ಉಡುಪಿ, ಸೆ.21: ಅಂತರ್ಗತ ಉತ್ಪಾದನಾ ದೋಷವುಳ್ಳ ಇಲೆಕ್ಟ್ರೀಕ್ ಸ್ಕೂಟರ್ ಪೂರೈಕೆ ಮತ್ತು ಸೇವಾ ನ್ಯೂನತೆ ಸಂಬಂಧ ಗ್ರಾಹಕರಿಗೆ ವೆಚ್ಚ ಪರಿಹಾರ ಪಾವತಿಸುವಂತೆ ಚೇತಕ್ ಬಜಾಜ್ ಅಟೋ ಕಂಪೆನಿಗೆ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ನ್ಯಾಯಾಲಯ ಆದೇಶ ನೀಡಿದೆ.

ಕಟಪಾಡಿ ಮಣಿಪುರದ ಗ್ರಾಹಕರಾದ ರಿತೀಶ್ ಎಸ್.ಸುವರ್ಣ ಚೇತಕ್ ಇಲೆಕ್ಟ್ರಿಕ್ ಸ್ಕೂಟರನ್ನು ಖರೀದಿಸಿದ್ದರು. ಖರೀದಿಸಿದ ಸ್ವಲ್ಪ ಸಮಯದಲ್ಲಿಯೇ ವಾಹನವು ಬ್ಯಾಟರಿ ತಾಂತ್ರಿಕ ದೋಷಗಳೊಂದಿಗೆ ಕಂಡುಬಂತು. ಈ ಬಗ್ಗೆ ಕಂಪೆನಿಯ ಅಧಿಕೃತ ಸರ್ವಿಸ್ ಸೆಂಟರಿನಲ್ಲಿ ಸರ್ವಿಸ್ ಮಾಡಿದ್ದು, ಮೂರನೇ ಸರ್ವಿಸ್ ಅವಧಿಯೊಳಗೆ ಒಟ್ಟಾರೆ 2 ಬಾರಿ ಇಲೆಕ್ಟ್ರಿಕ್ ಸ್ಕೂಟರಿನ ಬ್ಯಾಟರಿಯನ್ನು ಬದಲಾಯಿಸಲಾಯಿತು. ಬ್ಯಾಟರಿಯಲ್ಲಿ 3ನೇ ಬಾರಿಯೂ ದೋಷ ಕಂಡುಬಂದಿರುವುದರಿಂದ ಗ್ರಾಹಕರಿಗೆ ತುಂಬಲಾರದ ಕಷ್ಟ-ನಷ್ಟ ಉಂಟಾಯಿತು.

ಈ ಸಂಬಂಧ ಕಂಪೆನಿಯವರಿಗೆ ವಕೀಲರ ಮೂಲಕ ನೋಟೀಸು ನೀಡಿದರೂ, ಸಮರ್ಪಕವಾದ ಉತ್ತರ ನೀಡಲಿಲ್ಲ. ಬಳಿಕ ರಿತೀಶ್ ಸುವರ್ಣ ಕಂಪೆನಿಯ ವಿರುದ್ಧ, ನ್ಯಾಯಕ್ಕಾಗಿ, ಗ್ರಾಹಕ ನ್ಯಾಯಾಲಯಕ್ಕೆ ದೂರು ಅರ್ಜಿಯನ್ನು ಸಲ್ಲಿಸಿದರು. ಗ್ರಾಹಕ ನ್ಯಾಯಾಲಯವು ಅರ್ಜಿದಾರರ ದೂರು ಹಾಗೂ ಎದುರುದಾರ ಕಂಪೆನಿಯ ಆಕ್ಷೇಪ ದಾಖಲೆಗಳನ್ನು ವಾಹನದ ಸರ್ವಿಸ್ ದಾಖಲೆಗಳನ್ನು ಪರಿಶೀಲಿಸಿತು.

ನಿರಂತರ 2 ಬಾರಿ ಬ್ಯಾಟರಿಯನ್ನು ಬದಲಾಯಿಸಿದರೂ ದೋಷವನ್ನು ಸರಿದೂಗಿಸಲು ಕಂಪೆನಿಯು ವಿಫಲವಾಗಿದೆ ಮತ್ತು ಇಲೆಕ್ಟ್ರಿಕ್ ವಾಹನದ ಅಂತರ್ಗತ ಉತ್ಪಾದನಾ ದೋಷವನ್ನು ಮತ್ತು ಸೇವಾ ನ್ಯೂನ್ಯತೆಯನ್ನು ಸಾಬೀತು ಪಡಿಸಿದೆ ಎಂದು ಅಭಿಪ್ರಾಯ ಪಟ್ಟ ನ್ಯಾಯಾಲಯ, ವಾಹನದ ಖರೀದಿ ಮೊತ್ತವಾದ 1,21,750ರೂ.ವನ್ನು ಶೇ.9 ಬಡ್ಡಿಯೊಂದಿಗೆ ಹಾಗೂ ಹಾಗೂ ಇತರ ಖರ್ಚು 15,000ರೂ.ವನ್ನು ಆದೇಶ ಪಡೆದ 30 ದಿನಗಳೊಳಗೆ ಪಾವತಿ ಸುವಂತೆ ಅಧ್ಯಕ್ಷ ಸುನೀಲ್ ಟಿ. ಮಸರೆಡ್ಡಿ ಹಾಗೂ ಸುಜಾತ ಬಿ.ಕೊರಳ್ಳಿ ಅವರನ್ನೊಳಗೊಂಡ ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯವು ಆ.5ರಂದು ಆದೇಶ ನೀಡಿದೆ. ಗ್ರಾಹಕರ ಪರವಾಗಿ ವಕೀಲ ವಿವೇಕಾನಂದ ಮಲ್ಯ ಹಾಗೂ ಪ್ರವೀಣ್ ಪೂಜಾರಿ ವಾದವನ್ನು ಮಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor