×
Ad

ಶಾಲೆಗಳು ಬಹುತ್ವ ಭಾರತ, ಮನುಷ್ಯ ಪ್ರೀತಿಯನ್ನು ಸೃಷ್ಟಿಸಬೇಕು: ಡಾ.ನರೇಂದ್ರ ರೈ ದೇರ್ಲ

ಕುಂದಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

Update: 2026-06-28 21:06 IST

ಕುಂದಾಪುರ, ಜೂ.28: ದೇಶ ವೈಜ್ಞಾನಿಕವಾಗಿ ಸಾಕಷ್ಟು ಸುಧಾರಣೆ ಆಗಿದೆ. ಆದರೆ ಕೊರೋನಾ ನಂತರದ ಐದು ವರ್ಷಗಳಲ್ಲಿ ನಮ್ಮ ಮನಸ್ಸು ಬದಲಾಗಿರುವ ಬಗ್ಗೆ ಯಾರು ಯೋಚನೆ ಮಾಡುತ್ತಿಲ್ಲ. ಮನಸ್ಸು ಕಟ್ಟುವ ಶಾಲೆಗಳು ಇಂದು ಬೇಕಾಗಿದೆ. ಶಾಲೆಗಳು ಸಂವೇದನೆ, ಬಹುತ್ವ, ಭಾರತ ತನ, ಮನುಷ್ಯ ಪ್ರೀತಿ, ಬಂಧುತ್ವವನ್ನು ಸೃಷ್ಟಿಸ ಬೇಕು ಎಂದು ಅಂಕಣಕಾರ, ವಿಶ್ರಾಂತ ಪ್ರಾಧ್ಯಾಪಕ ಡಾ.ನರೇಂದ್ರ ರೈ ದೇರ್ಲ ಹೇಳಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಇದರ ಕುಂದಾಪುರ ತಾಲೂಕು ಘಟಕದ ವತಿಯಿಂದ ಕುಂಭಾಶಿಯ ವಿನಾಯಕ ಸಭಾಂಗಣದ ಪಂಡಿತ್ ವಿಶ್ವಂಭರ ಉಪಾಧ್ಯಾಯ ವೇದಿಕೆಯಲ್ಲಿ ರವಿವಾರ ಆಯೋಜಿಸಲಾದ 20ನೇ ಕುಂದಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ‘ನುಡಿ ಬೆಳಕು 2026’ನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮಾಧ್ಯಮ ಹಾಗೂ ಸಾಹಿತ್ಯಕ್ಕೆ ಹತ್ತಿರದ ನಂಟಿದೆ. ಸಾಮಾಜಿಕ ಜಾಲತಾಣಗಳು ಬರಹದ ವಿಚಾರವಾಗಿ ವೇಗ ವನ್ನು ಸೃಷ್ಟಿಸಿದೆ. ಪತ್ರಿಕೆ ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ಎಂಟು ಜ್ಞಾನ ಪೀಠ ಪ್ರಶಸ್ತಿ ಸಿಕ್ಕರೂ, ಅಧ್ಯಯನ, ಸಂಶೋಧನೆ, ಭಾಷೆ ಪ್ರೀತಿಸುವ, ಸಂಸ್ಕೃತಿ ಗಟ್ಟಿಗೊಳಿಸುವ, ನೆಲದ ಸಂಸ್ಕೃತಿ ಉಳಿಸುವ ಕೆಲಸ ಮಾತ್ರ ಆಳುವ ವರ್ಗದಿಂದ ಆಗುತ್ತಿಲ್ಲ. ಅದಕ್ಕೆ ಈಗಲೂ ಜ್ಞಾನಪೀಠ ಪುರಸ್ಕೃತರನ್ನೇ ಮುಖವಾಡವಾಗಿಟ್ಟುಕೊಂಡು ತೋರಿಸುತ್ತೇವೆ ಎಂದರು.

ಸಮ್ಮೇಳನಾಧ್ಯಕ್ಷರಾದ ಹಿರಿಯ ಪತ್ರಕರ್ತ ಯು.ಸುರೇಂದ್ರ ಶೆಣೈ ಮಾತನಾಡಿ, ಹಿಂದಿ ವಿರೋಧಿ ಹೇಳಿಕೆ, ಬೇರೆ ಭಾಷೆಯ ಫಲಕಗಳ ಮೇಲೆ ಮಸಿ ಬಳಿಯುವುದು. ಸಾಮಾಜಿಕ ಜಾಲತಾಣಗಳಲ್ಲಿ ಅರ್ಥಹೀನವಾಗಿ ಚರ್ಚಿಸುವುದು. ಬೇರೆ ಭಾಷೆಯವರೊಂದಿಗೆ ಸಂಘರ್ಷಕ್ಕೆ ಇಳಿಯುವುದು. ಕನ್ನಡ ಉಳಿಸುವ ಕಾರ್ಯಕ್ರಮಗಳಲ್ಲ. ನಾವು ಕನ್ನಡದ ಬಗ್ಗೆ ತೋರಿಕೆಯ ನಾಟಕ ಮಾಡುವುದನ್ನು ಬಿಟ್ಟು ಬಿಡಬೇಕು. ಪ್ರಚಾರಕ್ಕಾಗಿ ಕನ್ನಡ ಧ್ವಜವನ್ನು ಶಸ್ತ್ರದಂತೆ ಹಿಡಿಯುವವರನ್ನು ಪ್ರೋತ್ಸಾಹಿಸಬಾರದು ಎಂದು ತಿಳಿಸಿದರು.

ಮಕ್ಕಳಲ್ಲಿ ಸಾಮಾನ್ಯ ಜ್ಞಾನ, ಕನ್ನಡ ಭಾಷಾಸಕ್ತಿ ವೃದ್ಧಿಸುವ ಕೆಲಸವಾಗಬೇಕು. ಕನ್ನಡದ ಬಗ್ಗೆ ತೋರಿಕೆಯ ನಾಟಕ ಬಿಡಬೇಕು. ನಾವೀಗ ಸಾಹಿತ್ಯ, ಸಂಸ್ಕೃತಿ ಹಿಂದೂ ಆಧುನಿಕತೆ ವಿಷಯದಲ್ಲಿ ಸಂಧಿಗ್ಧ ಕಾಲದಲ್ಲಿದ್ದೇವೆ.ಮಕ್ಕಳಿಗೆ ಭಾಷೆಯೊಂದಿಗೆ ಜೀವನಮೌಲ್ಯ ಕಲಿಸಬೇಕು. ಕುಂದಾಪ್ರ ಕನ್ನಡ ಭಾಷೆ, ಸಂಸ್ಕೃತಿ ಜನಪದ ಸಾಹಿತ್ಯ ಉಳಿಸಲು ಕಾಲೇಜು ಉಪನ್ಯಾಸಕರ ಪಾತ್ರ ದೊಡ್ಡದಿದೆ. ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಕುಂದಾಪ್ರ ಕನ್ನಡ ಅಧ್ಯಯನ ಪೀಠ ಆಗಿದೆ ಎಂದು ಅವರು ಹೇಳಿದರು.

ನಿಟಕಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ.ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ ಕನ್ನಡ ಧ್ವಜವನ್ನು ಸಮ್ಮೇಳನಾಧ್ಯಕ್ಷರಿಗೆ ಹಸ್ತಾಂತರಿಸಿದರು. ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್, ಸಮ್ಮೇಳನದ ಗೌರವಾಧ್ಯಕ್ಷ, ಆನೆಗುಡ್ಡೆ ದೇಗುಲದ ಆನುವಂಶಿಕ ಮೊಕ್ತೇಸರ ಶ್ರೀರಮಣ ಉಪಾಧ್ಯಾಯ, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಐಎಂಎ ರಾಜ್ಯ ಉಪಾಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್ ಮಾತನಾಡಿದರು.

ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು. ರಥಶಿಲ್ಪಿ ಲಕ್ಷ್ಮೀ ನಾರಾಯಣ ಆಚಾರ್ಯ ಪುಸ್ತಕ ಮಳಿಗೆಯನ್ನು ಉದ್ಘಾಟಿಸಿದರು. ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ಸಮ್ಮೇಳನದ ಕಾರ್ಯಾ ಧ್ಯಕ್ಷ ಕೆ.ಆರ್.ನಾಯ್ಕ್, ಕಾರ್ಯದರ್ಶಿಗಳಾದ ದಿನಕರ ಆರ್.ಶೆಟ್ಟಿ, ಅಕ್ಷತಾ ಗಿರೀಶ್, ಆರ್ಥಿಕ ಸಮಿತಿ ಸಂಚಾಲಕ ಗಣೇಶ್ ಪುತ್ರನ್, ಜಿಲ್ಲಾ ಗೌರವ ಕಾರ್ಯದರ್ಶಿ ನರೇಂದ್ರ ಕುರ್ಮಾ ಕೋಟ, ಕೋಶಾಧಿಕಾರಿ ಮನೋಹರ್ ಪಿ., ಕಸಾಪ ತಾಲೂಕು ಅಧ್ಯಕ್ಷರಾದ ಕಾಪುವಿನ ಪುಂಡಲೀಕ ಮರಾಠೆ, ಹೆಬ್ರಿಯ ಶ್ರೀನಿವಾಸ ಭಂಡಾರಿ, ಕಾರ್ಕಳದ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಬ್ರಹ್ಮಾವರದ ರಾಮಚಂದ್ರ ಐತಾಳ್, ಮತ್ತಿತರರು ಉಪಸ್ಥಿತರಿದ್ದರು.

ತೆಂಕನಿಡಿಯೂರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಿಶ್ವನಾಥ ಕರಬ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ತಾಲ್ಲೂಕು ಕಸಾಪ ಅಧ್ಯಕ್ಷ ಡಾ.ಉಮೇಶ್ ಪುತ್ರನ್ ಸ್ವಾಗತಿಸಿದರು. ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಪತ್ರಕರ್ತ ಚಂದ್ರಶೇಖರ ಬೀಜಾಡಿ ನಿರೂಪಿಸಿದರು, ಕೆ.ಎಸ್.ಮಂಜುನಾಥ ವಂದಿಸಿದರು. ರಶ್ಮೀರಾಜ್ ನಿರ್ವಹಣೆ ಮಾಡಿದರು.

‘ಗ್ಯಾರಂಟಿ ಯೋಜನೆ ಕನ್ನಡ ಶಾಲಾ ಮಕ್ಕಳ ಕುಟುಂಬಕ್ಕೆ ಸೀಮಿತಗೊಳಿಸಬೇಕಿತ್ತು’

ಕನ್ನಡ ಭಾಷೆಯ ಬಗ್ಗೆ ರಾಜಕೀಯ ಮುಖಂಡರು, ಕನ್ನಡ ಪರ ಸಂಘಟನೆಗಳು ತೋರುತ್ತಿರುವ ಕಾಳಜಿ ಅರ್ಥಹೀನ ಅನಿಸಿಬಿಟ್ಟಿದೆ. ಅವರೆಲ್ಲ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ರಾಜ್ಯ ಸರಕಾರ ಸಾಮಾನ್ಯ ಜನರ ಜೀವನ ಅಭಿವೃದ್ಧಿಗೆ ಹಲವು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದೆ. ಲಕ್ಷಾಂತರ ಕುಟುಂಬಕ್ಕೆ ಅನುಕೂಲವಾಗಿರಬಹುದು. ಆದರೆ ಈ ಯೋಜನೆ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಮಾತ್ರವೆಂದು ಸರಕಾರ ಹೇಳಿದ್ದರೆ ನೂರಾರು ಸರಕಾರಿ ಶಾಲೆಗಳು ಉಳಿಯುತ್ತಿದ್ದವು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿತ್ತು ಎಂದು ಸಮ್ಮೇಳನಾಧ್ಯಕ್ಷ ಯು.ಸುರೇಂದ್ರ ಶೆಣೈ ಹೇಳಿದರು.

ಸರಕಾರಗಳು ಕನ್ನಡ ಭಾಷಾಭಿವೃದ್ಧಿ ಬಗ್ಗೆ ಇಚ್ಛಾಶಕ್ತಿಯನ್ನೇ ಪ್ರದರ್ಶಿಸುವುದಿಲ್ಲ. ಕನ್ನಡ ಶಾಲೆಯ ಶಿಕ್ಷಕರಲ್ಲಿ ಶೇ.50ಕ್ಕಿಂತ ಹೆಚ್ಚು ಶಿಕ್ಷಕರು ಕನ್ನಡ ಶಾಲೆಗಳ ಗುಣಮಟ್ಟ ಸರಿ ಇಲ್ಲ ಎಂಬ ಕಾರಣ ನೀಡಿ, ತಮ್ಮ ಮಕ್ಕಳನ್ನು ತಾವೇ ದುಡಿಯುವ ಸರಕಾರಿ ಶಾಲೆಗೆ ಕಳುಹಿಸುತ್ತಿಲ್ಲ. ಮುಚ್ಚುತ್ತಿರುವ ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಸರಕಾರದಿಂದ ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ. ಕನ್ನಡ ಶಾಲೆಗಳಿಗೆ ವಿದ್ಯಾರ್ಥಿಗಳು ಕಡಿಮೆಯಾಗಲು ಸರಕಾರ ಮಾತ್ರ ಕಾರಣವಲ್ಲ. ಜನರ ಮನೋಭಾವವೂ ಹಾಗಾಗಿದೆ ಎಂದರು.

ಅನ್ಯಭಾಷೆ ಹಾಡಿಗೆ ನೃತ್ಯ!

ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಹಿಂದಿ ಚಲನಚಿತ್ರದ ಹಾಡು, ಅನ್ಯ ಭಾಷೆಯ ಹಾಡೊಂದಕ್ಕೆ ಯುವತಿಯೋರ್ವಳು ಹೆಜ್ಜೆ ಹಾಕಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುತ್ತಲೇ ಅದರ ತುಣುಕನ್ನು ಹಂಚಿಕೊಂಡ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದು ಕಾರ್ಯಕ್ರಮ ಆಯೋಜಕರಾದ ಕನ್ನಡ ಸಾಹಿತ್ಯ ಪರಿಷತ್ ಬೇಜವಬ್ದಾರಿ ವರ್ತನೆ ವಿರುದ್ಧ ಟೀಕೆಗಳು ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News