ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆ: ರಾಜಕೀಯೇತರ ಕಾರ್ಯಕ್ರಮಗಳ ಅನುಮತಿಗಾಗಿ 1119 ಅರ್ಜಿಗಳು ಸಲ್ಲಿಕೆ

Update: 2024-03-27 16:53 GMT

ಕ್ಯಾಂಡಿಡೇಟ್ ಫೆಸಿಲಿಟೇಷನ್ ಸೆಂಟರ್

ಉಡುಪಿ, ಮಾ.25: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇವಲ ರಾಜಕೀಯ ಕಾರ್ಯಕ್ರಮವಲ್ಲದೆ ಮದುವೆ ಸೇರಿದಂತೆ ಇತರ ರಾಜಕೀಯೇತರ ಕಾರ್ಯಕ್ರಮಗಳಿಗೂ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅದರಂತೆ ಉಡುಪಿ ಜಿಲ್ಲೆಯಲ್ಲಿ ರಾಜಕೀಯೇತರ ಕಾರ್ಯಕ್ರಮಗಳಿಗೆ ಅನುಮತಿ ಕೋರಿ ಮಾ.25ರವರೆಗೆ ಒಟ್ಟು 1119 ಅರ್ಜಿಗಳು ಬಂದಿದ್ದು, ಅದರಲ್ಲಿ 912 ಅನುಮತಿ ನೀಡಲಾಗಿದೆ. ಉಳಿದ 207 ಅರ್ಜಿಗಳನ್ನು ಬಾಕಿ ಇರಿಸಲಾಗಿದೆ.

ಸಹಾಯಕ ಚುನಾವಣಾಧಿಕಾರಿಗಳ ಹಂತದಲ್ಲಿ ಒಟ್ಟು 1104 ಅರ್ಜಿಗಳು ಸ್ವೀಕೃತಗೊಂಡಿದ್ದು, 898ಕ್ಕೆ ಅನುಮತಿ ನೀಡಲಾಗಿದೆ. ಉಳಿದ 206 ಅರ್ಜಿ ಗಳು ಇತ್ಯರ್ಥಕ್ಕೆ ಬಾಕಿ ಇದೆ. ಉಡುಪಿ ವಿಧಾನಸಭಾ ಕ್ಷೇತ್ರ: ಸ್ವೀಕೃತ ಅರ್ಜಿ- 298, ಅನುಮತಿ- 199, ಬಾಕಿ-99. ಕುಂದಾಪುರ: ಸ್ವೀಕೃತ ಅರ್ಜಿ- 246, ಅನುಮತಿ-207, ಬಾಕಿ- 39. ಕಾರ್ಕಳ: ಸ್ವೀಕೃತ ಅರ್ಜಿ- 201, ಅನುಮತಿ- 198, ಬಾಕಿ-3. ಕಾಪು: ಸ್ವೀಕೃತ ಅರ್ಜಿ- 193, ಅನುಮತಿ- 153, ಬಾಕಿ-40. ಬೈಂದೂರು: ಸ್ವೀಕೃತ ಅರ್ಜಿ- 166, ಅನುಮತಿ- 141, ಬಾಕಿ-25.

ಜಿಲ್ಲಾ ಚುನಾಣಾಧಿಕಾರಿಗಳ ಹಂತದಲ್ಲಿ 15 ಅರ್ಜಿಗಳು ಸ್ವೀಕೃತಗೊಂಡಿದ್ದು, ಅದರಲ್ಲಿ 14ಕ್ಕೆ ಅನುಮತಿ ನೀಡಲಾಗಿದೆ. ಕೇವಲ ಒಂದು ಅರ್ಜಿ ಬಾಕಿ ಇದೆ. ರಾಜಕೀಯ ಕಾರ್ಯಕ್ರಮ, ಲೋಡ್‌ಸ್ಪೀಕರ್, ವಾಹನ ಅನುಮತಿ ಕೋರಿ ಮಾ.25ರವರೆಗೆ ಒಟ್ಟು 19 ಅರ್ಜಿಗಳು ಬಂದಿದ್ದು ಇದರಲ್ಲಿ 11 ಅರ್ಜಿಗಳಿಗೆ ಅನುಮತಿ ನೀಡ ಲಾಗಿದೆ. ಒಂದು ಬಾಕಿ ಇದ್ದು, ಏಳು ಅರ್ಜಿಗಳನ್ನು ತಿರಸ್ಕಾರ ಮಾಡಲಾಗಿದೆ.

ಮದುವೆಗೂ ಅನುಮತಿ ಅಗತ್ಯ

‘ಮನೆಯಲ್ಲಿ ಸಂಬಂಧಿಕರೇ ಸೇರಿ ಮದುವೆ ಮಾಡುವುದಾದರೇ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಅದ್ದೂರಿಯಾಗಿ ಮದುವೆ ಮಾಡಿದರೆ ಅಲ್ಲಿಗೆ ರಾಜಕೀಯ ವ್ಯಕ್ತಿಗಳು ಆಗಮಿಸಿ ಮತಯಾಚನೆ ಮಾಡುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ನಮಗೆ ದೂರು ಬಂದರೆ ನಮ್ಮಲ್ಲಿ ಯಾವುದೇ ದಾಖಲೆಗಳು ಇರುವು ದಿಲ್ಲ. ಅದಕ್ಕಾಗಿ ಮದುವೆ ಕಾರ್ಯಕ್ರಮಕ್ಕೂ ಅನುಮತಿ ತೆಗೆದುಕೊಂಡರೆ ನಮ್ಮ ತಂಡ ತೆರಳಿ ಅಲ್ಲಿ ಯಾವುದೇ ಉಲ್ಲಂಘನೆ ಆಗಿಲ್ಲ ಎಂಬುದನ್ನು ದೃಢಪಡಿಸಲು ಸಾಧ್ಯವಾಗುತ್ತದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ತಿಳಿಸಿದ್ದಾರೆ.

ಆ ಕಾರಣಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ಅನುಮತಿ ಪಡೆದುಕೊಳ್ಳಲು ಸೂಚಿಸಿದ್ದೇವೆ. ನಮ್ಮ ಎಲ್ಲ ತಾಲೂಕು ಕಚೇರಿಗಳಲ್ಲಿ ಎಆರ್‌ಓನಲ್ಲಿ ಸಿಂಗಲ್ ವಿಂಡೋಸ್ ವ್ಯವಸ್ಥೆ ಇದೆ. ಅಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆದು ಕೊಳ್ಳಬಹುದು. ಸಾಹಿತ್ಯಿಕತ ಕಾರ್ಯಕ್ರಮಗಳಿಗೆ ಅನುಮತಿಯ ಅಗತ್ಯ ಇರುವುದಿಲ್ಲ. ಆದರೆ ಅವರು ಕಾರ್ಯಕ್ರಮಗಳ ಬಗ್ಗೆ ಕೇವಲ ಮಾಹಿತಿ ಕೊಟ್ಟರೆ ಸಾಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ರಾಜಕೀಯ ಸಂಬಂಧ ಕ್ಷೇತ್ರ ವ್ಯಾಪ್ತಿಯ ಕಾರ್ಯಕ್ರಮಗಳಿಗೆ ಎಆರ್‌ಓ ಗಳಲ್ಲಿಯೇ ಅನುಮತಿ ಪಡೆದುಕೊಳ್ಳಬಹುದು. ಜಿಲ್ಲೆಗೆ ಸಂಬಂಧಪಟ್ಟಂತೆ ವಾಹನ ಅನುಮತಿ, ಚುನಾವಣಾ ಪ್ರಚಾರ ಮಾಡುವುದಾದರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅನುಮತಿ ಪಡೆಯಬೇಕಾಗುತ್ತದೆ. ರಾಜಕೀಯ ಕಾರ್ಯಕ್ರಮ ಗಳಿಗೆ ಸುವಿದಾ ಆ್ಯಪ್‌ನಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಇಲ್ಲದಿದ್ದರೆ ನೇರವಾಗಿ ಇಲ್ಲಿ ಬಂದು ಕೂಡ ಕೊಡಬಹುದು. ಮತ್ತೆ ನಾವು ಅದನ್ನು ಸುವಿದಾಕ್ಕೆ ಅಪ್‌ಲೋಡ್ ಮಾಡುತ್ತೇವೆ ಎಂದು ಅವರು ಮಾಹಿತಿ ನೀಡಿದರು.

ಕ್ಯಾಂಡಿಡೇಟ್ ಫೆಸಿಲಿಟೇಷನ್ ಸೆಂಟರ್

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ಯಾಂಡಿಡೇಟ್ ಫೆಸಿಲಿಟೇಷನ್ ಸೆಂಟರ್‌ನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ತೆರೆಯಲಾಗಿದೆ.

ನಾಮಪತ್ರ ಸಲ್ಲಿಸಲು ಬರುವ ಅಭ್ಯರ್ಥಿಗಳಿಗೆ ಇಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಅಭ್ಯರ್ಥಿಗಳು ಮತದಾರರ ಪಟ್ಟಿಯ ಬಗ್ಗೆ ಇಲ್ಲಿ ಮಾಹಿತಿಯನ್ನು ಪಡೆದುಕೊಳ್ಳಬಹುದು. ಅದಕ್ಕೆ ನಮ್ಮ ಸಿಬಂದಿಗಳು ಎಲ್ಲ ರೀತಿಯಲ್ಲಿ ನೆರವು ಒದಗಿಸಲಿದ್ದಾರೆ. ಅದೇ ರೀತಿ ನಾಮಪತ್ರಗಳಲ್ಲಿನ ದಾಖಲೆ, ಸಹಿ ಸೇರಿದಂತೆ ಎಲ್ಲವನ್ನು ಮೊದಲು ಈ ಕೇಂದ್ರದಲ್ಲಿ ಪರಿಶೀಲನೆ ಮಾಡ ಲಾಗುತ್ತದೆ. ಅದಕ್ಕಾಗಿಯೇ ಮೊದಲ ಬಾರಿಗೆ ಈ ಪ್ರತ್ಯೇಕ ಕೇಂದ್ರವನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಡಾ.ವಿದ್ಯಾ ಕುಮಾರಿ ತಿಳಿಸಿದ್ದಾರೆ.

"ಸೀ ವಿಜಿಲ್‌ನಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸೇರಿದಂತೆ ಎಲ್ಲ ರೀತಿಯ ದೂರುಗಳನ್ನು ಮೊಬೈಲ್ ಸಂಖ್ಯೆ ನಮೂದಿಸಿ ಅಥವಾ ಮೊಬೈಲ್ ನಂಬರ್ ಕೊಡದೆ ಕೂಡ ದೂರು ಕೊಡಬಹುದು. ಅವರ ಹೆಸರು ಗೌಪ್ಯವಾಗಿ ಇರುತ್ತದೆ. ಇದರಲ್ಲಿ ದೂರು ನೀಡುವುದರಿಂದ ಜಿಪಿಎಸ್ ಮೂಲಕ ಲೋಕೇಶನ್ ಟ್ರಾಕ್ಯ್ ಮಾಡಿ ಕೂಡಲೇ ಸ್ಥಳಕ್ಕೆ ತೆರಳಿ ಕ್ರಮ ಜರಗಿಸಲು ಸುಲಭ ಆಗುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಪ್ಲೈಯಿಂಗ್ ಸ್ಕ್ವಾಡ್ ಮತ್ತು ಒಂದು ರಿಸರ್ವ್ ಸ್ವಾಡ್ ಇರುತ್ತದೆ. ಅಲ್ಲದೆ ಎರಡು ವಿಡಿಯೋ ಸರ್ವಲೆನ್ಸ್ ಟೀಂ ಕೂಡ ಇರುತ್ತದೆ"

-ಡಾ.ವಿದ್ಯಾ ಕುಮಾರಿ, ಜಿಲ್ಲಾಧಿಕಾರಿ, ಉಡುಪಿ

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News