ದಲಿತರು, ಅಲ್ಪಸಂಖ್ಯಾತರ ಮೇಲೆ ಇಂದಿಗೂ ಶೋಷಣೆ: ಶ್ಯಾಮ್‌ರಾಜ್ ಬಿರ್ತಿ
ಉಡುಪಿ, ಆ.15: ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದರೂ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರು ಇಂದಿಗೂ ಮನುವಾದಿಗಳ ಕಪಿಮುಷ್ಠಿಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಹಾಗೂ ದಲಿತ ಮುಖಂಡ ಶ್ಯಾಮ್‌ರಾಜ್ ಬಿರ್ತಿ ಆರೋಪಿಸಿದ್ದಾರೆ.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಘಟಕದ ವತಿಯಿಂದ ಹೂಡೆಯ ಆದರ್ಶ್ ಇಸ್ಲಾಮಿಕ್ ಸೆಂಟರ್ ಬಳಿ ಆಯೋಜಿಸ ಲಾದ 80ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತಿದ್ದರು.
ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನವನ್ನು ರಚಿಸದೇ ಹೋಗಿದ್ದರೆ ನಮ್ಮ ಬದುಕು ನಿರಂತರ ಶೋಷಣೆಯಲ್ಲೇ ಮುಳುಗಿರುತ್ತಿತ್ತು. ಇಂದು ನಾವು ತಲೆಯೆತ್ತಿ ಸ್ವಾಭಿಮಾನದಿಂದ ಬದುಕಲು ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಕಾರಣ. ಕಳೆದ 20 ವರ್ಷಗಳಿಂದ ದೇಶಕ್ಕಾಗಿ ಜೀವ ಮುಡಿಪಾಗಿಟ್ಟ ಮಹಾತ್ಮ ಗಾಂಧೀಜಿ ಯವರನ್ನು ದೇಶದ್ರೋಹಿಯಂತೆ ಬಿಂಬಿಸುವ ಹಾಗೂ ಅವರ ಹಂತಕ ನಾಥೂರಾಮ್ ಗೋಡ್ಸೆಯನ್ನು ’ಹೀರೋ’ ಮಾಡುವ ವ್ಯವಸ್ಥಿತ ಪ್ರಯತ್ನಗಳು ಸಾಗುತ್ತಿವೆ ಎಂದರು.
ಅಧ್ಯಕ್ಷತೆಯನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷ ಇದ್ರಿಸ್ ಹೂಡೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಯ್ಯದ್ ಫರೀದ್, ಶಹಜಾನ್, ಸಮಾಜ ಸೇವಕ ಸಾಧು, ಸಲಾಹುದ್ದಿನ್ ನಾಯರ್‌ಕೆರೆ, ರಿಯಾಝ್ ಕುಕ್ಕಿಕಟ್ಟೆ, ನಕ್ವಾ ಅಬ್ದುಲ್ ರಝಾಕ್, ಸಾಕೀಬ್ ಹೂಡೆ, ನಿಸಾರ್ ಉಡುಪಿ, ನಿಹಾಲ್ ಕಿದಿಯೂರು, ಜಮೀಲಾ ಸದೀದಾ, ಮಮ್ತಾಝ್ ಬೇಗಮ್ ಹೂಡೆ, ಝೈನುಲ್ಲಾ ಹೂಡೆ, ಅಫ್ವಾನ್ ಬಿ.ಹೂಡೆ ಉಪಸ್ಥಿತರಿದ್ದರು. ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.