ಕುಂದಾಪುರ, ಆ.30: ಮೀನುಗಾರರ, ಕಡಲ ಮಕ್ಕಳ ಹಿತಕಾಯುವ ಉದ್ದೇಶದಿಂದ ಸ್ಥಾಪನೆಗೊಂಡ ಬೀಜಾಡಿ ಮೀನುಗಾರರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಕೋಟೇಶ್ವರದ ಕಮಲಮ್ಮ ಸರ್ವೋತ್ತಮ ಬುದ್ಧ ಕಲ್ಯಾಣ ಮಂದಿರದಲ್ಲಿ ಶನಿವಾರ ನಡೆಯಿತು. ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹಿರಿಯ ಮೀನುಗಾರರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾರಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆ ಈ ವರ್ಷ 1 ಕೋಟಿ 50 ಲಕ್ಷ ಲಾಭದಲ್ಲಿದೆ. ಸದಸ್ಯರಿಗೆ ಶೇ.15ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿದರು.

ಸಂಸ್ಥೆಯಲ್ಲಿ ಸುಮಾರು 14,905 ಎ ತರಗತಿ ಸದಸ್ಯರು, 2566 ಮಂದಿ ಸಿ ತರಗತಿ ಸದಸ್ಯರಿದ್ದು ಉಡುಪಿ ಜಿಲ್ಲೆ ಯಲ್ಲಿಯೇ ಮೀನುಗಾರಿಕಾ ಸಂಸ್ಥೆಯಲ್ಲಿ ಅತೀ ಹೆಚ್ಚಿನ ಸದಸ್ಯರಿರುವುದು ಬೀಜಾಡಿ ಸೊಸೈಟಿಯಾಗಿದೆ. 1 ಕೋಟಿ 83 ಲಕ್ಷ ಪಾಲು ಬಂಡವಾಳ, ವರ್ಷದಾಂತ್ಯಕ್ಕೆ ಠೇವಣಾತಿಗಳು 73 ಕೋಟಿ, 75.25 ಕೋಟಿ ಹೊರಬಾಕಿ, ದುಡಿ ಯುವ ಬಂಡವಾಳ 85 ಕೋಟಿ 92 ಲಕ್ಷ, 743 ಸ್ವಸಹಾಯ ಸಂಘಗಳಿದ್ದು ಒಟ್ಟು 7430 ಸದಸ್ಯರಿದ್ದಾರೆ. 35 ಕೋಟಿ 55 ಲಕ್ಷ ಸಾಲ ನೀಡಿದ್ದು 1 ಕೋಟಿ 82 ಲಕ್ಷ ಬಡ್ಡಿ ಸಹಾಯಧನ ಬಾಕಿಯಿದೆ ಎಂದರು.

ಕುಂದಾಪುರ ತಾಲೂಕಿನಲ್ಲಿ 160 ಮೀನುಗಾರಿಕಾ ಮನೆ ಅರ್ಜಿಗಳಿವೆ. ಉಳಿತಾಯ ಪರಿಹಾರ ಯೋಜನೆಯಲ್ಲಿ 2573 ಫಲಾನುಭವಿಗಳಿದ್ದು 886 ಮಂದಿಗೆ ರೂ.3000 ದಂತೆ 26,5800 ರೂ. ಸದಸ್ಯರ ಖಾತೆಗೆ ಜಮಾ ಆಗಿದ್ದು ಉಳಿದವರ ಖಾತೆಗೆ ಸೆಪ್ಟಂಬರ್ ಪ್ರಥಮ ವಾರದಲ್ಲಿ ಖಾತೆಗೆ ಜಮಾ ಆಗಲಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿಬೀಜಾಡಿ ಮೀನುಗಾರರ ಸಹಕಾರಿ ಸಂಘದ ಉಪಾಧ್ಯಕ್ಷ ನಾಗೇಶ ಬೀಜಾಡಿ, ನಿರ್ದೇಶಕರಾದ ರಾಜು ತೋಟದಬೆಟ್ಟು, ಶೇಖರ ಮೊಗವೀರ ಅಂಕದಕಟ್ಟೆ, ದಿನೇಶ್ ಮೆಂಡನ್ ಗೋಪಾಡಿ, ಶ್ರೀನಿವಾಸ ಮರಕಾಲ ಗೋಪಾಡಿ, ಅಣ್ಣಯ್ಯ ಪುತ್ರನ್ ಕುಂಭಾಶಿ, ಜಾನಕಿ ಬಿಲ್ಲವ, ಅನುಷಾ ಕೊರವಡಿ, ಸಹನಿರ್ದೇಶಕರಾದ ವೆಂಕಟೇಶ ಕುರ್ಮಾ ಬೀಜಾಡಿ, ಸುನೀಲ್ ಜಿ. ನಾಯ್ಕ್ ಚಾತ್ರಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.

ಸಂಘದ ಮಾಜಿ ಅಧ್ಯಕ್ಷ ಮಂಜುನಾಥ ಕುಂದರ್ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ಕಾಂಚನ್ ನಿರೂಪಿಸಿದರು. ಹಿರಿಯ ನಿರ್ದೇಶಕ ಅಣ್ಣಯ್ಯ ಪುತ್ರನ್ ವಂದಿಸಿದರು.

ಸನ್ಮಾನ, ಪ್ರತಿಭಾ ಪುರಸ್ಕಾರ: 50 ವರ್ಷಗಳ ಹಿಂದೆ ಮಾರಿಬಲೆ ಕಾಲದಲ್ಲಿ ಕನಿಷ್ಟ ಕೂಲಿಯಲ್ಲಿ ಮೀನು ಹೊತ್ತು ಜೀವನ ಸಾಗಿಸಿದ ಹಿರಿಯ ಮಹಿಳೆಯರು, ಮಾರಿಬಲೆ ಕೆಲಸ ಮಾಡಿದ ಹಿರಿಯ ಮೀನುಗಾರರು, ಬುಟ್ಟಿಯಲ್ಲಿ ಮೀನುಹೊತ್ತು ವ್ಯಾಪಾರ ಮಾಡಿದ್ದ ಮೀನುಗಾರ ಮಹಿಳೆಯರಿಗೆ ಸನ್ಮಾನಿಸಲಾಯಿತು. 250ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.




 


 


 



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor