ಉಡುಪಿ | ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಭೂಗತ ಪಾತಕಿ ರವಿ ಪೂಜಾರಿಗೆ ನ್ಯಾಯಾಲಯ ಅನುಮತಿ
ಉಡುಪಿ, ನ.13: ಕಳೆದ ರಾತ್ರಿ ಮಲ್ಪೆಯ ನೆರ್ಗಿಯಲ್ಲಿ ನಿಧನರಾದ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನ ಜೈಲಿನಲ್ಲಿರುವ ಭೂಗತ ಪಾತಕಿ ರವಿ ಪೂಜಾರಿಗೆ ನ್ಯಾಯಾಲಯ ಅನುಮತಿ ನೀಡಿದೆ.
ರವಿ ಪೂಜಾರಿ ತಾಯಿ ಸುಶೀಲ ಪೂಜಾರ್ತಿ (86) ನ.12ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರ ಅಂತ್ಯಕ್ರಿಯೆಯು ನ.14ರಂದು ಬೆಳಗ್ಗೆ 11ಗಂಟೆಗೆ ನೆರ್ಗಿಯಲ್ಲಿರುವ ಅವರ ಮನೆಯಲ್ಲಿ ನಡೆಯಲಿದೆ.
ತಾಯಿ ಅಂತ್ಯಕ್ರಿಯೆ ಪಾಲ್ಗೊಳ್ಳಲು ಅನುಮತಿ ಕೋರಿ ರವಿ ಪೂಜಾರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ರವಿ ಪೂಜಾರಿಗೆ ತನ್ನ ತಾಯಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿ ಆದೇಶಿಸಿದೆ.
ರವಿ ಪೂಜಾರಿಯನ್ನು ಉಡುಪಿಗೆ ಕರೆತರಲು ಅಗತ್ಯ ಪೊಲೀಸ್ ಎಸ್ಕಾರ್ಟ್ ವ್ಯವಸ್ಥೆ ಕಲ್ಪಿಸುವಂತೆ ಬೆಂಗಳೂರಿನ ಆಡುಗೋಡಿಯ ಸಿಟಿ ಆರ್ಮ್ಡ್ ರಿಸರ್ವ್(ದಕ್ಷಿಣ) ವಿಭಾಗದ ಡಿಸಿಪಿ ಹಾಗೂ ಜೈಲು ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಬೆಂಗಳೂರಿನ ಜೈಲು ಇಲಾಖೆಯ ವತಿಯಿಂದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಹೆಚ್ಚುವರಿಯಾಗಿ ಉಡುಪಿ ಜಿಲ್ಲಾ ಪೊಲೀಸರಿಂದ ಸ್ಥಳೀಯ ಭದ್ರತೆ ಒದಗಿಸಲಾಗುತ್ತದೆ ಎಂದು ಉಡುಪಿ ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.