ಉಡುಪಿ ಜಿಲ್ಲೆಯಾದ್ಯಂತ ಉತ್ತಮ ಮಳೆ, ಎರಡು ಮನೆಗಳಿಗೆ ಹಾನಿ
ಉಡುಪಿ, ಅ.16: ಜಿಲ್ಲೆಯಾದ್ಯಂತ ಗುರುವಾರ ರಾತ್ರಿ ಹಾಗೂ ಇಂದು ಮುಂಜಾನೆ ಗುಡುಗು-ಸಿಡಿಲು ಸಹಿತ ಉತ್ತಮ ಮಳೆಯಾಗಿದ್ದು, ಕಾರ್ಕಳ ತಾಲೂಕಿನಲ್ಲಿ ಎರಡು ಮನೆಗಳಿಗೆ ಹಾನಿಯಾದ ವರದಿ ಬಂದಿದೆ. ತಾಲೂಕಿನ ದುರ್ಗಾದ ಒಂದು ಮನೆ ಹಾಗೂ ತೋಟಕ್ಕೆ ಸಿಡಿಲು ಬಡಿದು ಭಾರೀ ನಷ್ಟ ಉಂಟಾಗಿದೆ.
ಮಧ್ಯರಾತ್ರಿಯ ಬಳಿಕ ಸುರಿದ ಮಳೆಯಿಂದ ಕಾರ್ಕಳ ತಾಲೂಕು ದುರ್ಗಾ ಗ್ರಾಮದ ಜಯಪಾಲ ಎಂಬವರ ಮನೆ ಹಾಗೂ ತೋಟಕ್ಕೆ ಸಿಡಿಲು ಬಡಿದಿದ್ದು, ತೋಟಗಾರಿಕಾ ಬೆಳೆಗೆ ಅಪಾರ ಪ್ರಮಾಣದ ಹಾನಿಯನ್ನುಂಟು ಮಾಡಿದೆ. ಇದರಿಂದ ಸುಮಾರು ಒಂದು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಅದೇ ರೀತಿ ಕಾರ್ಕಳ ತಾಲೂಕು ಕುಕ್ಕುಂದೂರಿನ ದುರ್ಗಿ ಎಂಬವರ ಮನೆ ನಿನ್ನೆ ಸುರಿದ ಭಾರೀ ಮಳೆಯಿಂದ ಭಾಗಶ: ಹಾನಿಗೊಂಡಿದ್ದು 20ಸಾವಿರ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ರಾತ್ರಿ ಸುರಿಯಲಾರಂಭಿಸಿದ ಮಳೆ ಇಂದು ಬೆಳಗಿನವರೂ ಸುರಿದಿತ್ತು. ಇದರಿಂದ ಜಿಲ್ಲೆಯ ಅನೇಕ ಕಡೆಗಳಲ್ಲಿ ವಿದ್ಯುತ್ ಕೈಕೊಟ್ಟು, ಸೆಕೆಯ ಬೇಗೆಯಿಂದ ಜನ ಬೇಯುವಂತಾಯಿತು. ನಿದ್ರೆಯಿಲ್ಲದೇ ರಾತ್ರಿಯನ್ನು ಕಳೆಯು ವಂತಾಯಿತು. ಹೆಚ್ಚಿನ ಕಡೆಗಳಲ್ಲಿ ರಾತ್ರಿ ಹೋದ ವಿದ್ಯುತ್ ಇಂದು ಮುಂಜಾನೆಯಷ್ಟೇ ಮರಳಿ ಬಂದಿತ್ತು. ಕಾರ್ಕಳ, ಉಡುಪಿ, ಬ್ರಹ್ಮಾವರ, ಕಾಪು ತಾಲೂಕುಗಳಲ್ಲಿ ಉತ್ತಮ ಮಳೆಯಾಗಿತ್ತು.
ಜಿಲ್ಲೆಯಲ್ಲಿ ಇಂದು ಬೆಳಗ್ಗೆ 8:30ರವರೆಗೆ ಸರಾಸರಿ 38.5ಮಿ.ಮೀ. ಮಳೆ ಯಾದ ಮಾಹಿತಿ ಬಂದಿದೆ. ಕಾರ್ಕಳದಲ್ಲಿ ಅತ್ಯಧಿಕ 57.2ಮಿ.ಮೀ.ಮಳೆ ಬಿದ್ದಿದೆ. ಉಳಿದಂತೆ ಉಡುಪಿಯಲ್ಲಿ 51.9, ಕಾಪುವಿನಲ್ಲಿ 50.8, ಬ್ರಹ್ಮಾವರ ದಲ್ಲಿ 50.4, ಹೆಬ್ರಿಯಲ್ಲಿ 38.3, ಕುಂದಾಪುರದಲ್ಲಿ 23.2 ಹಾಗೂ ಬೈಂದೂರಿನಲ್ಲಿ 19.1ಮಿ.ಮೀ. ಮಳೆಯಾಗಿದೆ.