ಉಡುಪಿ, ಅ.10: ಉಡುಪಿ ಜಿಲ್ಲಾ ವಾಲಿಬಾಲ್ ಅಸೋಷಿಯೇಶನ್ ನಗರದ ಅಜ್ಜರಕಾಡಿನ ಮಹಾತ್ಮಗಾಂದಿ ಜಿಲ್ಲಾ ಕ್ರೀಡಾಂಗದಣದಲ್ಲಿ ಇಂದು ಆಯೋಜಿಸಿದ್ದ 18 ವರ್ಷಕ್ಕಿಂತ ಕೆಳಗಿನವರ ಉಡುಪಿ ಜಿಲ್ಲಾ ಮಟ್ಟದ ವಾಲಿಬಾಲ್ ಚಾಂಪಿಯನ್‌ಶಿಪ್ ಉದ್ಯಮಿ ನಾಡೋಜ ಜಿ.ಶಂಕರ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಜಿಲ್ಲೆಯ ವಾಲಿಬಾಲ್ ಪ್ರತಿಭೆಗಳಿಗೆ ಸೂಕ್ತ ಅವಕಾಶ ದೊರೆತು ಅವರು ರಾಷ್ಟ್ರ ಹಾಗೂ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತಾಗಬೇಕು ಎಂದು ಶುಭ ಹಾರೈಸಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳ ಶಾಸಕ ಸುನೀಲ್‌ ಕುಮಾರ್, ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ ತಂಡಗಳಿಗೆ ಶುಭ ಹಾರೈಸಿದರು.

ಮುಂದಿನ ವರ್ಷ ಉಡುಪಿಯಲ್ಲಿ ರಾಷ್ಟ್ರ ಮಟ್ಟದ ರಾಷ್ಟ್ರೀಯ ಯುವ ವಾಲಿಬಾಲ್ ಟೂರ್ನಿ ಹಾಗೂ ಡಿಸೆಂಬರ್‌ನಲ್ಲಿ ಬೀಚ್ ವಾಲಿಬಾಲ್ ಸ್ಪರ್ಧೆಯನ್ನು ಆಯೋಜಿಸಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಯಶ್ಪಾಲ್ ಸುವರ್ಣ ತಿಳಿಸಿದರು.

ಕಾರ್ಯಕ್ರಮದಲ್ಲಿ ವಾಲಿಬಾಲ್ ತರಬೇತುದಾರ ಸಂತೋಷ್ ಡಿಸೋಜಾ, ಅಂತಾರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ನೈಜಾ ಆರ್ ಹೆಗ್ಡೆ ಇವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ವಾಲಿಬಾಲ್ ಅಸೋಶೀಯೇಶನ್ ಅಧ್ಯಕ್ಷ ಯಶವಂತ್ ಸುವರ್ಣ ವಹಿಸಿದ್ದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್, ಉದ್ಯಮಿಗಳಾದ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಆನಂದ್ ಸುವರ್ಣ, ಸಂಜೀವ ಶೆಟ್ಟಿ, ಚಂದ್ರಶೇಖರ ಹೆಗ್ಡೆ, ಶುಭಲಕ್ಷ್ಮಿ, ಅವಿನಾಶ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor