ಮೈಸೂರಿನಲ್ಲಿ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ
ಉಡುಪಿ, ಅ.9:ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನ ರಾಜ್ಯಮಟ್ಟದ ದಸರಾ (ಸಿ.ಎಂ.ಕಪ್) ಕ್ರೀಡಾಕೂಟದ ವಿವಿಧ ಸ್ಪರ್ಧೆಗಳನ್ನು ಅ.11ರಿಂದ 14ರವರೆಗೆ ಮೈಸೂರಿನಲ್ಲಿ ಸಂಘಟಿಸಲಾಗುತ್ತಿದೆ. ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಉಡುಪಿ ಜಿಲ್ಲೆಯ ಕ್ರೀಡಾಪಟುಗಳು, ಅ.11ರ ಬೆಳಗ್ಗೆ 9 ಗಂಟೆಗೆ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಬೇಕು.
ಅ.11ರಂದು ಬೆಳಿಗ್ಗೆ 9 ಗಂಟೆಯಿಂದ 11 ಗಂಟೆಯವರೆಗೆ ನೊಂದಣಿ, ಐಡಿ ಕಾರ್ಡ್ ಹಾಗೂ ಕ್ರೀಡಾ ಸಮವಸ್ತ್ರ ಗಳನ್ನು ಖುದ್ದು ಹಾಜರಾಗಿ ಪಡೆದುಕೊಳ್ಳಬೇಕು. ವಸತಿ ಗೃಹ ಮತ್ತು ಊಟೋಪಹಾರ ಪಡೆಯಲು ಐಡಿ ಕಾರ್ಡ್ ಗಳನ್ನು ಬಳಸುವುದು ಕಡ್ಡಾಯವಾಗಿದೆ. ಅಂದು ಅಪರಾಹ್ನ 2:30ಕ್ಕೆ ನಡೆಯಲಿರುವ ಉದ್ಘಾಟನಾ ಹಾಗೂ ಪಥಸಂಚಲನ ಸಮಾರಂಭಕ್ಕೆ ಕ್ರೀಡಾಪಟುಗಳು ಸಮವಸ್ತ್ರದಲ್ಲಿ ಹಾಜರಾಗುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.