ಕಟ್ಬೇಲ್ತೂರು ರೈಲ್ವೆ ಸೇತುವೆ ಅಪಾಯಕಾರಿ ತಿರುವು ಸರಿಪಡಿಸಲು ಆಗ್ರಹಿಸಿ ಧರಣಿ
ಕುಂದಾಪುರ, ಸೆ.15: ಕಟ್ಬೇಲ್ತೂರು ಗ್ರಾಮದ ರೈಲ್ವೆ ಸೇತುವೆಯಲ್ಲಿರುವ ಅಪಾಯಕಾರಿ ತಿರುವನ್ನು ತಕ್ಷಣ ಸರಿಪಡಿಸಿ, ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ನೇತೃತ್ವದಲ್ಲಿ ಮಂಗಳವಾರ ಕಟ್ಬೇಲ್ತೂರು ಗ್ರಾಮ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಕಟ್ಬೇಲ್ತೂರು ರೈಲ್ವೆ ಸೇತುವೆಯ ಅಪಾಯಕಾರಿ ತಿರುವಿನ ಸಮಸ್ಯೆ ಹಲವು ವರ್ಷಗಳಿಂದ ಮುಂದು ವರಿದಿದ್ದರೂ ಸಂಬಂಧಪಟ್ಟ ಇಲಾಖೆಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಗ್ರಾಮಸ್ಥರು ಹಲವು ಬಾರಿ ಗ್ರಾಪಂ ಮೂಲಕ ಮನವಿ ಸಲ್ಲಿಸಿ, ಪ್ರತಿಭಟನೆ ನಡೆಸಿ ಸಮಸ್ಯೆಯ ಗಂಭೀರತೆಯನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೂ ರೈಲ್ವೆ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಈ ವಿಚಾರ ದಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ. ಅಪಾಯಕಾರಿ ತಿರುವಿನಿಂದಾಗಿ ಈಗಾಗಲೇ 7-8 ಅಮೂಲ್ಯ ಜೀವಗಳು ಕಳೆದು ಹೋಗಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ಇನ್ನಷ್ಟು ಅಪಘಾತಗಳು ಸಂಭವಿ ಸುವ ಮುನ್ನವೇ ಸೇತುವೆಯ ತಿರುವನ್ನು ಅಗಲೀಕರಣಗೊಳಿಸಿ ವೈಜ್ಞಾನಿಕವಾಗಿ ಸರಿಪಡಿಸಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸಿಪಿಎಂ ಮುಖಂಡ ಎಚ್.ನರಸಿಂಹ ಮಾತನಾಡಿ, ತಂತ್ರಜ್ಞಾನ ಮತ್ತು ವೈಜ್ಞಾನಿಕ ಅಭಿವೃದ್ಧಿ ಇಷ್ಟೊಂದು ಮುಂದುವರಿದರೂ ಕೂಡ ಜನರ ಜೀವಕ್ಕೆ ಅಪಾಯ ಉಂಟುಮಾಡುವ ಇಂತಹ ಸಮಸ್ಯೆಯನ್ನು ವರ್ಷಗಳಿಂದ ಬಗೆಹರಿಸದಿರುವುದು ಆಡಳಿತದ ವೈಫಲ್ಯವಾಗಿದೆ. ಸಾರ್ವಜನಿಕರ ಸುರಕ್ಷತೆಯನ್ನು ಕಡೆಗಣಿಸದೆ, ಸಂಬಂಧಪಟ್ಟ ಇಲಾಖೆಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಸಮಸ್ಯೆ ಪರಿಹಾರಕ್ಕಾಗಿ ಗ್ರಾಮದ ಜನರು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ಹೇಳಿದರು.
ಮುಖಂಡರಾದ ಚಂದ್ರಶೇಖರ ವಿ. ಹಾಗೂ ಸಂತೋಷ ಹೆಮ್ಮಾಡಿ ಮಾತನಾಡಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೂಲಕ ರೈಲ್ವೆ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗೆ ಮನವಿ ನೀಡಲಾಯಿತು. ಧರಣಿಯಲ್ಲಿ ಸ್ಥಳೀಯರಾದ ಶ್ರೀಧರ ಗಾಣಿಗ, ರಮೇಶ್ ಗಾಣಿಗ, ಶಂಕರ ಆರ್ಚಾ, ಶಿವರಾಮ, ವಿಜಯ ಮೊದಲಾದವರಿದ್ದರು.