ಸುಬ್ರಹ್ಮಣ್ಯ ಹೆಗಡೆಗೆ ಯಕ್ಷ ಸಾಧಕ ಪ್ರಶಸ್ತಿ ಪ್ರದಾನ
ಉಡುಪಿ, ಆ.2: ಇಂದ್ರಾಳಿ ಯಕ್ಷಗಾನ ಕೇಂದ್ರ, ಉಡುಪಿ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್, ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ಉಡುಪಿ ಉಜ್ವಲ್ ಡೆವಲಪರ್ಸ್ ಸಹಯೋಗದೊಂದಿಗೆ ಶನಿವಾರ ಉಡುಪಿ ಪುರಭವನದಲ್ಲಿ ಗುರು ಮಟಪಾಡಿ ವೀರಭದ್ರ ನಾಯಕ್ ಸ್ಮಾರಕ ಯಕ್ಷ ಸಾಧಕ ಪ್ರಶಸ್ತಿಯನ್ನು ಸ್ತ್ರೀ ವೇಷಧಾರಿ ಸುಬ್ರಹ್ಮಣ್ಯ ಹೆಗಡೆ ಅವರಿಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸುಬ್ರಹ್ಮಣ್ಯ ಹೆಗಡೆ, ಯಕ್ಷಗುರು ಹೆರಂಜಾಲು ವೆಂಕಟರಮಣ ಗಾಣಿಗ ಅವರ ಆಶಯದಂತೆ ಸ್ತ್ರೀವೇಷಧಾರಿಯಾಗಿ ಪ್ರೇಕ್ಷಕರ ಮನ ಗೆಲ್ಲಲು ಸಫಲನಾಗಿದ್ದೇನೆ. ನಾನು ಈ ಮಟ್ಟಕ್ಕೆ ಏರಲು ಹಲವು ಮೇಳಗಳ ಯಜಮಾನರು ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರನ್ನು ಎಂದಿಗೂ ಮರೆಯಲು ಸಾಧ್ಯ ಇಲ್ಲ ಎಂದು ಹೇಳಿದರು.
ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಉತ್ತಮವಾಗಿ ಮೇಳ ನಡೆಸುತ್ತಿರುವ ಯಜಮಾನರನ್ನು ಪ್ರೋತ್ಸಾಹಿಸಲು ಟ್ರಸ್ಟ್ ವತಿಯಿಂದ ಯಕ್ಷ ಪೋಷಕ ಗೌರವ ಪುರಸ್ಕಾರವನ್ನು ನೀಡಲಾಗುವುದು. ಆ.23ರಂದು ಪೆರ್ಡೂರು ಮೇಳದ ಯಜಮಾನರಿಗೆ ಈ ಪುರಸ್ಕಾರವನ್ನು ನೀಡಲಾಗುವುದು ಎಂದು ತಿಳಿಸಿದರು.
ವೇದಿಕೆಯಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ.ಶಂಕರ್, ಉಜ್ವಲ್ ಡೆವೆಲಪರ್ಸ್‌ನ ಪ್ರವರ್ತಕ ಪುರುಷೋತ್ತಮ ಶೆಟ್ಟಿ, ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಉಪಸ್ಥಿತರಿದ್ದರು.
ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಭುವನಪ್ರಸಾದ್ ಹೆಗ್ಡೆ ಪ್ರಶಸ್ತಿ ಪತ್ರ ವಾಚಿಸಿದರು. ಕನ್ನಡ ಉಪನ್ಯಾಸಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪ್ರಸಿದ್ಧ ಕಲಾವಿದರ ಒಗ್ಗೂಡುವಿಕೆಯಲ್ಲಿ ತಾಮ್ರಧ್ವಜ ಕಾಳಗ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.