ಕರಾವಳಿ ಹೈಕೋರ್ಟ್ ಪೀಠ: ಕಾರ್ಕಳದಲ್ಲಿ ಪೂರ್ವಭಾವಿ ಸಭೆ
ಕಾರ್ಕಳ, ನ.5: ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ, ಉಡುಪಿ ಜಿಲ್ಲೆಯ ಇದರ ಕರೆಯಂತೆ ಕಾರ್ಕಳ ವಕೀಲರ ಸಂಘದ ನೇತೃತ್ವದಲ್ಲಿ ಕಾರ್ಕಳ ತಾಲೂಕು ಹಕ್ಕೊತ್ತಾಯ ಸಭೆಯನ್ನು ಆಯೋಜಿಸುವ ಬಗ್ಗೆ ಪೂರ್ವಭಾವಿ ಸಭೆಯನ್ನು ಸಂಘದ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿತ್ತು.
ಸಭೆಯನ್ನುದ್ದೇಶಿಸಿ ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಉಡುಪಿ ಜಿಲ್ಲಾ ಸಂಚಾಲಕ ಹಾಗೂ ನ್ಯಾಯ ವಾದಿ ಪ್ರೇಮ್ ಪ್ರಸಾದ್ ಶೆಟ್ಟಿ ಮಾತನಾಡಿ, ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯ ನಿಟ್ಟಿನಲ್ಲಿ ಈಗಾಗಲೇ ಉಡುಪಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಮತ್ತು ಕುಂದಾಪುರ, ಬೈಂದೂರು, ಬ್ರಹ್ಮಾವರ ತಾಲೂಕುಗಳಲ್ಲಿ ಹಕ್ಕೊತ್ತಾಯ ಸಭೆಗಳನ್ನು ನಡೆಸಿ ಜನಜಾಗೃತಿಯನ್ನು ಮೂಡಿಸಲಾಗಿದೆ. ಇದೀಗ ಕಾರ್ಕಳ ತಾಲೂಕಿನಲ್ಲಿಯೂ ಈ ನಮ್ಮ ಬೇಡಿಕೆಯ ಬಗ್ಗೆ ವಕೀಲರ ಸಮೂಹ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾಮಾಜಿಕ ಕಾರ್ಯ ಕರ್ತರನ್ನೊಳಗೊಂಡ ಕಾರ್ಕಳ ತಾಲೂಕು ಹೋರಾಟ ಸಮಿತಿಯ ಹಕ್ಕೊತ್ತಾಯ ಸಭೆಯನ್ನು ನ.14ರಂದು ಮಧ್ಯಾಹ್ನ 3:30ಕ್ಕೆ ಕಾರ್ಕಳ ಅನಂತಶಯನದ ಬಳಿ ಹೋಟೆಲ್ ಪ್ರಕಾಶ್ ಸಭಾಂಗಣದಲ್ಲಿ ಆಯೋಜಿಸಲು ತೀರ್ಮಾನಿಸ ಲಾಗಿದೆ ಎಂದು ತಿಳಿಸಿದರು.
ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ತಾಲೂಕು ಹಕ್ಕೊತ್ತಾಯ ಸಭೆಯನ್ನು ಯಶಸ್ವಿಯಾಗಿ ಆಯೋಜಿಸಲು ವಕೀಲರ ಸಂಘ ಸಂಪೂರ್ಣ ಬೆಂಬಲ ನೀಡಲಾಗುವುದು. ಈ ಮಹತ್ತರ ಹೋರಾಟಕ್ಕೆ ತಾಲೂಕಿನ ಸಂಘ-ಸಂಸ್ಥೆಗಳು ನಮ್ಮೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಸುನಿಲ್ ಕುಮಾರ್ ಶೆಟ್ಟಿ, ಶೇಖರ್ ಮಡಿವಾಳ, ಸದಾನಂದ ಸಾಲಿಯಾನ್, ರವೀಂದ್ರ ಮೊಯಿಲಿ, ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಕಮಲಾಕ್ಷ ಕಾಮತ್, ರಾಜಕೀಯ ಮುಖಂಡರಾದ ಶುಭದ ರಾವ್, ನಿವೃತ್ತ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ, ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಅವಿನಾಶ್ ಜಿ.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ವಕೀಲರ ಸಂಘದ ಕಾರ್ಯದರ್ಶಿ ಪದ್ಮಪ್ರಸಾದ್ ಜೈನ್ ಸ್ವಾಗತಿಸಿದರು. ಉಪಾಧ್ಯಕ್ಷ ಹರೀಶ್ ಅಧಿಕಾರಿ ವಂದಿಸಿದರು.