ಪರಿಸರಕ್ಕೆ ಮಾರಕ ಯೋಜನೆಗಳ ವಿರುದ್ಧ ಧ್ವನಿ ಎತ್ತುವ ಎದೆಗಾರಿಕೆ ಅಗತ್ಯ: ಡಾ.ಶಾನುಭಾಗ್

Update: 2026-08-02 19:39 IST

ಕುಂದಾಪುರ, ಆ.2: ಪರಿಸರಕ್ಕೆ ಮಾರಕವಾಗುವ ಯೋಜನೆಗಳ ವಿರುದ್ಧ ಜನರು ಧ್ವನಿಯೆತ್ತುವ ಎದೆಗಾರಿಕೆಯನ್ನು ಪ್ರದರ್ಶಿಸಬೇಕಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಪ್ರಶ್ನೆ ಮಾಡುವ ಗುಣವನ್ನು ಕಲಿಸಬೇಕು ಹಾಗೆಯೇ ತಾವು ಕೂಡ ಅನ್ಯಾಯದ ವಿರುದ್ಧ ಪ್ರಶ್ನಿಸುವುದನ್ನು ಅರಿಯಬೇಕು ಎಂದು ಮಾನವ ಹಕ್ಕುಗಳ ಹೋರಾಟಗಾರ ಡಾ.ರವೀಂದ್ರನಾಥ ಶಾನುಭಾಗ್ ಹೇಳಿದ್ದಾರೆ.

ಕುಂದಾಪುರದ ಸಂತ ಮೇರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ರವಿವಾರ ನಡೆದ ಭಾರತ ಜ್ಞಾನ ವಿಜ್ಞಾನ ಸಮಿತಿ ಉಡುಪಿ ಜಿಲ್ಲೆ ಇದರ 2ನೇ ಜಿಲ್ಲಾ ಸಮ್ಮೇಳನ ಹಾಗೂ ಸರ್ವ ಸದಸ್ಯರ ಸಮಾವೇಶದಲ್ಲಿ ಅವರು ಆಶಯ ಮಾತುಗಳನ್ನಾಡಿದರು.

ನೆಲ-ಜಲಕ್ಕೆ ಕಂಟಕವೆನಿಸುವ ಯೋಜನೆಗಳು ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿದ್ದರೂ ಕೂಡ ಅದನ್ನು ವಿರೋಧಿ ಸದೇ ಇರುವ ಜಡತ್ವದ ಭಾವನೆ ಜನರಲ್ಲಿದೆ. ಶಿರೂರು-ಉಳ್ಳಾಲ ತನಕ ಶುದ್ಧ ನೀರು ಸಿಗುತ್ತಿಲ್ಲ. ಎಂಡೋ ಸಲ್ಫಾನ್ ಸಮಸ್ಯೆಯಿಂದ ಹೈರಾಣದವರ ಬದುಕು ದುಸ್ತರವಾಗಿದೆ. ಆಳುವವರು ಮಾತ್ರ ಕೈಗಾರಿಕರಣ, ವ್ಯಾಪಾರೀಕರಣ, ಬೆಳೆಯುತ್ತಿರುವ ನಗರ ಎನ್ನುವ ಹೆಸರಿನಲ್ಲಿ ಶುದ್ಧ ಜಲವನ್ನು ಹಾಳುಗೈದರೂ ಸುಮ್ಮನಿದ್ದಾರೆ. ಕೀಟನಾಶಕಗಳಿದ ಕೃಷಿ ನಾಶವಾಗುತ್ತಿದೆ. ಕೊಳಚೆ ಪರಿಸರ ಹೆಚ್ಚಿದ್ದು ಹೀಗೆ ಆದರೆ ಭೂಮಿ ಅಂತ್ಯ ಶೀಘ್ರವೇ ಆಗುವುದು ಖಚಿತ ಎಂದರು.

ಅಧ್ಯಕ್ಷತೆ ವಹಿಸಿದ್ದ ಭಾರತ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಶುಭಂಕರ ಚಕ್ರವರ್ತಿ ಮಾತನಾಡಿ, ಬಿ.ಜಿ.ವಿ.ಎಸ್ ಸಂಘಟನೆಯು ವಿಜ್ಞಾನ ಸಾಕ್ಷರತೆಗಾಗಿ ಆರಂಭವಾಗಿರುವುದಾದರೂ ನಾವಿರುವ ಸಂದರ್ಭಕ್ಕೆ ಪ್ರತಿಕ್ರಿಯಿಸದೆ ಮುಂದೆ ಹೋಗಲು ಸಾಧ್ಯವಿಲ್ಲ. ಆದುದರಿಂದ ಖಾಸಗಿಕರಣದ ವಿರುದ್ಧ ನಾವು ಧ್ವನಿ ಎತ್ತಬೇಕಾಗಿದೆ. ಕಾರ್ಪೋರೇಟ್ ಹಿಡಿತದ ಬಗ್ಗೆ ಮಾತಾಡಬೇಕಿದೆ. ದ್ವೇಷಿಸುವ ಮತ್ತು ವಿಭಜಿಸುವ ಹುನ್ನಾರಗಳ ಬಗ್ಗೆ ಮಾತಾಡಬೇಕಿದೆ. ಹೀಗೆ ಪರಿಸರ, ಶಿಕ್ಷಣದ ಕುರಿತು ಮಾತಾಡುವ ಅನಿವಾರ್ಯತೆಯಿದೆ ಎಂದರು.

ಬಿ.ಜಿ.ವಿ.ಎಸ್. ಕುಂದಾಪುರ ಘಟಕದ ಅಧ್ಯಕ್ಷೆ ಆಶಾ ಕರ್ವಾಲ್ಲೋ, ಉಡುಪಿ ತಾಲೂಕು ಘಟಕದ ಅಧ್ಯಕ್ಷ ಅನಂತ ರಾಮ ನಾಯಕ್, ಬ್ರಹ್ಮಾವರ ಘಟಕದ ಅಧ್ಯಕ್ಷೆ ಅಭಿಲಾಷಾ, ಜಿಲ್ಲಾ ಸಮಿತಿ ಸದಸ್ಯ, ಚಿಂತಕ ಶ್ರೀಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಬಿ.ಜಿ.ವಿ.ಎಸ್. ಜಿಲ್ಲಾ ಕಾರ್ಯದರ್ಶಿ ಸಂತೋಷ ನಾಯಕ್ ಪಟ್ಲ ಸ್ವಾಗತಿಸಿದರು. ರಾಜ್ಯ ಸಮಿತಿ ಸದಸ್ಯ ಉದಯ ಗಾಂವಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಾಲೂಕು ಕಾರ್ಯದರ್ಶಿ ಅಶೋಕ ತೆಕ್ಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ಸದಾಶಿವ ಕೆಂಚನೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News