ಉಡುಪಿ, ಸೆ.25: ಇಡೀ ದೇಶವನ್ನು ಸುತ್ತಿ ಭಾರತೀಯ ಸಂಸ್ಕೃತಿಯನ್ನು ಅರಿಯಬೇಕು ಎಂಬ ಹಂಬಲದೊಂದಿಗೆ ಉತ್ತರ ಪ್ರದೇಶದ ಲಕ್ನೋ ಮೂಲದ ಆಕಾಶ್ ಶುಕ್ಲಾ ಎಂಬವರು ವಿಶಿಷ್ಟವಾದ ಅಖಿಲ ಭಾರತ ಪಾದಯಾತ್ರೆ ಕೈಗೊಂಡಿದ್ದು, ದಕ್ಷಿಣ ಭಾರತದ ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶ ರಾಜ್ಯಗಳನ್ನು ಯಶಸ್ವಿಯಾಗಿ ಮುಗಿಸಿ, ಇದೀಗ ಕರ್ನಾಟಕಕ್ಕೆ ಪ್ರವೇಶಿಸಿದ್ದಾರೆ.

ತಮ್ಮ ಬೆನ್ನ ಮೇಲೆ ಭಾರತದ ತ್ರಿವರ್ಣ ಧ್ವಜ ಹಾಗೂ ಕೈಯಲ್ಲೊಂದು ಬ್ಯಾನರ್ ಧರಿಸಿ ಸಾಗುತ್ತಿರುವ ಆಕಾಶ್, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ದೇಶದ ಎಲ್ಲಾ 28 ರಾಜ್ಯಗಳು ಹಾಗೂ 806 ಜಿಲ್ಲೆಗಳನ್ನು ಕಾಲ್ನಡಿಗೆ ಯಲ್ಲೇ ಕ್ರಮಿಸುವ ಬೃಹತ್ ಗುರಿ ಹೊಂದಿದ್ದಾರೆ.

ಈಗಾಗಲೇ 9 ತಿಂಗಳಿಗೂ ಹೆಚ್ಚು ಕಾಲ ನಿರಂತರವಾಗಿ ನಡೆದು 3 ರಾಜ್ಯಗಳನ್ನು ದಾಟಿದ್ದಾರೆ. ಸ್ಥಳೀಯ ಜನರು ನೀಡುವ ಪ್ರೀತಿ, ಆತಿಥ್ಯ ಹಾಗೂ ದಾರಿಯುದ್ದಕ್ಕೂ ಸಿಗುವ ದೇವಸ್ಥಾನಗಳೇ ಇವರ ಪ್ರವಾಸಕ್ಕೆ ಆಸರೆಯಾಗಿವೆ. ಪಾದಯಾತ್ರೆ ಮಾಡುತ್ತಿರುವ ಶುಕ್ಲರವರು ಉಡುಪಿಗೆ ಆಗಮಿಸಿ, ಉಡುಪಿಯ ಕೃಷ್ಣ ಮಠದಲ್ಲಿ ದೇವರ ದರ್ಶನವನ್ನು ಪಡೆದು ಧರ್ಮಸ್ಥಳಕ್ಕೆ ತೆರಳುವ ದಾರಿಯಲ್ಲಿ ಮಾಧ್ಯಮದವರನ್ನು ಭೇಟಿಯಾಗಿ ತನ್ನ ಯಾತ್ರೆಯ ಅನುಭವವನ್ನು ಹಂಚಿಕೊಂಡರು

ಯಾವುದೇ ಪ್ರಚಾರ ಅಥವಾ ಪ್ರಸಿದ್ಧಿಯ ಹಪಹಪಿತನವಿಲ್ಲದೆ, ಕೇವಲ ಭಾರತ ದರ್ಶನ ಒಂದೇ ಸಂಕಲ್ಪದೊಂದಿಗೆ ಹೆಜ್ಜೆ ಇಡುತ್ತಿರುವ ಈ ಯುವಕನ ದೇಶಪ್ರೇಮ ಹಾಗೂ ಧೈರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor