ಉಡುಪಿ, ನ.5: ಕೇವಲ ಮಸೀದಿ, ದೇವಸ್ಥಾನ ಅಥವಾ ಚರ್ಚ್ಗಳನ್ನು ನಿರ್ಮಿಸುವುದರ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಕಾರ್ಯ ಮಾಡಬೇಕು. ಅದು ದೇವರು ಮೆಚ್ಚುವ ಕಾರ್ಯ ಎಂದು ಶ್ರೀಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀಈಶ ವಿಠಲದಾಸ ಸ್ವಾಮೀಜಿ ಹೇಳಿದ್ದಾರೆ.
ಹಾವಂಜೆ ಗೋಳಿಕಟ್ಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಅಲ್ ಫಲಾಹ್ ಜುಮ್ಮಾ ಮಸೀದಿಯ ಉದ್ಘಾಟನೆ ಸಮಾರಂಭದ ಪ್ರಯುಕ್ತ ಬುಧವಾರ ಆಯೋಜಿಸಲಾದ ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಶಿಸ್ತು ಹಾಗೂ ಪ್ರಾಮಾಣಿಕ ದುಡಿಮೆಯ ಹಣದಿಂದ ಸಮಾಜಕ್ಕೆ ಸೇವೆ ಸಲ್ಲಿಸಬೇಕು. ಸರ್ವಧರ್ಮಗಳ ಮುಖಂಡ ರನ್ನು ಒಂದೇ ವೇದಿಕೆಗೆ ಕರೆಸಿ ಸೌಹಾರ್ದ ಮೆರೆದ ಗೋಳಿಕಟ್ಟೆಯ ಯುವಕರ ಕಾರ್ಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಮಾದರಿಯಾಗಿದೆ. ಇದು ನಿಜವಾದ ಭಾರತ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿಯ ಮರ್ದ ಆಫ್ ಸಾರೋಸ್ ಚರ್ಚ್ನ ಧರ್ಮಗುರು ರೆ.ಫಾ.ಡೆನಿಸ್ ಡೇಸಾ ಮಾತನಾಡಿ, ಧರ್ಮದ ಹೆಸರಿನಲ್ಲಿ ದ್ವೇಷದ ಗೋಡೆಗಳನ್ನು ಕೆಡವಿ ಪ್ರೀತಿಯನ್ನು ಬೆಳೆಸಬೇಕಾಗಿದೆ. ಹುಟ್ಟುವಾಗ ಯಾವುದೇ ಜಾತಿ-ಮತಗಳಿರುವುದಿಲ್ಲ, ನಾವು ಜಾತಿಗಿಂತ ನೀತಿಗೆ ಆದ್ಯತೆ ನೀಡಿ ಬದುಕಬೇಕು ಎಂದು ತಿಳಿಸಿದರು.
ಶಿವಮೊಗ್ಗ ಸಾದಾ ಇಸ್ಲಾಮಿಕ್ ಕಾಲೇಜಿನ ಪ್ರಾಂಶುಪಾಲ ಡಾ.ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಮಾತನಾಡಿ, ಕೇವಲ ಪೊಲೀಸ್ ಠಾಣೆ ಅಥವಾ ನ್ಯಾಯಾಲಯಗಳಿಂದ ಸೌಹಾರ್ದತೆ ತರಲು ಸಾಧ್ಯವಿಲ್ಲ, ಮಾನವೀಯ ಪ್ರೀತಿಯಿಂದ ಮಾತ್ರ ಅದು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ಗೋಳಿಕಟ್ಟೆ ಅಲ್ ಫಲಾಹ್ ಜುಮ್ಮಾ ಮಸೀದಿ ಅಧ್ಯಕ್ಷ ಜಿ.ಎ. ರೆಹಮಾನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಮಂಗಳೂರಿನ ಮುಸ್ಲಿಂ ಮುಖಂಡ ಹೈದರ್ ಪರ್ತಿಪಾಡಿ ಮಾತನಾಡಿದರು. ಈ ಸಂದರ್ಬದಲ್ಲಿ ಅಕ್ಷರ ಸಂತ ಹರೇಕಳ ಹಾಜಬ್ಬ, ಸಮಾಜ ಸೇವಕರಾದ ರವಿ ಕಟಪಾಡಿ, ಫ್ರ್ಯಾಂಕಿ ಡಿಸೋಜ ಮತ್ತು ಮಸೀದಿ ನಿರ್ಮಾಣಕ್ಕೆ ಶ್ರಮಿಸಿದ ಹಬೀಬ್ ಗೋಳಿಕಟ್ಟೆ, ಮೊಹಮ್ಮದ್ ಅಲಿ ಗೋಳಿಕಟ್ಟೆ, ಹಾಗೂ ಪ್ರೋತ್ಸಾಹಿಸಿದವರನ್ನು ಸನ್ಮಾನಿಸಲಾಯಿತು.
ಮಸೀದಿ ಕಟ್ಟಡದ ಇಂಜಿನಿಯರ್ ಉದಯಕುಮಾರ್, ಇಂಜಿನಿಯರ್ ಅಬ್ದುಲ್ ಮಲಿಕ್, ಇಲೆಕ್ಟ್ರಿಷಿಯನ್ ಗುತ್ತಿಗೆದಾರ ಸಂತೋಷ ಶೆಟ್ಟಿ, ಇಲೆಕ್ಟ್ರಿಷಿಯನ್ ಕಲೆಸಗಾರ ಸುಕುಮಾರ್ ಪೂಜಾರಿ ಅವರನ್ನು ಗೌರವಿಸಲಾಯಿತು.
ಕುಕ್ಕಿಕಟ್ಟೆ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನ ಮೊಕ್ತೇಸರ ಅಶೋಕ್ ಕುಮಾರ್ ಶೆಟ್ಟಿ, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಮೌಲಾ, ಗೋಳಿಕಟ್ಟೆ ಶ್ರೀವೀರ ಕಲ್ಕಡ ದೈವಸ್ಥಾನದ ಅಧ್ಯಕ್ಷ ನಾಗರಾಜ ಹೆಗ್ಡೆ, ದೈವ ನರ್ತಕ ಶ್ಯಾಮರಾಯ ಪಾಣ, ಪ್ರಮುಖರಾದ ಅಬೂಬಕರ್ ಆತ್ರಾಡಿ, ನಮ್ಮ ನಾಡ ಒಕ್ಕೂಟದ ಅಧ್ಯಕ್ಷ ಯಾಹ್ಯ ನಕ್ವಾ, ಆತ್ರಾಡಿ ಎಂಜೆಎಂ ಮಸೀದಿ ಖತೀಬ್ ಇಸ್ಮಾಯಿಲ್ ಸಖಾಫಿ, ಕುಂಜಾಲ್ ಹಿದಾಯತುಲ್ ಇಸ್ಲಾಮ್ ಮದರಸಿನ ಹೈದರಾಲಿ ಮರ್ಝಖಿ ಅಲ್ ರಯ್ಜಿ, ಸಾಯಿರಾಧ ಗ್ರೂಫ್ನ ಮನೋಹರ ಶೆಟ್ಟಿ, ಕೀರ್ತಿ ಬಿಲ್ಡರ್ಸ್ ಮಾಲಕ ಸುಧೀರ್ ಕುರ್ಮಾ ಶೆಟ್ಟಿ, ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್, ಸಂತೋಷನಗರ ಬದ್ರಿಯಾ ಜಾಮಿಯ ಮಸೀದಿ ಹನೀಫ್ ಹಾಜಿ, ಮೈಸೂರಿನ ಉದ್ಯಮಿ ಇಸ್ಮಾಯಿಲ್ ಭಟ್ಕಳ್, ಎಸ್ಎಂಎ ಉಡುಪಿ ರಿಜನ್ ಅಧ್ಯಕ್ಷ ಹಬೀಬ್ ಅಲಿ, ಆತ್ರಾಡಿ ಮೊಹಿದ್ಧೀನ್ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ಲಾ, ಕುಂಜಾಲ್ ನೂರು ಜುಮ್ಮಾ ಮಸೀದಿ ಅಧ್ಯಕ್ಷ ಮೊಹಮ್ಮದ್ ಶಬ್ಬೀರ್, ಮಸೀದಿ ಪ್ರಧಾನ ಕಾರ್ಯದರ್ಶಿ ಶಂಶುದ್ದೀನ್ ಮೊಹಮ್ಮದ್, ಗೋಳಿಕಟ್ಟೆ ಹಿದಾಯತುಲ್ ಇಸ್ಲಾಂ ಮದರಸ ಸಮಿತಿ ಅಧ್ಯಕ್ಷ ಮೊಹಮ್ಮದ್ ಅಲಿ, ಅಲ್ ಫಲಾಹ್ ಜುಮಾ ಮಸೀಧಿ ಗೌರವಾಧ್ಯಕ್ಷ ಇಸ್ಮಾಯಿಲ್ ಸಾಹೇಬ್ ಗೋಳಿಕಟ್ಟೆ, ಉಡುಪಿ ಜಾಮಿಯಾ ಮಸೀದಿ ಕಾರ್ಯದರ್ಶಿ ಖಾಲಿದ್, ಗೋಳಿಕಟ್ಟೆ ಅಲ್-ಫಲಾಹ್ ಯಂಗ್ಮೆನ್ಸ್ ಅಧ್ಯಕ್ಷ ಮಹಮ್ಮದ್ ಸಿರಾಜ್ ಉಪಸ್ಥಿತರಿದ್ದರು.
ಮಸೀದಿಯ ಖತೀಬ್ ಅಬ್ದುಲ್ ರಝಾಕ್ ಅಲ್ಮದನಿ ಅಲ್ ಪುರ್ಖಾನಿ ದುವಾ ನೆರವೇರಿಸಿದರು. ಹನೀಫ್ ಗೋಳಿಕಟ್ಟೆ ಸ್ವಾಗತಿಸಿದರು. ಅಬ್ದುಲ್ ರಜಾಕ್ ವಂದಿಸಿದರು. ನೌಫಲ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.