ಉಡುಪಿ, ಅ.16: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಪಡೆಯುತ್ತಿರುವ ಆದ್ಯತಾ (ಬಿಪಿಎಲ್) ಮತ್ತು ಅಂತ್ಯೋದಯ(ಎಎವೈ)ಪಡಿತರ ಚೀಟಿ ಹೊಂದಿರುವ ಅರ್ಹ ಫಲಾನುಭವಿ ಗಳು, ಈ ಹಿಂದೆ ಇ-ಕೆವೈಸಿ ಮಾಡಿಸಿ 5 ವಷರ್ ಪೂರ್ಣಗೊಂಡಿದ್ದಲ್ಲಿ ಕಡ್ಡಾಯವಾಗಿ ಮತ್ತೆ ಇ-ಕೆವೈಸಿ ಮಾಡಿಸಿಕೊಳ್ಳ ಬೇಕಾಗಿದ್ದು, ಈ ಪ್ರಕ್ರಿಯೆ ಪೂರ್ಣಗೊಳಿಸಲು ಸರಕಾರ ಪ್ರಸ್ತುತ ಅಕ್ಟೋಬರ್ 20ರವರೆಗೆ ಕಾಲಾವಕಾಶ ವನ್ನು ವಿಸ್ತರಿಸಿ ಆದೇಶವನ್ನು ಹೊರಡಿಸಿದೆ.

ಈ ಹಿಂದೆ ಸೆಪ್ಟಂಬರ್ 30ನ್ನು ಕೊನೆಯ ದಿನವಾಗಿ ನಿಗದಿಗೊಳಿಸಲಾಗಿತ್ತು. ಇದೀಗ ಅಕ್ಟೋಬರ್ 20ರವರೆಗೆ ಇ-ಕೆವೈಸಿ ಮಾಡಲು ಕಾಲಾವಕಾಶವನ್ನು ವಿಸ್ತರಿಸಲಾಗಿದ್ದು, ನಿಗದಿತ ಅವಧಿಯೊಳಗೆ ಇ-ಕೆವೈಸಿ ಮಾಡಿಸಿಕೊಳ್ಳದ ಪಡಿತರ ಚೀಟಿದಾರರಿಗೆ ಮುಂದಿನ ದಿನಗಳಲ್ಲಿ ಪಡಿತರ ವಿತರಣೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವುದರಿಂದ ಇದುವರೆಗೂ ಇ-ಕೆವೈಸಿ ಮಾಡಿಸದೇ ಇರುವ ಅರ್ಹ ಫಲಾನುಭವಿಗಳು ಕೂಡಲೇ ಈ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.

ಇ-ಕೆವೈಸಿ ಮಾಡಿಸಿಕೊಳ್ಳಲು ಬಾಕಿ ಇರುವ ಪಡಿತರ ಚೀಟಿದಾರರ ಪಟ್ಟಿಯನ್ನು ಜಿಲ್ಲೆಯ ಎಲ್ಲಾ ತಾಲೂಕುಗಳ ನ್ಯಾಯಬೆಲೆ ಅಂಗಡಿಯವರಿಗೆ ನೀಡಲಾಗಿದೆ. ಈ ಪಟ್ಟಿಯನ್ನು ಪರಿಶೀಲಿಸಿಕೊಂಡು, ಬಾಕಿ ಉಳಿದಿರುವ ಫಲಾನುಭವಿಗಳು ಯಾವುದೇ ಕಾರಣಕ್ಕೂ ವಿಳಂಬ ಮಾಡದಂತೆ ಇ-ಕೆವೈಸಿ ಮಾಡಿಸಿಕೊಳ್ಳಬೇಕು. ವಿಶೇಷವಾಗಿ ಕಳೆದ ಹಲವು ವರ್ಷಗಳಿಂದ ಗ್ರಾಮದಲ್ಲಿ ವಾಸವಿಲ್ಲದೆ ಬೇರೆಡೆ ವಲಸೆ ಹೋಗಿರುವ ಅಥವಾ ಊರು ಬಿಟ್ಟು ತೆರಳಿರುವ ಪಡಿತರ ಚೀಟಿದಾರರು ಸಹ ತಮ್ಮ ಇ-ಕೆವೈಸಿ ಸ್ಥಿತಿಯನ್ನು ನ್ಯಾಯಬೆಲೆ ಅಂಗಡಿಯಲ್ಲಿ ಪರಿಶೀಲಿಸಿಕೊಂಡು ಇ-ಕೆವೈಸಿ ಮಾಡಿಸಿಕೊಳ್ಳಬಹುದು.

ಅಲ್ಲದೇ ಅನ್ನಸೇವಾ ಆ್ಯಪ್ ಅನ್ನು ಮೊಬೈಲ್‌ನಲ್ಲಿರುವ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಂಡು ಮನೆಯಲ್ಲಿಯೇ ಪಡಿತರ ಚೀಟಿ ಇ-ಕೆವೈಸಿ ಯನ್ನು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಇ-ಕೆವೈಸಿ ಮಾಡಿಸಲು ಪಡಿತರ ಚೀಟಿದಾರರು ಮೊಬೈಲ್ ಸಂಖ್ಯೆ ಲಿಂಕ್ ಆಗಿರುವ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯನ್ನು ತೆಗೆದುಕೊಂಡು ಸಮೀಪದ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿಯನ್ನು ಮಾಡಿಸಿ ಕೊಳ್ಳಬಹುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor