ಮನಸ್ಥಿತಿ ಶುದ್ಧವಾಗಿರಬೇಕಾಗಿರುವುದು ಮುಖ್ಯ: ಜಯಪ್ರಕಾಶ್ ಹೆಗ್ಡೆ
ಉತ್ತರಾಖಂಡ ಬಿಜೆಪಿ ಸರಕಾರದ ವಿರುದ್ಧ ಕಪ್ಪುಪಟ್ಟಿ ಧರಿಸಿ ಸತ್ಯಾಗ್ರಹ
ಉಡುಪಿ, ಸೆ.12: ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳವನ್ನು ಶುದ್ಧಗೊಳಿಸಿದವರು ಮೊದಲು ತಮ್ಮ ಮನಸ್ಥಿತಿಯನ್ನು ಶುದ್ಧ ಮಾಡಿ ಕೊಳ್ಳಬೇಕಾಗಿದೆ. ಕೇವಲ ಬಹಿರಂಗವಾಗಿ ಶುದ್ಧವಾಗಿದ್ದರೆ ಸಾಲದು, ಅಂತರಂಗ ಕೂಡ ಶುದ್ದಿ ಆಗಿರಬೇಕಿರುವುದು ಕೂಡ ಮುಖ್ಯ. ಮಾನವೀಯ ಮೌಲ್ಯದೊಂದಿಗೆ ಪ್ರತಿಯೊಬ್ಬರನ್ನು ಮನುಷ್ಯರಂತೆ ಕಂಡರೆ ಮಾತ್ರ ಮಾನವರಾಗಿ ಬದುಕಲು ಸಾಧ್ಯ ಎಂದು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಆರೋಪಿಸಿದ್ದಾರೆ.
ಉತ್ತರಾಖಂಡದ ಹಲ್ಕಾನಿಯಲ್ಲಿ ಎಐಸಿಸಿ ಅಧ್ಯಕ, ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ರಾಮಲೀಲಾ ಮೈದಾನದ ವೇದಿಕೆಯನ್ನು ಶುದ್ದೀಕರಿಸಿದ ಘಟನೆ ಹಾಗೂ ಅದನ್ನು ವಿರೋಧಿಸಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿದ ಉತ್ತರಾಖಂಡದ ಬಿಜೆಪಿ ಸರಕಾರ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ನೇತೃತ್ವದಲ್ಲಿ ಶನಿವಾರ ಅಜ್ಜರಕಾಡು ಗಾಂಧಿ ಪ್ರತಿಮೆ ಬಳಿ ಹಮ್ಮಿಕೊಳ್ಳಲಾದ ಕಪ್ಪು ಪಟ್ಟಿ ಧರಿಸಿ ಧರಣಿ ಸತ್ಯಾಗ್ರಹವನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಇಂದು ಆಡಳಿತ ವ್ಯವಸ್ಥೆಯ ತಪ್ಪನ್ನು ಎತ್ತಿ ತೋರಿಸಿದರೆ ದೇಶದ್ರೋಹದ ಪಟ್ಟವನ್ನು ಕಟ್ಟಲಾಗುತ್ತದೆ. ಅದೇ ವ್ಯವಸ್ಥೆಯ ಪರವಾಗಿದ್ದರೆ ದೇಶಪ್ರೇಮಿ ಎಂದು ಕರೆಯುವ ಸ್ಥಿತಿ ನಮ್ಮ ದೇಶದಲ್ಲಿ ನಿರ್ಮಾಣವಾಗಿದೆ. ಆದರೆ ಇಂದು ಬದಲಾವಣೆ ಪರ್ವ ಆರಂಭವಾಗಿದೆ. ಜನ ಬದಲಾವಣೆಯನ್ನು ಕೇಳುತ್ತಿದ್ದಾರೆ. ಯುವ ಸಮುದಾಯ ವ್ಯವಸ್ಥೆ ವಿರುದ್ಧ ಸೆಟೆದು ನಿಂತಿದೆ ಎಂದು ಅವರು ತಿಳಿಸಿದರು.
ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಸಮಾನತೆ ಎಂಬುದು ಸಂವಿಧಾನ ಮುಖ್ಯ ಆಶಯ ವಾಗಿದೆ. ಬಿಜೆಪಿಯವರು ಅಸ್ಪಶ್ಯತೆ ಆಚರಿಸುವ ಮೂಲಕ ಸಂವಿಧಾನದ ಆಶಯಕ್ಕೆ ಕೊಡಲಿ ಏಟು ಹಾಕುತ್ತಿದ್ದಾರೆ. ಈ ಮೂಲಕ ಸಂವಿಧಾನದ ಬದಲು ಮನುಸ್ಮತಿಯನ್ನು ಜಾರಿಗೆ ತರಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.
ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಡಾ.ಸುಬ್ರಹ್ಮಣ್ಯ ಭಟ್ ಮಾತನಾಡಿ, ಇದು ಕೇವಲ ಖರ್ಗೆಯವರಿಗೆ ಮಾಡಿರುವ ಅವಮಾನ ಅಲ್ಲ. ಬದಲು ಇಡೀ ದಲಿತ ಸಮುದಾಯಕ್ಕೆ ಮಾಡಿರುವ ಅವಮಾನ ಆಗಿದೆ. ದಲಿತರನ್ನು ದಲಿತರ ಮೂಲಕವೇ ಧಮನಿಸುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿಯ ಆಡಳಿತ ವೈಫಲ್ಯದಿಂದ ಜನರ ಗಮನ ವನ್ನು ಬೇರೆ ಕಡೆ ಕೊಂಡೊಯ್ಯಲು ಈ ರೀತಿ ವಿವಾದಗಳನ್ನು ಸೃಷ್ಠಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ದಿನೇ ದಿನೇ ಕುಸಿಯುವಂತೆ ಇವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ವಿದ್ವಾಂಸ ಡಾ.ಗಣನಾಥ ಎಕ್ಕಾರು ಮಾತನಾಡಿದರು.
ಧರಣಿಯಲ್ಲಿ ಕಾಂಗ್ರೆಸ್ ಮುಖಂಡರಾದ ಹರಿಪ್ರಸಾದ್ ರೈ, ಅಶೋಕ್ ಕುಮಾರ್ ಕೊಡವೂರು, ರಮೇಶ್ ಕಾಂಚನ್, ಜ್ಯೋತಿ ಹೆಬ್ಬಾರ್, ರೋಶನಿ ಒಲಿವೇರಾ, ಹಬೀಬ್ ಅಲಿ, ಶಬ್ಬೀರ್ ಉಡುಪಿ, ಶರ್ಫುದ್ದೀನ್, ಶೇಖ್ ವಾಹೀದ್ ದಾವೂದ್, ಲೂವಿಸ್ ಲೋಬೊ, ಗಣೇಶ್ ನೆರ್ಗಿ, ಕಿರಣ್ ಕುಮಾರ್ ಉದ್ಯಾವರ, ಕುಶಲ್ ಶೆಟ್ಟಿ, ದಿವಾಕರ್ ಕುಂದರ್, ದಿನೇಶ್ ಪುತ್ರನ್, ಪ್ರಖ್ಯಾತ್ ಶೆಟ್ಟಿ, ವಿಶ್ವಾಸ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುದರ್ಶನ್ ಬಳಗದಿಂದ ಗಾಂಧಿ ಸ್ಮತಿ ನಡೆಯಿತು. ನಿವೃತ್ತ ಪ್ರಾಧ್ಯಾಪಕ ದಯಾನಂದ ಕಾರ್ಯಕ್ರಮ ನಿರೂಪಿಸಿದರು.