×
Ad

ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮ ಉದ್ಘಾಟನೆ

Update: 2026-06-28 20:05 IST

ಉಡುಪಿ, ಜೂ.28: ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ವಿವಿಧ ಇಲಾಖೆಗಳ ಹಾಗೂ ಸಂಘಗಳ ಸಹಯೋಗದಲ್ಲಿ ಉಡುಪಿಯ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮಕ್ಕೆ ರವಿವಾರ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಭಾರತವು ಪೋಲಿಯೊ ಮುಕ್ತ ದೇಶವಾಗಿದ್ದು ಪೋಲಿಯೊ ರೋಗವನ್ನು ಪರಿಣಾಮಕಾರಿಯಾಗಿ ನಿರ್ಮೂಲನೆ ಮಾಡುವಲ್ಲಿ ವಿಶ್ವದ ಇತರ ಎಲ್ಲಾ ದೇಶಗಳಿಗೆ ಮಾದರಿಯಾಗಿದೆ. ದೇಶದ ಭವಿಷ್ಯ ವಾಗಿರುವ ಮಕ್ಕಳು ಸದೃಢರಾಗಿರಬೇಕು ಎನ್ನುವ ಉದ್ದೇಶ ದಿಂದ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಸದೃಢ, ಆರೋಗ್ಯವಂತ ಮಕ್ಕಳು ಭವಿಷ್ಯದ ನಾಯಕರಾಗಿ ರೂಪುಗೊಂಡು ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಬೇಕು ಎಂದರು.

ಇಂದು ನಾವು ಪೋಲಿಯೊ ಮುಕ್ತ ರಾಷ್ಟ್ರವಾಗಿದ್ದರೂ ವಿಶ್ವದ ಇನ್ನಿತರ ದೇಶಗಳಲ್ಲಿ ಪೋಲಿಯೊ ಪ್ರಕರಣಗಳು ಕಂಡು ಬರುತ್ತಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿ ವರ್ಷವೂ ಮಕ್ಕಳಿಗೆ ಲಸಿಕಾ ಕಾರ್ಯಕ್ರಮಗಳನ್ನು ನಡೆಸಲಾಗು ತ್ತಿದೆ. ಜಿಲ್ಲೆಯಲ್ಲಿ 60 ಸಾವಿರಕ್ಕೂ ಮಿಕ್ಕಿ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಪೋಲಿಯೊ ಬಗ್ಗೆ ಜಾಗೃತಿ ಮೂಡಿಸಿ ಮಕ್ಕಳು ತಪ್ಪದೇ ಲಸಿಕೆ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು. ಶೈಕ್ಷಣಿಕವಾಗಿ ಮುಂಚೂಣಿಯಲ್ಲಿ ರುವ ಜಿಲ್ಲೆಯು ಆರೋಗ್ಯ ಕ್ಷೇತ್ರದಲ್ಲಿಯೂ ಅಗ್ರ ಸ್ಥಾನದಲ್ಲಿರಬೇಕು ಎಂದರು.

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಆರೋಗ್ಯ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದಿಂದ ದೇಶವು ಇಂದು ಪೋಲಿಯೊ ಹಾಗೂ ಸಿಡುಬು ರೋಗ ಮುಕ್ತವಾಗಿದೆ. ದೇಶವನ್ನು ಕ್ಷಯ ರೋಗ ಮುಕ್ತವಾಗಿಸಲು ಪಣ ತೊಟ್ಟಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗ, ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಲಸಿಕಾ ಕಾರ್ಯಕ್ರಮಗಳು ಯಶಸ್ವಿಯಾಗಿವೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜ್ ಹುಬ್ಬಳ್ಳಿ, ಬಿಬಿಎಂಪಿ ಉಪ ನಿರ್ದೇಶಕಿ ಡಾ.ಮಮತಾ ಎಂ.ಎಸ್., ಜಿಲ್ಲಾ ಸರ್ಜನ್ ಡಾ.ಅಶೋಕ್ ಎಚ್., ರೋಟರಿ ಪ್ಲಸ್ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಬಾಸ್ರಿ ಮತ್ತಿತರರು ಉಪಸ್ಥಿತರಿದ್ದರು

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಜ್ಯೋತ್ಸ್ನಾ ಬಿ.ಕೆ ಸ್ವಾಗತಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಎಚ್. ಕಾರ್ಯಕ್ರಮ ನಿರೂಪಿಸಿದರು. ರೋಟರಿ ಅಧ್ಯಕ್ಷ ಸೂರಜ್ ಕುಮಾರ್ ಹೆಗ್ಡೆ ವಂದಿಸಿದರು.

‘ತಾಯಿ ಮಕ್ಕಳ ಆಸ್ಪತ್ರೆಗೆ ಹೊಸ ರೂಪ ನೀಡುವ ಪ್ರಯತ್ನ ನಡೆಯುತ್ತಿದೆ. ಆರೋಗ್ಯ ಸಚಿವರ ಜೊತೆ ಚರ್ಚಿಸಿ ಆಸ್ಪತ್ರೆಯ ಮೂಲ ಸೌಕರ್ಯಗಳನ್ನು 50ಲಕ್ಷ ರೂ. ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸುವ ಪ್ರಯತ್ನ ನಡೆದಿದೆ. ಶೀಘ್ರವೇ ಆರೋಗ್ಯ ಸಚಿವರು ಜಿಲ್ಲೆಗೆ ಭೇಟಿ ನೀಡಲಿದ್ದು ಸಮಸ್ಯೆಗಳಿಗೆ ಮುಕ್ತಿ ನೀಡುವ ಕಾರ್ಯವಾಗಲಿದೆ. ಜಿಲ್ಲಾಸ್ಪತ್ರೆಗೆ ನಿಗದಿ ಪಡಿಸಿದ ಸ್ಥಳದ ಸಮಸ್ಯೆಗಳನ್ನು ಪರಿಹರಿಸಲು ಸಚಿವರಿಗೆ ಮನವಿ ಮಾಡಲಾಗುವುದು’

-ಯಶ್‌ಪಾಲ್ ಸುವರ್ಣ, ಶಾಸಕರು, ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News