಳಿಯ ಕಾರ್ಯಸೂಚಿ ಪ್ರಕಾರ 55 ಕೆಎಲ್ ಡಿ ಸಾಮರ್ಥ್ಯದ ಎಸ್‌ಟಿಪಿ ಇರಬೇಕು. ಸದ್ಯ 25 ಕೆಎಲ್‌ಡಿ ನಿರ್ವಹಣೆ ಯಲ್ಲಿದೆ. ಅದಕ್ಕಿಂತ ಹಿಂದಿನ 30 ಕೆಎಲ್‌ಡಿಯ ಎಸ್‌ಟಿಪಿ ಕಾರ್ಯ ನಿರ್ವಹಿಸುತ್ತಿಲ್ಲ. ಅದರ ದುರಸ್ತಿ, ಮೋಟಾರು, ಪೈಪ್‌ಲೈನ್‌ಗೆ ಅಂದಾಜು 20 ಲಕ್ಷ ರೂ. ಅಗತ್ಯವಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಚಂದ್ರ ಮರಕಾಲ ಸಭೆಗೆ ತಿಳಿಸಿದರು.

ಈ ಬಗ್ಗೆ ಇಂಜಿನಿಯರ್‌ಗಳು ವರದಿ ಸಲ್ಲಿಸಲಿ. ಆ ಬಳಿಕ ಅನುದಾನಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗು ವುದು. ಇದೇ ವೇಳೆ ಈಗ ಸಂಗ್ರಹ ಆಗುವ ಕೊಳಚೆ ನೀರನ್ನು ಯುಜಿಡಿ ಆಗುವವರೆಗೆ ಬೇರೆ ಕಡೆಗೆ ಬಿಡಲು ಪುರಸಭೆ ಸಹಕರಿಸಬೇಕು ಎಂದು ಅವರು ಸೂಚಿಸಿದರು.

ಆಸ್ಪತ್ರೆಯ ಹಳೆ ಕಟ್ಟಡ ಶಿಥಿಲಗೊಂಡಿದ್ದು, ಅದನ್ನು ಕೆಡವಿ ಹೊಸ ಕಟ್ಟಡ ರಚನೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸ ಲಾಗುವುದು. ಆದರೆ ಅದಕ್ಕಿಂತ ಮೊದಲು ಸಂಬಂಧಪಟ್ಟ ಇಲಾಖೆಯವರು ಡಿಪಿಆರ್ ಸಿದ್ದಪಡಿಸಿ, ವರದಿ ನೀಡ ಬೇಕು. ಆ ಬಳಿಕ ಅನುದಾನಕ್ಕೆ ಪ್ರಾಸ್ತವ ಸಲ್ಲಿಸಲಾಗುವುದು. ಮತ್ತೆ ಆರೋಗ್ಯ ಸಚಿವರಿಗೆ, ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕರು ತಿಳಿಸಿದರು.

ತಜ್ಞ ವೈದ್ಯರ ಕೊರತೆಯಿದ್ದು, ಮಂಜೂರಾದ ಹುದ್ದೆಗಳ ಪೈಕಿ ತಲಾ ಒಬ್ಬರು ಮಕ್ಕಳ ತಜ್ಞ, ಅರವಳಿಕೆ ತಜ್ಞ, ರೆಡಿಯೋಲಾಜಿಸ್ಟ್ ಹಾಗೂ ಇಬ್ಬರು ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳು ಅತೀ ಅಗತ್ಯವಾಗಿ ಭರ್ತಿ ಆಗ ಬೇಕಾಗಿದೆ. ಭದ್ರತೆಯ ದೃಷ್ಟಿಯಿಂದ ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸಲು ತಲಾ ನಾಲ್ವರು ವಾಚ್ ಮೆನ್ ಹಾಗೂ ಗ್ರೂಪ್ -ಡಿ ನೌಕರರ ನೇಮಕಾತಿ ಆಗಬೇಕು. ಸರಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಶಾಸಕರು ಭರವಸೆ ನೀಡಿದರು.

ಆಸ್ಪತ್ರೆ ಸಿಬಂದಿ, ವೈದ್ಯರು ಇಲ್ಲಿಗೆ ಬರುವ ರೋಗಿಗಳು, ಸಾರ್ವಜನಿಕರ ಜತೆಗೆ ಸೌಜನ್ಯದಿಂದ ವರ್ತಿಸುವಂತೆ ಸಮಿತಿ ಸದಸ್ಯೆ ದೇವಕಿ ಸಣ್ಣಯ್ಯ ಒತ್ತಾಯಿಸಿದರು. ಪ್ರತೀ 3 ತಿಂಗಳಿಗೊಮ್ಮೆ ಆರೋಗ್ಯ ರಕ್ಷಾ ಸಮಿತಿ ಸಭೆ ಕರೆಯುವಂತೆ, ಆಸ್ಪತ್ರೆ ಆವರಣದಲ್ಲಿ ಕ್ಯಾಂಟೀನ್ ಆರಂಭಿಸುವಂತೆ ಸದಸ್ಯ ಶಿವರಾಮ ಪುತ್ರನ್ ಆಗ್ರಹಿಸಿದರು.

ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕೆ.ಜಿ., ತಾಲೂಕು ವೈದ್ಯಾಧಿಕಾರಿ ಡಾ.ಪ್ರೇಮಾನಂದ್, ಪುರಸಭೆ ಮುಖ್ಯಾಧಿಕಾರಿ ಆನಂದ ಜೆ., ಸಮಿತಿ ನಾಮನಿರ್ದೇಶಿತ ಸದಸ್ಯರಾದ ಬಲಾಡಿ ಸಂತೋಷ್ ಕುರ್ಮಾ ಶೆಟ್ಟಿ, ಪ್ರಭು ಕೆನಡಿ ಪಿರೇರಾ, ಶಶಿಧರ್ ಜನ್ಸಾಲೆ, ವೈದ್ಯರು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News