ಕಾಪು | ಗೂಡ್ಸ್ ವಾಹನದಲ್ಲಿ ಮಕ್ಕಳ ಸಾಗಾಟ: ಪ್ರಕರಣ ದಾಖಲು
ಕಾಪು, ಸೆ.11: ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಕಟಪಾಡಿ ಅಂಡರ್ ಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೆ.10ರಂದು ಸಂಜೆ ವೇಳೆ ಮಕ್ಕಳನ್ನು ಅಪಾಯಕಾರಿ ರೀತಿಯಲ್ಲಿ ಕರೆದೊಯುತ್ತಿದ್ದ ಗೂಡ್ಸ್ ವಾಹನವನ್ನು ಕಾಪು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಗೂಡ್ಸ್ ವಾಹನದಲ್ಲಿ ಚಾಲಕನು ವಾಹನದ ಪರವಾನಗಿ ನಿಯಮಗಳನ್ನು ಉಲ್ಲಂಘನೆ ಮಾಡಿ ಸುಮಾರು 8 ರಿಂದ 10 ಜನ ಮಕ್ಕಳನ್ನು ವಾಹನದ ಹಿಂಬದಿಯ ಬಾಡಿಯಲ್ಲಿ ನಿಲ್ಲಿಸಿಕೊಂಡು ಅಪಾಯಕಾರಿ ರೀತಿಯಲ್ಲಿ ಕರೆದೊಯ್ಯುತ್ತಿದ್ದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಆ ಬಗ್ಗೆ ಸೆ.11ರಂದು ಕಾಪು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡು, ಮಕ್ಕಳನ್ನು ಸಾಗಿಸಿದ ಗೂಡ್ಸ್ ವಾಹನವನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.