ಉಡುಪಿ: ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನೆ
ಉಡುಪಿ, ಸೆ.21: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಶಾಸಕ ಯಶ್ಪಾಲ್ ಎ ಸುವರ್ಣ ಅಜ್ಜರಕಾಡು ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ರೀಡೆಗಳು ಕ್ರೀಡಾಪಟುಗಳ ಭವಿಷ್ಯಕ್ಕೆ ಭದ್ರ ಬುನಾದಿಯಾಗಬೇಕು. ಕ್ರೀಡಾಕೂಟಗಳು ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಎಂ.ಎ ಗಪೂರ್ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುಗಿಂತ ಮುಖ್ಯ ವಾಗಿ ಕ್ರೀಡಾಭಿಮಾನದಿಂದ ಪಾಲ್ಗೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸಿ ಆರೋಗ್ಯ ಸುಧಾರಣೆಗೂ ಮುಂದಾಗಬೇಕು ಎಂದರು.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಕುಂದಾಪುರ ಹಾಗೂ ಕಾಪು ತಾಲೂಕು ಕ್ರೀಡಾಧಿಕಾರಿಗಳಾದ ಸತ್ಯನಾರಾಯಣ ಜಿ ಮತ್ತು ರವೀಂದ್ರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಉಡುಪಿ ತಾಲೂಕು ಕ್ರೀಡಾಧಿಕಾರಿ ವಸಂತ ಜೋಗಿ ಕಾರ್ಯಕ್ರಮ ನಿರೂಪಿಸಿದರು.