ನಾಡಾ ಐಟಿಐಯಲ್ಲಿ ರಕ್ತಹೀನತೆ ಪರೀಕ್ಷಾ ಶಿಬಿರ ಉದ್ಘಾಟನೆ
ಕುಂದಾಪುರ, ನ.23: ಶೌರ್ಯ ಸೇವಾ ಸಂಸ್ಥೆ ಹಾಗೂ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ರಕ್ತಹೀನತೆ ಪರೀಕ್ಷಾ ಶಿಬಿರವನ್ನು ನಾಡಾದ ರೆ.ಫಾ.ರಾಬರ್ಟ್ ಜ್ಹಡ್ ಎಂ.ಡಿಸೋಜ ಐಟಿಐ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಲಾಗಿತ್ತು.
ಶಿಬಿರವನ್ನು ಉದ್ಘಾಟಿಸಿದ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ನ ಪ್ರವರ್ತಕ ಗೋವಿಂದ ಬಾಬು ಪೂಜಾರಿ ಮಾತನಾಡಿ, ವ್ಯವಹಾರ, ಉದ್ಯೋಗ, ಸೇವಾ ಕ್ಷೇತ್ರಗಳಲ್ಲಿ ಯಶಸ್ಸು ಗಳಿಸಬೇಕಾದರೆ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಇರಬೇಕು ಎಂದು ಅಭಿಪ್ರಾಯ ಪಟ್ಟರು.
ಬದುಕಿನಲ್ಲಿ ಎದುರಾಗುವ ಸಂಕಷ್ಟ ಸನ್ನಿವೇಶ ಹಾಗೂ ಪರಿಸ್ಥಿತಿಗಳನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯುವ ದೃಢತೆ ಹಾಗೂ ಛಲ ಇರಿಸಿಕೊಳ್ಳಬೇಕು. ಗುರಿ ಸ್ಪಷ್ಟವಾಗಿದ್ದಾಗ ಮಾತ್ರ ಸಾಧನೆಗಳು ಸಲೀಸಾಗುತ್ತದೆ. ನಾಡಾದಂತಹ ಗ್ರಾಮೀಣ ಭಾಗದಲ್ಲಿ ತಾಂತ್ರಿಕ ಶಿಕ್ಷಣಕ್ಕಾಗಿ ಐಟಿಐ ಸಂಸ್ಥೆ ಸ್ಥಾಪಿಸುವ ಮೂಲಕ ಸಾವಿರಾರು ಮಕ್ಕಳ ಉಜ್ವಲ ಭವಿಷ್ಯಕ್ಕೆ ಕಾರಣಕರ್ತರಾದ ಸಂಸ್ಥಾಪಕರು ನಿತ್ಯ ಸ್ಮರಣೀಯರಾಗಬೇಕು. ಶಿಕ್ಷಣ, ಆರೋಗ್ಯ ಹಾಗೂ ಮಾನವೀಯ ಮೌಲ್ಯಗಳುಳ್ಳ ಸಾಮಾಜಿಕ ಕಾರ್ಯಕ್ಕೆ ನನ್ನ ಕೈಲಾದಷ್ಟು ಸೇವೆ ನೀಡಬೇಕು ಎನ್ನುವುದು ನನ್ನ ದೃಢ ಸಂಕಲ್ಪ ಎಂದರು.
ಸಂಸ್ಥೆ ಪ್ಲೇಸ್ಮೆಂಟ್ ಅಧಿಕಾರಿ ರಾಜೇಶ್ ಕೆ.ಸಿ., ಶೌರ್ಯ ಸಂಸ್ಥೆಯ ಸುಬ್ರಹ್ಮಣ್ಯ ಕುಂದಾಪುರ ಮಾತನಾಡಿದರು. ರೇ.ಫಾ.ರಾಬರ್ಟ್ ಜ್ಹಡ್ ಎಂ ಡಿಸೋಜ ಸ್ಮಾರಕ ಸೊಸೈಟಿಯ ಕಾರ್ಯದರ್ಶಿ ನವೀನ್ ಲೋಬೊ, ಪ್ರಾಂಶುಪಾಲ ಮನೋಹರ್ ಆರ್.ಕಾಮತ್ ಉಪಸ್ಥಿತರಿದ್ದರು.
ಎಲೆಕ್ಟ್ರೀಷಿಯನ್ ವಿಭಾಗದ ಕಿ.ತ.ಅಧಿಕಾರಿ ದಿನೇಶ್ ಕೆ ಬೈಂದೂರು ಸ್ವಾಗತಿಸಿದರು, ಎಂಎಂವಿ ವಿಭಾಗದ ಕಿ.ತ.ಅಧಿಕಾರಿ ರಾಘವೇಂದ್ರ ಆರ್ಚಾ ಕಟ್ಬೇಲ್ತೂರು ನಿರೂಪಿಸಿದರು.