ಹೆಬ್ರಿ ಗ್ರಾಪಂನಲ್ಲಿ ಲಕ್ಷಾಂತರ ಹಣ ದುರ್ಬಳಕೆ ಆರೋಪ; ಸಮಗ್ರ ತನಿಖೆಗೆ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಒತ್ತಾಯ
ಹೆಬ್ರಿ, ನ.13: ಹೆಬ್ರಿ ಗ್ರಾಮ ಪಂಚಾಯತ್ನ ಹಿಂದಿನ ಅವಧಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ಸದಾಶಿವ ಸೇರ್ವೆಗಾರವರಿಂದ ಲಕ್ಷಾಂತರ ಹಣ ದುರ್ಬಳಕೆಯಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಹೆಬ್ರಿ ಸಮಾಜ ಮಂದಿರದಲ್ಲಿ ಶುಕ್ರವಾರ ನಡೆದ ಹೆಬ್ರಿ ಗ್ರಾಪಂನ 2026-27ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೋಟ್ಯಂತರ ರೂಪಾಯಿ ವೆಚ್ಚದ ಎಸ್ಆರ್ಎಂ ಘಟಕದಲ್ಲಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಪಂನಿಂದ ಖರ್ಚು ಮಾಡಿರುವ ಬಗ್ಗೆ ಮಾಹಿತಿಯನ್ನು ಕೇಳಿದಾಗ ತಪ್ಪು ಮಾಹಿತಿಯನ್ನು ನೀಡಲಾಗಿದೆ. ಎಸ್ಆರ್ಎಂ ಘಟಕ ದಲ್ಲಿ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಪಿಡಿಒ ಆಗಿದ್ದ ಸದಾಶಿವ ಸೇರ್ವೆಗಾರ್ ಅವಧಿಯಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಹಾಗೂ ಲೋಕಾಯುಕ್ತಕ್ಕೆ ದೂರನ್ನು ನೀಡಲಾಗುವುದು ಎಂದು ಗ್ರಾಮಸ್ಥ ನವೀನ್ ಕೆ.ಅಡ್ಯಂತಾಯ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಕೆ.ಸುಧಾಕರ್ ತಿಳಿಸಿದರು.
ಘಟಕಕ್ಕೆ ಬೆಂಕಿ ಬಿದ್ದ ನಂತರ ಹಸಿ ತ್ಯಾಜ್ಯ ವಿಲೇವಾರಿವಾಗುತ್ತಿಲ್ಲ. ಆದರೂ ಅಷ್ಟೊಂದು ಸಿಬ್ಬಂದಿಗಳು ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವೊಂದು ಕಡೆ ವಾರಕ್ಕೆ ಒಂದು ಬಾರಿ ಮಾತ್ರ ಒಣ ಕಸವನ್ನು ಸಂಗ್ರಹಿಸಲಾಗುತ್ತದೆ. ಆದರೂ ಕೂಡ ಸಾಗಾಟ ವಾಹನಕ್ಕೆ 3006 ಲೀಟರ್ ಡೀಸೆಲ್ ಖರ್ಚಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಇದರ ಬಗ್ಗೆ ಕೂಡ ಸಮಗ್ರ ತನಿಖೆ ಆಗಬೇಕು ಎಂದು ಅವರು ಒತ್ತಾಯಿಸಿದರು.
ಜನರೇಟರ್ ನಾಪತ್ತೆ: ದಾನಿಗಳು ಗ್ರಾಪಂಗೆ 12 ವರ್ಷಗಳ ಹಿಂದೆ ಜನರೇಟರ್ನ್ನು ಕೊಡುಗೆಯಾಗಿ ನೀಡಿದ್ದು, ಅದು ಕಳೆದ ಐದು ವರ್ಷಗಳಿಂದ ಪಂಚಾಯತ್ನಲ್ಲಿಯೇ ಇತ್ತು. ಆನಂತರ ದಿನಗಳಲ್ಲಿ ಜನರೇಟರ್ ಕಾಣಿಸಿಕೊಂಡಿಲ್ಲ. ಇದೀಗ ಎರಡು ದಿನದ ಹಿಂದೆ ಮತ್ತೆ ಪಂಚಾಯತ್ನಲ್ಲಿ ಜನರೇಟರ್ ತಂದು ಇಡಲಾಗಿದೆ. ಇದು ಹೇಗೆ ಸಾಧ್ಯ ಎಂದು ಪಂಚಾಯತ್ನ ಮಾಜಿ ಉಪಾಧ್ಯಕ್ಷ ಗಣೇಶ್ ಕುಮಾರ್ ಜರ್ವತ್ತು ಪ್ರಶ್ನಿಸಿದರು.
ಜನರೇಟರ್ ಈಗ ಎಲ್ಲಿಂದ ಬಂದಿದೆ. ಯಾರು ತೆಗೆದುಕೊಂಡು ಹೋಗಿದ್ದರು ಎಂಬುದು ತನಿಖೆ ಆಗಬೇಕು. ಪಂಚಾಯತ್ನಲ್ಲಿದ್ದ ಜೆರಾಕ್ಸ್ ಮೆಷಿನ್ ಪ್ರೊಜೆಕ್ಟರ್ ಕೂಡ ಕಾಣಿಸುತ್ತಿಲ್ಲ. ಒಂದು ವೇಳೆ ಹಳೆಯ ವಸ್ತುವನ್ನು ಮಾರಾಟ ಮಾಡಿದ್ದರೆ ಟೆಂಡರ್ ಕರೆಯಬೇಕಿತ್ತು. ಮಾರಾಟ ಮಾಡಿದ ಹಣ ಎಲ್ಲಿ ಹೋಗಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಅವರು ಒತ್ತಾಯಿಸಿದರು.
ಲೋಕಾಯುಕ್ತಕ್ಕೆ ದೂರು: ನವೀನ್ ಅಡ್ಯಂತಾಯ ಮಾತನಾಡಿ, ಹಿಂದಿನ ಅವಧಿಯ ಹಣಕಾಸಿನ ವ್ಯವಹಾರಗಳ ಕುರಿತು ಸಂಪೂರ್ಣ ಲೆಕ್ಕಪತ್ರಗಳನ್ನು ಸಾರ್ವಜನಿಕರಿಗೆ ಒದಗಿಸಬೇಕು. ಒಂದೇ ಕಾಮಗಾರಿಗೆ ಹಲವು ಬಿಲ್ಲುಗಳನ್ನು ಮಾಡಿ ಹಣವನ್ನು ಲೂಟಿ ಮಾಡಿದ್ದಾರೆ. ಬೇರೆ ಬೇರೆ ಅಭಿವೃದ್ಧಿ ಹೆಸರುಗಳಲ್ಲಿ ಲಕ್ಷಗಟ್ಟಲೆ ಹಣ ದುರುಪಯೋಗ ಮಾಡಿದ್ದಾರೆ ಎಂದು ದೂರಿದರು.
ಬಡಗುಡ್ಡೆ ಕಾಲೋನಿಯಲ್ಲಿ ಕೊರಗಜ್ಜ ದೇವಸ್ಥಾನದ ಬಳಿ ನಡೆದ ಕಾಮಗಾರಿಗೆ ಲಕ್ಷಾಂತರ ಖರ್ಚಾಗಿದೆ ಎಂದು ಹೇಶಲಾಗಿದೆ. ಈ ಬಗ್ಗೆ ಸಮಗ್ರ ಮಾಹಿತಿ ನೀಡಬೇಕೆಂದು ಪಂಚಾಯಿತಿ ಮಾಜಿ ಸದಸ್ಯ ಪುತ್ರನ್ ಅಧಿಕಾರಿಗಳ ಗಮನಕ್ಕೆ ತಂದರು.
ಕಲಿಕಾ ಕೇಂದ್ರದ ದುರಸ್ತಿ ಕಾರ್ಯಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗಿದೆ ಹಾಗೂ ಹೊರ ಭಾಗದಲ್ಲಿ ಅಳವಡಿಸಿದ್ದ ಕನ್ನಡಿಗೆ 72,000ರೂ. ಖರ್ಚಾಗಿದೆ ಎಂದು ಹೇಳಲಾಗಿದೆ. ಅದರ ಬಗ್ಗೆ ಕೂಡ ಸಮಗ್ರ ತನಿಖೆಯಾಗಬೇಕು. ಹಿಂದಿನ ಅವಧಿಯಲ್ಲಿ 60ಲಕ್ಷ ರೂ. ಉಳಿಕೆ ಆಗಿತ್ತು. ಆದರೆ ಈಗ ಕೇವಲ 9 ಲಕ್ಷ ಮಾತ್ರ ಉಳಿಕೆ ಎಂದು ಹೇಳಲಾ ಗುತ್ತಿದೆ. ಈ ಕುರಿತು ದಾಖಲೆಗಳ ಆಧಾರದಲ್ಲಿ ಸಮಗ್ರ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.
ಪಂಚಾಯತ್ನ ಎಲ್ಲಾ ಖರ್ಚು ವೆಚ್ಚಗಳ ಮಾಹಿತಿಯನ್ನು ಬಹಿರಂಗಪಡಿಸದಿದ್ದಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು. ವಿವಿಧ ವಿಚಾರಗಳ ಕುರಿತು ಗ್ರಾಮಸ್ಥರಾದ ನಿತೀಶ್ ಎಸ್.ಪಿ., ರಾಘವೇಂದ್ರ ನಾಯ್ಕ, ಸುಮಾ ಅಡ್ಯಂತಾಯ, ಸುಮಿತ್ರ ಹೆಗ್ಡೆ ಮೊದಲಾದವರು ಮಾತನಾಡಿದರು.
ಗ್ರಾಮಸಭೆಯಲ್ಲಿ ಸಾರ್ವಜನಿಕರ ಹಲವು ಗಂಭೀರ ಆರೋಪಗಳನ್ನು ಆಲಿಸಿದ ಪಂಚಾಯತ್ ಆಡಳಿತ ಅಧಿಕಾರಿ ದಿನೇಶ್ ಮಾತನಾಡಿ ಎಲ್ಲಾ ವಿಷಯಕ್ಕೆ ಸಂಬಂಧಿಸಿದಂತೆ ಹಾಗೂ ಕಾಮಗಾರಿಯ ವಿವರವನ್ನು ಪರಿಶೀಲಿಸಲಾಗುವುದು ಎಂದರು.
ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಉಪ ವಲಯ ಅರಣ್ಯಾಧಿಕಾರಿ ಜಯರಾಮ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಶಂರ್ಕ ಸೇರಿರ್ಗಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಆಶಾ ಹೆಗ್ಡೆ ವರದಿ ಮಂಡಿಸಿದರು. ಪಿಡಿಒ ಅಶೋಕ್ ಸ್ವಾಗತಿಸಿದರು. ಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.