ಹಿರಿಯಡ್ಕ, ಅ.24: ಮನೆಯಲ್ಲಿಟ್ಟಿದ್ದ ಚಿನ್ನದ ಸರ ಕಳವು ಮಾಡಿದ್ದ ಆರೋಪಿ ಹೋಮ್ ನರ್ಸ್‌ನನ್ನು ಹಿರಿಯಡ್ಕ ಪೊಲೀಸರು ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಹೋಮ್ ನರ್ಸ್ ಕೆಲಸ ಮಾಡುತ್ತಿದ್ದ ಉಡುಪಿ ಪುತ್ತೂರು ಗ್ರಾಮದ ಸುಬ್ರಮಣ್ಯ ನಗರ ನಿವಾಸಿ ಉಮೇಶ್ ಶೆಟ್ಟಿ(45) ಬಂಧಿತ ಆರೋಪಿ.

ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕೆಹಳ್ಳಿ ಗ್ರಾಮದ ಬಡಪಾಲು ನಿವಾಸಿ ಬಾಬಿ ಹಾಂಡ್ತಿ ಎಂಬವರ ಮನೆಗೆ ಸೆ.13ರಂದು ಬೆಳಗ್ಗೆ ವ್ಯಕ್ತಿಯೊಬ್ಬ ಬಂದು ನಿಮ್ಮ ಮಗ ದಿನೇಶ್ ಮೃತಪಟ್ಟ ಬಗ್ಗೆ ತನಗೆ ತಿಳಿದಿದ್ದು, ನಾಳೆ ನಿಮ್ಮ ಮನೆಗೆ ಇನ್ಸೂರೆನ್ಸ್ ಅಧಿಕಾರಿಗಳು ಬರುತ್ತಾರೆ. ನಾನು ನಿಮಗೆ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಮಾಡುತ್ತೇನೆ ಎಂದು ಹೇಳಿ ಹೋಗಿದ್ದನು.

ನಂತರ ಮಧ್ಯಾಹ್ನ ಬಾಬಿ ಹಾಂಡ್ತಿ ತನ್ನ ಕುತ್ತಿಗೆಯಲ್ಲಿದ್ದ ಸುಮಾರು 2 ಪವನಿನ ಚಿನ್ನದ ಸರವನ್ನು ಮನೆಯ ಒಳಗೆ ಟೀಬಲ್ ಮೇಲೆ ಇಟ್ಟಿದ್ದರು. ಆ ವ್ಯಕ್ತಿಯು ಮತ್ತೆ ಮನೆಗೆ ಬಂದಿದ್ದು ಆತನು ಬಾಬಿ ಹಾಂಡ್ತಿ ಜೊತೆ ಭಾವನಾತ್ಮಕವಾಗಿ ಮಾತನಾಡಿ ಸಮಧಾನ ಪಡಿಸಿದ್ದು, ನಂತರ ಬಾಬಿ ತೋಟಕ್ಕೆ ಹೋಗಿದ್ದ ವೇಳೆ ಆ ವ್ಯಕ್ತಿ ಟೇಬಲ್ ಮೇಲೆ ಇಟ್ಟಿದ್ದ ಸುಮಾರು ಚಿನ್ನದ ಸರದೊಂದಿಗೆ ಪರಾರಿಯಾಗಿದ್ದನು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಹಿರಿಯಡ್ಕ ಪೊಲೀಸರು, ಸುಮಾರು 50-60 ಸಿಸಿಟಿವಿ ಪೂಟೇಜ್‌ಗಳನ್ನು ವೀಕ್ಷಿಸಿ ಮತ್ತು ತಾಂತ್ರಿಕ ವಿಧಾನಗಳ ಮೂಲಕ ಆರೋಪಿ ಉಮೇಶ್ ಶೆಟ್ಟಿಯನ್ನು ಅ.23ರಂದು ಆತನ ಮನೆಯ ಬಳಿ ವಶಕ್ಕೆ ಪಡೆದುಕೊಂಡರು. ಆತನಿಂದ 1.85 ಲಕ್ಷ ರೂ. ಮೌಲ್ಯದ 15 ಗ್ರಾಂ ಚಿನ್ನ ಮತ್ತು ಕೃತ್ಯಕ್ಕೆ ಬಳಸಿದ ಬೈಕ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ನೇತೃತ್ವದಲ್ಲಿ ಹಿರಿಯಡ್ಕ ಎಸ್ಸೈ ಪುನಿತ್ ಕುಮಾರ್ ಹಾಗೂ ಸಿಬ್ಬಂದಿ ಪ್ರವೀಣ್ ರೈ, ಪ್ರವೀಣ್ ಶೆಟ್ಟಿ, ರಮೇಶ್ ಹೆರ್ಗ, ಕೃಷ್ಣ ಪುಜಾರಿ, ಮಹಾಂತೇಶ ಕಾರ್ಯಾಚರಣೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor