ಕುಂದಾಪುರ, ಸೆ.5: ಮಕ್ಕಳ ಬದುಕು ಕಟ್ಟಿಕೊಡುವ ಜತೆಗೆ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ. ಕಲಿಸಿದ ಗುರುಗಳನ್ನು ಮಕ್ಕಳು ಎಂದಿಗೂ ಮರೆಯುವುದಿಲ್ಲ. ಪ್ರಸ್ತುತ ಶೈಕ್ಷಣಿಕ ಕಾರ್ಯೋತ್ತಡದ ನಡುವೆಯೂ ಶಿಕ್ಷಕರು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹೇಳಿದ್ದಾರೆ.

ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ, ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ವಲಯ, ಶಿಕ್ಷಕರ ದಿನಾಚರಣೆ ಸಮಿತಿ ಸಂಯುಕ್ತ ಆಶ್ರಯದಲ್ಲಿ ಶನಿವಾರ ಕುಂದಾಪುರ ಆರ್.ಎನ್.ಶೆಟ್ಟಿ ಸಭಾಂಗಣ ದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಹರಿ ಪ್ರಸಾದ್ ಶೆಟ್ಟಿ ಮಾತನಾಡಿ, ಶಿಕ್ಷಕರು ನಿಜವಾದ ದೇಶ ಕಟ್ಟುವ ಕಾಯಕವನ್ನು ಮಾಡುತ್ತಿದ್ದಾರೆ. ವಿದ್ಯಾರ್ಥಿಯ ಬದುಕನ್ನು ಮೇಲಸ್ತರಕ್ಕೆ ಕೊಂಡೊಯ್ದು ಕುಟುಂಬ, ಸಮಾಜ, ದೇಶವನ್ನು ಎತ್ತರಕ್ಕೊಯ್ಯುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ ಎಂದು ತಿಳಿಸಿದರು.

ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ದಿವಾಕರ ಶೆಟ್ಟಿ ಮಾತನಾಡಿ, ಮಕ್ಕಳನ್ನು ನೀವು ಪ್ರೀತಿಸಿ. ಅವರೂ ನಿಮ್ಮನ್ನು ಖಂಡಿತ ಅದೇ ರೀತಿ ಪ್ರೀತಿಸುತ್ತಾರೆ. ಶಿಕ್ಷಕರಿಗಿರುವ ಸ್ಥಾನಮಾನ ಎಂದಿಗೂ ಬದಲಾಗಲ್ಲ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ. ಗೌರವ ಕಡಿಮೆಯಾಯೆಯಿತೆಂದು ಕೊರಗಬೇಡಿ. ಗುರುವಿಗಿರುವ ಗೌರವ ಎಂದಿಗೂ ಕಡಿಮೆಯಾಗಲ್ಲ ಎಂದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕೆ.ಜಿ., ಗೀತಾ ಎಚ್.ಎಸ್.ಎನ್. ಫೌಂಡೇಶನ್ ಅಧ್ಯಕ್ಷ ಶಂಕರ ಐತಾಳ್, ಬಂಟರ ಯಾನೆ ನಾಡವರ ಮಾತೃ ಸಂಘದ ತಾಲೂಕು ಸಂಚಾಲಕ ಸಂಪತ್ ಕುಮಾರ್ ಶೆಟ್ಟಿ, ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ನವೀನ್ ಚಂದ್ರ ಹೆಗ್ಡೆ, ಅಲ್ಬಾಡಿ ಶಾಲೆಯ ಶಿಕ್ಷಕಿ ಪ್ರೇಮಾವತಿ ಎಸ್., ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸತ್ಯನಾರಾಯಣ ಜಿ., ಬಿಆರ್ ಇಸಿ ಸಂಯೋಜಕ ಅರುಣ್ ಕುಮಾರ್ ಶೆಟ್ಟಿ, ವಿವಿಧ ಶಿಕ್ಷಕರ ಸಂಘಗಳ ಅಧ್ಯಕ್ಷರಾದ ಶೇಖರ್ ಪೂಜಾರಿ, ಶಿವರಾಮ್, ಉದಯ ಮಡಿವಾಳ, ಅಬ್ದುಲ್ ರವೂಫ್, ಪ್ರದೀಪ್ ಶೆಟ್ಟಿ, ಪ್ರದೀಪ್ ಭಂಡಾರಿ, ಶಾಲಿನಿ, ಉಷಾಲತಾ, ನಿತ್ಯಾನಂದ ಶೆಟ್ಟಿ, ಗಣೇಶ್ ಕುಮಾರ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

ಕುಂದಾಪುರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಪ್ರಾಸ್ತಾವಿಕ ವಾಗಿ ಮಾತನಾಡಿ, ಸ್ವಾಗತಿಸಿದರು. ಶಿಕ್ಷಕರಾದ ಸಂತೋಷ್ ಕುಮಾರ್ ಹಾಗೂ ಮಹೇಶ್ ವಕ್ವಾಡಿ ಕಾರ್ಯಕ್ರಮ ನಿರೂಪಿಸಿದರು. ಶೇಖರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor