ಮುಂಗಾರು ಪೂರ್ವ ಮಳೆ: ಗುಡುಗು-ಮಿಂಚು- ಸಿಡಿಲು ಬಗ್ಗೆ ಉಡುಪಿ ಜಿಲ್ಲಾಡಳಿತ ಸೂಚನೆ
ಉಡುಪಿ, ಮೇ12: ಕರಾವಳಿ ಜಿಲ್ಲೆಗಳೀಗ ಅತಿ ಅಗತ್ಯವಾಗಿ ಬರಬೇಕಾದ ಮುಂಗಾರು ಪೂರ್ವ ಮಳೆಯ ಕುರಿತಂತೆ ಚಾತಕ ಪಕ್ಷಿಯಂತೆ ಕಾಯುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಕೃಷಿ ಚಟುವಟಿಕೆಗಳು ಪ್ರಾರಂಭ ಗೊಳ್ಳ ಬೇಕಿದ್ದರೆ ಮುಂಗಾರು ಪೂರ್ವ ಮಳೆ ಜಿಲ್ಲೆಯಲ್ಲಿ ಸುರಿಯಲೇ ಬೇಕಿದೆ. ಜಿಲ್ಲೆಯ ರೈತರಂತೂ ಈಗಾಗಲೇ ಮಳೆಗಾಗಿ ಆಕಾಶ ದಿಟ್ಟಿಸಲಾರಂಭಿಸಿದ್ದಾರೆ.
ಆದರೆ ಮುಂಗಾರು ಪೂರ್ವ ಮಳೆಯೊಂದಿಗೆ ಬರುವ ಗುಡುಗು-ಸಿಡಿಲು - ಮಿಂಚು ಬಗ್ಗೆ ಜನತೆ ಅಷ್ಟೇ ಜಾಗೃತೆ ಹೊಂದಿರ ಬೇಕಾದ ಅಗತ್ಯವಿದೆ. ಮುಂಗಾರು ಪೂರ್ವ ಮಳೆ ಸುರಿಯುವ ಮುನ್ನ ಅಥವಾ ಮಳೆಯ ನಡುವೆಯೇ ತನ್ನ ಅಟ್ಟಹಾಸ ಮೆರೆಯುವ ಗುಡುಗು-ಸಿಡಿಲು ಪ್ರತಿವರ್ಷ ಸಾಕಷ್ಟು ಜೀವಹಾನಿಗೆ ಕಾರಣವಾಗುತ್ತಿದೆ. ಹೀಗಾಗಿ ಜನರು ಮಳೆ ಬರುವ ಪೂರ್ವ ಸೂಚನೆ ದೊರೆಯುತಿದ್ದಂತೆ, ಗುಡುಗು-ಸಿಡಿಲು ಬಗ್ಗೆಯೂ ಹೆಚ್ಚಿನ ಜಾಗೃತಿಯನ್ನು ಹೊಂದಿರಬೇಕಾಗುತ್ತದೆ. ಸುರಕ್ಷಿತ ಸ್ಥಳದತ್ತ ಧಾವಿಸಬೇಕಾಗುತ್ತದೆ.
ಸಿಡಿಲು ಬಡಿತವು ಜಲ-ಹವಾಮಾನ ಸಂಬಂಧಿತ ನೈಸರ್ಗಿಕ ವಿದ್ಯಮಾನವಾಗಿದ್ದು, ಉಷ್ಣವಲಯ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ಉಂಟಾಗುತ್ತದೆ. ಭಾರತವು ಉಷ್ಣ ವಲಯಗಳಿಂದ ಆವೃತಗೊಂಡ ವಾತಾವರಮ ಹಾಗೂ ಭೌಗೋಳಿಕ ಹಿನ್ನೆಲೆಯಲ್ಲಿ ಸಿಡಿಲು ಬಡಿತ ಪೀಡಿತ ರಾಷ್ಟ್ರವಾಗಿದೆ. ಸಿಡಿಲು ಬಡಿತವು ಹವಾಮಾನದಲ್ಲಿ ಸಾಮಾನ್ಯ ಪ್ರಕ್ರಿಯೆಯಾಗಿ ದ್ದರೂ, ಹವಾಮಾನದಲ್ಲಿನ ವೈಫರಿತ್ಯಗಳು, ಋತುಮಾನದ ಬದಲಾವಣೆಗಳ ಪರಿಣಾಮ ಸಿಡಿಲು ಬಡಿತ ವ್ಯತ್ಯಾಸ ಗೊಳ್ಳುತ್ತದೆ.
ಕಳೆದೆರಡು ವರ್ಷಗಳಲ್ಲಿ ಸಿಡಿಲು ಬಡಿತಗಳ ಆವರ್ತನಗಳು ಹಾಗೂ ತೀವ್ರತೆ ಗಣನೀಯವಾಗಿ ಏರಿಕೆಯಾಗಿದ್ದು, ಕೇಂದ್ರ ಸರಕಾರದ ಭೂವಿಜ್ಞಾನ ಸಚಿವಾಲಯದ ಭಾರತೀಯ ಉಷ್ಣವಲಯ ಹವಾಮಾನ ಸಂಸ್ಥೆ ಪುಣೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ದೂರ ಸಂವೇದಿ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಸಿಡಿಲು ಸಂವೇದಕ ಜಾಲಗಳಲ್ಲಿ ದಾಖಲಾದ ಸಿಡಿಲು ಬಡಿತಗಳ ಅಂಕಿಅಂಶಗಳು ದೃಢೀಕರಿಸಿವೆ. 2019ರಿಂದ 2023ರವರೆಗೆ ವಾರ್ಷಿಕ ಸಿಡಿಲು ಬಡಿ ವರದಿ ಯಂತೆ ಮೋಡದಿಂದ ನೆಲಕ್ಕೆ ಅಪ್ಪಳಿಸುವ ಸಿಡಿಲು ಬಡಿತದ ಪ್ರಮಾಣ ಶೇ. 53ರಷ್ಟಿದೆ. ಸಿಡಿಲು ಬಡಿತಗಳ ತೀವ್ರತೆಯು ಹೆಚ್ಚಾಗಲು ಜಾಗತಿಕ ಹವಾಮಾನ ಬದಲಾವಣೆ, ತಾಪಮಾನದ ಏರಿಕೆ, ಜಲಾನಯನ ಪ್ರದೇಶಗಳ ಕುಸಿತ, ಅರಣ್ಯ ಹಾಗೂ ಪರಿಸರ ನಾಶಗಳು ಬಹುಮುಖ್ಯ ಕಾರಣ ಎಂದು ಹೇಳಬಹುದು.
ದೇಶದ ಹಲವು ಭಾಗಗಳಲ್ಲಿ ಗುಡುಗು-ಸಿಡಿಲು ಬಡಿತಗಳಿಂದಾದ ಹಾನಿಯ ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದ್ದು, ಇಡಿಲು ಬಡಿತದಿಂದ ಜೀವ ಹಾನಿಯ ಪ್ರಕರಣಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ.ಇದರಿಂದ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳ ಜನರು ಹೆಚ್ಚು ಬಾಧಿತರಾಗುತಿದ್ದಾರೆ. ರಾಷ್ಟ್ರೀಯ ಅಪರಾಧ ದತ್ತಾಂಶ ಸಂಸ್ಥೆಯ ಅಂದಾಜಿನಂತೆ 1967ರಿಂದ 2021ರವರೆಗೆ ಸುಮಾರು 2800ಕ್ಕೂ ಅಧಿಕ ಜೀವಹಾನಿ ಪ್ರಕರಣಗಳು ದಾಖಲಾಗಿವೆ.
ಲಭ್ಯ ಅಂಕಿಅಂಶಗಳ ಪ್ರಕಾರ ಸಿಡಿಲು ಬಡಿತಗಳಿಂದಾಗುವ ಜೀವಹಾನಿ ಪ್ರಕರಣಗಳಲ್ಲಿ ಮಹಿಳೆಯರಿಗಿಂತ ಪುರುಷ ಸಂಖ್ಯೆ ಹೆಚ್ಚಾಗಿದೆ. ಕೃಷಿ-ತೋಟಗಾರಿಕೆ ನಿರತ ರೈತರು, ದನ-ಕುರಿಗಾಹಿಗಳು, ಮೀನುಗಾರರು ಹೆಚ್ಚಾಗಿ ಗುಡುಗು-ಸಿಡಿಲು ಬಡಿತದ ಸಂದರ್ಭಗಳಲ್ಲಿ ಅಸುರಕ್ಷಿತ ತೆರೆದ ಆವರಣದಲ್ಲಿ ಕಾರ್ಯನಿರ್ವಹಿಸುವುದರಿಂದ ಸಿಡಿಲಿಗೆ ಹೆಚ್ಚು ಸಿಲುಕುತಿದ್ದಾರೆ. ಸಿಡಿಲಿನಿಂದಾದ ಜೀವಹಾನಿ ಪ್ರಕರಣಗಳಿಂದ ಏಕವ್ಯಕ್ತಿ ಆಧಾರಿತ ಕುಟುಂಬಗಳ ಮೇಲೆ ಹೆಚ್ಚು ಪರಿಣಾಮ ಉಂಟಾಗುತಿದ್ದು, ದೇಶದ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಮೇಲೆ ಪರಿಣಾಮ ಬೀರುತ್ತಿದೆ.
ದೇಶದ ಹಲವು ಭಾಗಗಳು ಹಾಗೂ ಪೂರ್ವ ಮತ್ತು ಈಶಾನ್ಯ ಭಾಗಗಳು ಹೆಚ್ಚು ಸಿಡಿಲು ಬಾಧಿತವಾಗಿವೆ. ಛೋಟಾ ನಾಗಪುರದ ಉತ್ತರ ಒರಿಸ್ಸಾ, ಪಶ್ಚಿಮ ಬಂಗಾಳದ ದಕ್ಷಿಣ ಭಾಗ, ಜಾರ್ಖಂಡ್, ಛತ್ತೀಸ್‌ಗಢ್, ಮಧ್ಯ ಪ್ರದೇಶದ ಪೂರ್ವ ಭಾಗ, ಬಿಹಾರದ ದಕ್ಷಿಣ ಭಾಗ ಹಾಗೂ ಉತ್ತರ ಪ್ರದೇಶ ಸನ್‌ಭದ್ರ ಪ್ರದೇಶದಲ್ಲಿ ವರ್ಷವಿಡೀ ತೀವ್ರ ಸಿಡಿಲು ಬಡಿಯುತ್ತಿ ರುತ್ತದೆ. ಈ ಭಾಗದ ಗುಡ್ಡಗಾಡು ಹಾಗೂ ವಸತಿ ರಹಿತ ಪ್ರದೇಶಗಳ ಬುಡಕಟ್ಟು ಸಮುದಾಯಗಳು ಹೆಚ್ಚಾಗಿ ಸಿಡಿಲಿನಿಂದ ಬಾಧಿತರಾಗುತಿದ್ದಾರೆ. ಅದೇ ರೀತಿ ದಕ್ಷಿಣದ ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ, ಗುಜರಾತ್ , ರಾಜಸ್ಥಾನ ಗಳಲ್ಲೂ ಸಿಡಿಲು ಬಡಿತ ಹೆಚ್ಚು ಕಂಡುಬರುತ್ತದೆ.
ಸಿಡಿಲು ಬಡಿತವು ಮೋಡಗಳಲ್ಲಿನ ಘರ್ಷಣೆಯಿಂದ ಉಂಟಾಗುವ ವಿದ್ಯುತ್ ಆವೇಶಗಳ ಫಲಿತಾಂಶಗಳಾಗಿವೆ. ಭೂಮಿಯಿಂದ 2ಕಿಮೀ. ಅಂತರದಲ್ಲಿರುವ ಕೆಳಹಂತದ ಕುಮುಲೋನಿಂಬಸ್ ಮೋಡಗಳಲ್ಲಿ ಮಂಜಿನ ಕಣಗಳ ನಡುವಿನ ಋಣಾತ್ಮಕ ಹಾಗೂ ಧನಾತ್ಮಕ ಕಣಗಳಲ್ಲಿ ಆಕರ್ಷಣೆ ಹಾಗೂ ಉಷ್ಣಾಂಶ ವ್ಯತ್ಯಯಗಳಿಂದ ಸಿಡಿಲುಗಳು ಉಂಟಾಗುತ್ತವೆ.
ಕರ್ನಾಟಕದಲ್ಲಿ: 2011-2023ರ ಅವಧಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಸಿಡಿಲು ಬಡಿದು ಸುಮಾರು 946 ಮಂದಿ ಸಾವನ್ನ ಪ್ಪಿದ್ದಾರೆ ಎಂಬುದು ಅಂಕಿಅಂಶಗಳಿಗೆ ತಿಳಿದುಬರುತ್ತದೆ. ರಾಜ್ಯದಲ್ಲಿ 2022ರಲ್ಲಿ 113 ಮಂದಿ, 2018ರಲ್ಲಿ 107 ಮಂದಿ, 2019ರಲ್ಲಿ 105 ಮಂದಿ, 2021ರಲ್ಲಿ 95 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ವರ್ಷ 66 ಮಂದಿ ಸಿಡಿಲಿಗೆ ಬಲಿಯಾದ್ದಾರೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 2011ರಿಂದ 2023ರವರೆಗೆ ತಲಾ 15 ಮಂದಿ ಸಿಡಿಲಿನ ಆಘಾತಕ್ಕೊಳ ಗಾಗಿದ್ದಾರೆ. ಇದೇ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 7 ಮಾತ್ರ. 2023ರಲ್ಲಿ ಉಡುಪಿ ಜಿಲ್ಲೆಯಲ್ಲಿ ಮೂವರು ಸಿಡಿಲಿಗೆ ಬಲಿಯಾದರೆ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾರೂ ಬಲಿಯಾಗಿಲ್ಲ. ಈ ವರ್ಷ ಈಗಾಗಲೇ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟ ವರದಿಗಳಿವೆ.
ಸಿಡಿಲಿನಿಂದ ತಪ್ಪಿಸಿಕೊಳ್ಳುವುದು ಹೇಗೆ?: ಮಿಂಚನ್ನು ನೋಡಿದ ನಂತರ ಗುಡುಗು ಕೇಳುವ ಮೊದಲ 30ಸೆಕೆಂಡ್‌ಗಳಲ್ಲಿ ನೀವು ಹೊರಗಿದ್ದರೆ ಮನೆ ಯೊಳಗೆ ಹೋಗಿ ಅಲ್ಲಿಯೇ ಇರಬೇಕು. ಲೋಹದ ವಿನ್ಯಾಸದ ಕಟ್ಟಡಗಳು, ಲೋಹದ ತಗಡು ಗಳಿರುವ ಕಟ್ಟಡಗಳಿಂದ ದೂರವಿರಬೇಕು. ಕೊಳ, ಸರೋವರ ಅಥವಾ ಇತರ ನೀರಿನ ಹೊಂಡದ ಬಳಿ ಇದ್ದರೆ ತಕ್ಷಣ ದೂರ ಹೋಗಬೇಕು.
ಹೊರಾಂಗಣದಲ್ಲಿ ಎತ್ತರದ ಪ್ರದೇಶದಲ್ಲಿದ್ದರೆ ತಕ್ಷಣ ಹೊರಬರಬೇಕು. ಬಂಡೆ ಅಥವಾ ಕಲ್ಲಿನ ಛಾವಣೆಯಡಿ ಆಶ್ರಯ ಪಡೆಯಬೇಡಿ. ನೀರಿನ ಪ್ರದೇಶದಲ್ಲಿ ಕೆಲಸ ಮಾಡುತಿದ್ದರೆ (ಗದ್ದೆ, ತೋಟಇತ್ಯಾದಿ) ತಕ್ಷಣ ಆ ಪ್ರದೇಶದಿಂದ ದೂರ ಒಣ ಪ್ರದೇಶಕ್ಕೆ ಹೋಗಬೇಕು. ತಗ್ಗು ಪ್ರದೇಶದಲ್ಲಿ ಆಶ್ರಯ ಪಡೆದರೆ ಉತ್ತಮ.
ನಿಮ್ಮ ಕತ್ತಿನ ಹಿಂಭಾಗದಲ್ಲಿ ಕೂದಲು ನಿಂತಿರುವುದು ಮಿಂಚು ಬರುವ ಮುನ್ಸೂಚನೆಯಾಗಿರುತ್ತದೆ. ವಿದ್ಯುತ್ ವಾಹಕಗಳು ಹಾಗೂ ವಸ್ತುಗಳಿಂದ ದೂರವಿರಿ. ಗುಡುಗು ಬರುತಿದ್ದಂತೆ ಎಲ್ಲಾ ಎಲೆಕ್ಟ್ರಾನಿಕ್ಸ್ ಹಾಗೂ ಇಲೆಕ್ಟ್ರಿಕಲ್ ಉಪಕರಮಗಳ ಸಂಪರ್ಕ ತಪ್ಪಿಸಬೇಕು. ಉಪಕರಣಗಳನ್ನು ರಕ್ಷಿಸಲು ಮನೆಯಲ್ಲಿ ಮಿಂಚು ಬಂಧಕಗಳನ್ನು ಅಳವಡಿಸಬೇಕು.
ಗುಡುಗು-ಸಿಡಿಲಿನ ವೇಳೆ ಮರಗಳ ಕೆಳಗೆ, ವಿಶೇಷವಾಗಿ ಒಂಟಿ ಮರದ ಕೆಳಗೆ ಆಶ್ರಯ ಪಡೆಯಬೇಡಿ. ಇವುಗಳಲ್ಲಿ ವಿದ್ಯುತ್ ಹರಿಯುತ್ತದೆ. ಮಿಂಚು ಬರುವಾಗ ಕಂಪ್ಯೂಟರ್, ಲ್ಯಾಪ್‌ಟಾಪ್, ವಾಷರ್, ಸ್ಟೌವ್, ಫ್ರಿಜ್, ಟಿವಿ, ಹವಾನಿ ಯಂತ್ರಣ ಹಾಗೂ ವಿದ್ಯುತ್ ಸಂಪರ್ಕದ ಎಲ್ಲಾ ಉಪಕರಮಗಳ ಸಂಪರ್ಕ ತಪ್ಪಿಸಿ ಎಂದು ಜಿಲ್ಲಾಡಳಿತ ಬಿಡುಗಡೆ ಗೊಳಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.