ರಾಜ್ಯ ಕಾಂಗ್ರೆಸ್ ಸರಕಾರ ವಿರುದ್ಧ ಬಿಜೆಪಿ ಪ್ರತಿಭಟನೆ
ಉಡುಪಿ, ಸೆ.25: ರಾಜ್ಯ ಕಾಂಗ್ರೆಸ್ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಶುಕ್ರವಾರ ಕಡಿಯಾಳಿ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ರಾಜ್ಯದಲ್ಲಿ ದಿವಾಳಿ ಸರಕಾರ ಆಡಳಿತ ನಡೆಸುತ್ತಿದೆ. ಸರಕಾರದ ಬೊಕ್ಕಸದಲ್ಲಿ ಹಣವಿಲ್ಲದಿದ್ದರೂ ಕರಾವಳಿ ಜಿಲ್ಲೆಗಳಿಗೆ 32 ಸಾವಿರ ಕೋಟಿ ರೂ. ಹಾಗೂ ಹೈದರಾಬಾದ್ ಕರ್ನಾಟಕ ಭಾಗಕ್ಕೆ 1 ಲಕ್ಷ ಕೋಟಿ ರೂ. ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುರ್ಮಾ ಘೋಷಿಸುತ್ತಿದ್ದಾರೆ. ಹಣವಿಲ್ಲದ ಮೇಲೆ ಅನುದಾನ ಎಲ್ಲಿಂದ ತಂದು ನೀಡುತ್ತಾರೆ ಎಂದು ಪ್ರಶ್ನಿಸಿದರು.
ಬಿಜೆಪಿ ಮುಖಂಡ ಕೆ.ಉದಯಕುಮಾರ್ ಶೆಟ್ಟಿ ಮಾತನಾಡಿ, ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಕರಾವಳಿ ಜಿಲ್ಲೆಗಳಲ್ಲಿ ಘೋಷಿಸಿರುವ ಯೋಜನೆಗಳು ಮತ್ತು ಅನುದಾನ ಠುಸ್ ಪಟಾಕಿಯಂತಿವೆ. ಸುಮಾರು 2 ಲಕ್ಷ ಕೋಟಿ ರೂ. ಕಾಮಗಾರಿಗಳ ಬಿಲ್ ಬಾಕಿ ಇದೆ ಎಂಬ ಆರೋಪಗಳ ನಡುವೆ ಸರಕಾರಿ ನೌಕರರ ವೇತನ ನೀಡಲೂ ಹಣವಿಲ್ಲದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಕರಾವಳಿ ಜಿಲ್ಲೆಗಳಿಗೆ 32 ಸಾವಿರ ಕೋಟಿ ರೂ. ಅನುದಾನ ಘೋಷಿಸಿರುವುದನ್ನು ನಂಬಲು ಸಾಧ್ಯವಿಲ್ಲ. ಇದು ಕೇವಲ ಪ್ರಚಾರಕ್ಕಾಗಿ ಮಾಡಿರುವ ಘೋಷಣೆ ಎಂದು ಟೀಕಿಸಿದರು.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮುಖಂಡರಾದ ಸಂಧ್ಯಾ ರಮೇಶ್, ದಿನಕರ ಶೆಟ್ಟಿ ಹೆರ್ಗ, ಶಿಲ್ಪಾ ಸುವರ್ಣ, ಪ್ರಭಾಕರ ಪೂಜಾರಿ, ವಿಜಯ ಕೊಡವೂರು, ಶ್ರೀಕಾಂತ್ ನಾಯಕ್, ದಿನಕರ ಬಾಬು, ಮಧುಕರ ಮುದ್ರಾಡಿ, ಶ್ರೀನಿಧಿ ಹೆಗ್ಡೆ, ಶಿವಕುಮಾರ್ ಅಂಬಲಪಾಡಿ, ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ರಶ್ಮಿ ಬಾಲಕೃಷ್ಣ, ಗಿರೀಶ್ ಅಂಚನ್, ದಿನೇಶ್ ಅಮೀನ್, ಪ್ರಜ್ಞಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.