ತುಳುವಿಗೆ ರಾಜ್ಯದ ಹೆಚ್ಚುವರಿ ಎರಡನೇ ಅಧಿಕೃತ ರಾಜ್ಯಭಾಷೆಯಾಗಿ ಘೋಷಿಸುವಂತೆ ತುಳುವರ ಆಗ್ರಹ
ಉಡುಪಿ, ಸೆ.15: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆಗೆ ಕರ್ನಾಟಕ ರಾಜ್ಯದ ಹೆಚ್ಚುವರಿ ಎರಡನೇ ಅಧಿಕೃತ ರಾಜ್ಯಭಾಷೆಯ ಸ್ಥಾನಮಾನ ನೀಡಬೇಕು ಎಂದು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಹಾಗೂ ತುಳು ಭಾಷಾ ಹೋರಾಟಗಾರ ಡಾ. ಆಕಾಶ್ ಜೈನ್ ಒತ್ತಾಯಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ವಿವಿಧ ತುಳು ಸಂಘಟನೆಗಳ ಸಹಯೋಗದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಕರ್ನಾಟಕದ ಪ್ರಾಚೀನ ಹಾಗೂ ಶ್ರೀಮಂತವಾದ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡಲು ಕಾನೂನಿನಲ್ಲಿ ಅವಕಾಶವಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚುವರಿ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಿರುವ ಉದಾಹರಣೆಗಳಿವೆ ಎಂದೂ ಅವರು ಹೇಳಿದರು.
1956ರಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯ ಸಂದರ್ಭದಲ್ಲಿ ತುಳುವಿಗೂ ಪ್ರತ್ಯೇಕ ಪ್ರಾಂತ್ಯ ರಚಿಸುವ ಅವಕಾಶ ವಿತ್ತು. ತುಳು ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿದ್ದು, ಕನ್ನಡದೊಂದಿಗೆ ಸಾವಿರಾರು ವರ್ಷಗಳ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಬಾಂಧವ್ಯ ಹೊಂದಿದೆ. ಆ ಸಂದರ್ಭದಲ್ಲಿ ತುಳುವರ ಮನವೊಲಿಸಿ, ಮುಂದಿನ ದಿನಗಳಲ್ಲಿ ಸೂಕ್ತ ಪ್ರಾತಿನಿಧ್ಯ ಹಾಗೂ ಸ್ಥಾನಮಾನ ಕಲ್ಪಿಸುವ ಭರವಸೆಯ ಹಿನ್ನೆಲೆಯಲ್ಲಿ ಪ್ರತ್ಯೇಕ ಪ್ರಾಂತ ರಚನೆಯ ಬೇಡಿಕೆಯನ್ನು ಮುಂದೂಡಲಾಯಿತು ಎಂದು ಅವರು ವಿವರಿಸಿದರು.
ಆದರೆ ಸ್ವಾತಂತ್ರ್ಯದ 80ನೇ ವರ್ಷಕ್ಕೆ ಕಾಲಿಡುತ್ತಿದ್ದರೂ ತುಳು ಭಾಷೆಗೆ ಇದುವರೆಗೆ ಸೂಕ್ತ ಸ್ಥಾನಮಾನ ದೊರೆತಿಲ್ಲ ಎಂದು ವಿಷಾದಿಸಿದ ಅವರು, ತುಳುಭಾಷೆಗೆ ಸೂಕ್ತವಾದ ಸಂವಾದಿಧಾನಿಕ, ಆಡಳಿತಾತ್ಮಕ ಹಾಗೂ ಅಧಿಕೃತ ಸ್ಥಾನಮಾನವನ್ನು ನೀಡುವುದು ಕರ್ನಾಟಕ ಸರಕಾರದ ಜವಾಬ್ದಾರಿಯಾಗಿದೆ ಎಂದರು.
ಡಾ.ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ. ಗಣನಾಥ್ ಎಕ್ಕಾರು ಮಾತನಾಡಿ, ತುಳು ಭಾಷೆಯನ್ನು ಕೇವಲ ಕರಾವಳಿ ಕರ್ನಾಟಕದಲ್ಲಷ್ಟೇ ಅಲ್ಲದೆ ವಿಶ್ವದಾದ್ಯಂತ ಲಕ್ಷಾಂತರ ಮಂದಿ ಮಾತನಾಡುತ್ತಿದ್ದಾರೆ. ತುಳುವಿಗೆ ಕರ್ನಾಟಕದ ಹೆಚ್ಚುವರಿ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವಂತೆ ಎಲ್ಲರೂ ಒಗ್ಗಟ್ಟಿನಿಂದ ಒತ್ತಾಯಿಸ ಬೇಕು. ಇದರಿಂದ ಸಂವಿಧಾನದ ಎಂಟನೇ ಪರಿಚ್ಛೇಧಕ್ಕೆ ತುಳುಭಾಷೆಯನ್ನು ಸೇರಿಸಲು ಬಲ ಬರಲಿದೆ. ಆದ್ದರಿಂದ ಸೆ.18ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಮಸ್ತ ತುಳುವರ ಪರವಾಗಿ ತಾವು ಆಗ್ರಹಿಸುವುದಾಗಿ ಡಾ.ಎಕ್ಕಾರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೈ ತುಳುನಾಡು ಒಡಿಪು ಘಟಕದ ಅಧ್ಯಕ್ಷ ಸಂತೋಷ್ ಎನ್.ಎಸ್. ಕಟಪಾಡಿ, ಉಡುಪಿ ಸಿರಿ ತುಲು ಚಾವಡಿ ಕಾರ್ಯದರ್ಶಿ ಈಶ್ವರ ಶೆಟ್ಟಿ ಚಿಟ್ಪಾಡಿ, ಕೋಶಾಧಿಕಾರಿ ಅಂಬಿಕಾ ರಾವ್ ಮೊದಲಾದವರು ಉಪಸ್ಥಿತರಿದ್ದರು.