ಇತಿಹಾಸದ ಸ್ಮಾರಕಗಳನ್ನು ಅಳಿವಿನಂಚಿನಿಂದ ರಕ್ಷಿಸಿ: ಡಾ. ಪರಮಶಿವಮೂರ್ತಿ
ಬಾರಕೂರಿನಲ್ಲಿ ಚಿಕ್ಕಾಯಿ ತಾಯಿ ಸಂಸ್ಮರಣಾ ಕಾರ್ಯಕ್ರಮ
ಬಾರಕೂರು: ಪರಂಪರೆಯಿಂದ ಬಂದ ಇತಿಹಾಸದ ಸ್ಮಾರಕಗಳನ್ನು ಅಳಿವಿನಂಚಿನಿಂದ ರಕ್ಷಿಸಬೇಕಾಗಿದೆ. ಇತಿಹಾಸದಲ್ಲಿ ವೈಭವದಿಂದ ಮೆರೆದ ಸ್ಥಳಗಳು ಇಂದು ತಿಪ್ಪೆಗುಂಡಿಗಳಾಗಿವೆ. ಇವುಗಳನ್ನು ವಿದ್ಯಾರ್ಥಿಗಳು ಹೆಚ್ಚು ಜತನದಿಂದ ಕಾಪಾಡಿಕೊಳ್ಳಬೇಕಿವೆ. ಏಕೆಂದರೆ ಇವುಗಳು ಚರಿತ್ರೆಯ ಸ್ಮರಣೆಯೊಂದಿಗೆ ಭವಿಷ್ಯಕ್ಕೆ ದಾರಿದೀಪ ಗಳಾಗಿರುತ್ತವೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದ್ದಾರೆ.
ಬಾರಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು, ಗುಳ್ಳಾಡಿಯ ವೀರರಾಣಿ ಚಿಕ್ಕಾಯಿ ತಾಯಿ ಚಾರಿಟೇಬಲ್ ಟ್ರಸ್ಟ್ ಹಾಗೂ ಉಡುಪಿ ಅದಿಮ ಕಲಾಟ್ರಸ್ಟ್‌ಗಳ ಸಹಯೋಗದೊಂದಿಗೆ ಬಾರಕೂರಿನಲ್ಲಿ ಹಮ್ಮಿಕೊಂಡ ಮಂಗಳೂರು ವಿವಿಯ ವಿವಿಧ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಂದ ನಡೆದ ‘ಐತಿಹಾಸಿಕ ಬಾರಕೂರಿನ ಶಾಸನಗಳ ಸ್ವಚ್ಛತಾ ಅಭಿಯಾನ, ಚಿಕ್ಕಾಯಿ ತಾಯಿ ಸಂಸ್ಮರಣಾ ಕಾರ್ಯಕ್ರಮ ಹಾಗೂ ಐತಿಹಾಸಿಕ ಪರಂಪರೆ ಉಳಿಸಿ ಬೃಹತ್ ಜಾಥಾ’ಗಳನ್ನು ಉದ್ಘಾಟಿಸಿ ಮಾತನಾಡುತಿದ್ದರು.
ಇತಿಹಾಸದಲ್ಲಿ ಬಸರೂರಿನೊಂದಿಗೆ ಕರಾವಳಿಯ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದ ಬಾರಕೂರಿನಂತೆ ಇಂದು ನಾಡಿನ ಸಾವಿರಾರು ಐತಿಹಾಸಿಕ ಸ್ಥಳಗಳು ಶೋಚನೀಯ ಸ್ಥಿತಿಯಲ್ಲಿವೆ. ಸದ್ಯ ಬಾರಕೂರಿನಲ್ಲಿರುವ ಶಾಸನಗಳು, ಸ್ಮಾರಕಗಳನ್ನು ಯುವ ಪೀಳಿಗೆಯ ಮೂಲಕ ಉಳಿಸುವ ಅದಿಮ ಕಲಾ ಟ್ರಸ್ಟ್ ಹಾಗೂ ಚಿಕ್ಕಾಯಿ ತಾಯಿ ಟ್ರಸ್ಟ್‌ನ ಪ್ರಯತ್ನ ಖಂಡಿತ ಪ್ರಶಂಸಾರ್ಹ ಎಂದು ಶಾಸನಶಾಸ್ತ್ರ ಹಾಗೂ ಇತಿಹಾಸದ ಅಧ್ಯಯನ ಮಾಡಿರುವ ಡಾ.ಪರಮ ಶಿವಮೂರ್ತಿ ತಿಳಿಸಿದರು.
ಕಲ್ಲು, ಶಾಸನಗಳು ಮೂಕ ಸ್ಮಾರಕಗಳಲ್ಲ. ಅವು ಮುಂದಿನ ಪೀಳಿಗೆಗೆ ನಮ್ಮ ಹಿರಿಯರ, ಇತಿಹಾಸದ ಕತೆ ಹೇಳುವ ಜೀವಂತ ಪಳೆಯುಳಿಕೆಗಳು. ಚರಿತ್ರೆ ನಮಗೆ ನಮ್ಮ ನಮ್ಮ ನಿಲುವುಗಳನ್ನು ತೋರಿಸಿಕೊಡುತ್ತವೆ. ನಾವಿಂದ ಯಾವ ಕಾಲಘಟ್ಟದಲ್ಲಿದ್ದೇವೆ ಎಂಬುದನ್ನು ಮನದಟ್ಟು ಮಾಡುತ್ತವೆ ಎಂದರು.
ಪರಂಪರೆ ನಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತವೆ. ನಾವೆಂದೂ ಚರಿತ್ರೆ ಯನ್ನು ಮರೆಯಬಾರದು. ಚರಿತ್ರೆಯ ಸ್ಮರಣೆಯಿಂದ ನಮ್ಮ ಭವಿಷ್ಯವನ್ನು ಹೇಗೆ ಕಟ್ಟಿಕೊಳ್ಳಬೇಕೆಂಬ ಬಗ್ಗೆ ನಮಗೊಂದು ಸ್ಪಷ್ಟತೆ ಸಿಗುತ್ತದೆ. ಚರಿತ್ರೆಯ ಘಟನೆಗಳು ನಮಗೆ ದಾರಿದೀಪಗಳು. ನಮ್ಮ ಹೆಜ್ಜೆ ಹೇಗಿರಬೇಕೆಂಬುದನ್ನು ಅವು ನೆನಪಿಸುತ್ತವೆ ಎಂದವರು ಅಭಿಪ್ರಾಯಪಟ್ಟರು.
ಸುಮಾರು 500-600 ವರ್ಷಗಳ ಹಿಂದೆ ಬಾರಕೂರು ಕರಾವಳಿಯ ಪ್ರಮುಖ ವ್ಯಾಪಾರಿ ಕೇಂದ್ರವಾಗಿತ್ತು. ಆದ್ದರಿಂದಲೇ ವಿಜಯನಗರ ಅರಸರು ತಮ್ಮ ಸಂಬಂಧಿಗಳನ್ನೇ ಇಲ್ಲಿನ ಆಡಳಿತಾಧಿಕಾರಿಗಳಾಗಿ ನೇಮಿಸುತಿದ್ದರು. 14ನೇ ಶತಮಾನದಲ್ಲಿ ಬಾರಕೂರನ್ನು ಆಳಿದ್ದ ಪ್ರೌಢದೇವರಾಯನ ಕಾಲದಲ್ಲಿ ಇಲ್ಲಿ ಕೃಷಿ ಉತ್ಪನ್ನಗಳಿಗೆ ರೆಗ್ಯುಲೇ ಟೆಡ್ ಮಾರ್ಕೆಟ್ ಇತ್ತೆಂಬುದನ್ನು ಇಲ್ಲಿನ ಎರಡು-ಮೂರು ಶಾಸನಗಳು ಹೇಳುತ್ತವೆ. ನಿಮ್ಮ ಈ ಪ್ರಯತ್ನದಿಂದ ಇಲ್ಲಿ ಉಳಿದಿರುವ ನೂರಾರು ಶಾಸನ, ಸ್ಮಾರಕಗಳು ಉಳಿಯಲಿ ಎಂದು ಡಾ. ಪರಮಶಿವಮೂರ್ತಿ ಹಾರೈಸಿದರು.
ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಉಡುಪಿ ಅದಿಮ ಕಲಾಟ್ರಸ್ಟ್‌ನ ಸ್ಥಾಪಕ ಸಂಚಾಲಕ ಹಾಗೂ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಪ್ರೊ.ಟಿ. ಮುರುಗೇಶಿ, 1324ರಿಂದ 1350ರವರೆಗೆ ಬಾರಕೂರನ್ನು ಆಳಿದ್ದ ಹೊಯ್ಸಳ ಹಾಗೂ ಅಳುಪ ಚಕ್ರವರ್ತಿಣಿ ಚಿಕ್ಕಾಯಿ ತಾಯಿ ಇತಿಹಾಸದಲ್ಲಿ ದೊಡ್ಡ ಹೆಸರು. ಉಳ್ಳಾಲದ ರಾಣಿ ಅಬ್ಬಕ್ಕ ಉತ್ಸವ ದಂತೆ ಬಾರಕೂರಿನಲ್ಲಿ ಚಿಕ್ಕಾಯಿ ತಾಯಿ ಉತ್ಸವವನ್ನು ಆಚರಿಸುವಂತಾಗಲು ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ ಎಂದರು.
ಅಭಿಯಾನ ನಿರಂತರ: ಯುವ ಜನಾಂಗ, ವಿದ್ಯಾರ್ಥಿಗಳ ಮೂಲಕ ಐತಿಹಾಸಿಕ ಪರಂಪರೆಯನ್ನು ಉಳಿಸಿ, ಅವರಲ್ಲಿ ಇತಿಹಾಸ ಹಾಗೂ ಪರಂಪರೆಯ ಬಗ್ಗೆ ಒಲವನ್ನು ಬೆಳೆಸುವ ಉದ್ದೇಶದಿಂದ ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಶಾಸನಗಳ ಸ್ವಚ್ಛತಾ ಅಭಿಯಾನ ಹಾಗೂ ಪರಂಪರೆ ಉಳಿಸಿ ಜಾಥಾ ಆಯೋಜಿಸಲಾಗಿದೆ. ಶಾಸನಗಳ ಸ್ವಚ್ಛತಾ ಅಭಿಯಾನ ಇಲ್ಲಿ ಪ್ರತಿ ವಾರ ನಡೆಯಲಿದೆ. ಇಲ್ಲಿನ ಎಲ್ಲಾ ಶಾಸನಗಳ ಹಾಗೂ ಸ್ಮಾರಕಗಳ ಸ್ವಚ್ಛತೆ ನಮ್ಮ ಗುರಿ ಎಂದರು.
ಬಾರಕೂರು ಸರಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಭಾಸ್ಕರ್ ಶೆಟ್ಟಿ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗುಳ್ಳಾಡಿ ವೀರರಾಣಿ ಚಿಕ್ಕಾಯಿ ತಾಯಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ರಘುರಾಮ ಶೆಟ್ಟಿ, ಕಾರ್ಯದರ್ಶಿ ಡಾ.ಚಿತ್ತರಂಜನ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಆಂಗ್ಲ ವಿಭಾಗದ ಪ್ರಾಧ್ಯಾಪಕಿ ರೋಹಿಣಿ ಎಚ್.ಪಿ. ಅವರು ಅತಿಥಿಗಳನ್ನು ಸ್ವಾಗತಿಸಿದರೆ, ಗಣಕ ವಿಜ್ಞಾನ ವಿಭಾಗದ ಸಹಾಯಕಿ ಪ್ರಾಧ್ಯಾಪಕಿ ವನಜಾಕ್ಷಿ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಲೋಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.
ಜಾಥಾ ಉದ್ಘಾಟನೆ
ಇದಕ್ಕೆ ಮುನ್ನ ಬಾರಕೂರಿನ ಕೇಂದ್ರಸ್ಥಾನವಾದ ಕಲ್ಲುಚಪ್ಪರದ ಬಳಿ ಇಂದು ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನ ನಡೆಸಿದರು. ಇಲ್ಲಿಂದ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜುವರೆಗೆ ನಡೆದ ಐತಿಹಾಸಿಕ ಪರಂಪರೆ ಉಳಿಸಿ ಜಾಥಾಕ್ಕೆ ವೀರರಾಣಿ ಚಿಕ್ಕಾಯಿ ತಾಯಿ ಟ್ರಸ್ಟ್‌ನ ಅಧ್ಯಕ್ಷ ಡಾ.ರಘುರಾಮ ಶೆಟ್ಟಿ ಗುಳ್ಳಾಡಿ ಚಾಲನೆ ನೀಡಿದರು.