ಸಾಂದರ್ಭಿಕ ಚಿತ್ರ

ಉಡುಪಿ, ಅ.19: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಆಯೋಜಿಸಿರುವ ಉಡುಪಿ ಉಚ್ಚಿಲ ದಸರಾ-2026ರ ಬೃಹತ್ ಶೋಭಾಯಾತ್ರೆ ಮೆರವಣಿಗೆಯು ಅಕ್ಟೋಬರ್ 21ರ ಬುಧವಾರದಂದು ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸಾಗಲಿರುವ ಹಿನ್ನೆಲೆಯಲ್ಲಿ ವಾಹನಗಳ ದಟ್ಟಣೆಯಾಗಿ ಟ್ರಾಫಿಕ್ ಸಮಸ್ಯೆ ಆಗುವ ಸಾಧ್ಯತೆ ಇದ್ದು, ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಆದೇಶ ಹೊರಡಿಸಿದ್ದಾರೆ.

ಅ.21ರಂದು ಅಪರಾಹ್ನ 3 ಗಂಟೆಯಿಂದ ರಾತ್ರಿ 11  ಗಂಟೆಯವರೆಗೆ ಈ ಕೆಳಕಂಡಂತೆ ವಾಹನಗಳ ಸಂಚಾರದ ಮಾರ್ಗದಲ್ಲಿ ಬದಲಾವಣೆ ಹಾಗೂ ಸಂಚಾರದಲ್ಲಿ ನಿಷೇಧವನ್ನು ಮಾಡಲಾಗಿದೆ.

*ಉಡುಪಿ-ಮಂಗಳೂರು ಮಾರ್ಗವಾಗಿ ಬರುವ ಘನ ವಾಹನಗಳು ಅಪರಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಬದಲಿ ಮಾರ್ಗವಾಗಿ ಕಟಪಾಡಿ-ಶಿರ್ವಾ-ಬೆಳ್ಮಣ್-ಪಡುಬಿದ್ರಿ ಮಾರ್ಗವಾಗಿ ಸಂಚರಿಸಬೇಕು.

*ಉಡುಪಿ ಕಡೆಯಿಂದ ಬಜ್ಪೆ ಏರ್‌ಪೋರ್ಟ್‌ಗೆ ಹೋಗುವ ವಾಹನಗಳು ಕಟಪಾಡಿ-ಶಿರ್ವಾ-ಬೆಳ್ಮಣ್-ಮುಂಡ್ಕೂರು ಮಾರ್ಗವಾಗಿ ಸಂಚರಿಸಬೇಕು.

*ಟ್ರಕ್, ಲಾರಿ, ಟ್ಯಾಂಕರ್ ಮುಂತಾದ ಘನ ವಾಹನಗಳನ್ನು ರಾತ್ರಿ 9 ಗಂಟೆಯವರೆಗೆ ಕುಂದಾಪುರ, ಉಡುಪಿ ಕಡೆಗಳಲ್ಲಿರುವ ಟ್ರಕ್ ಬೇ ಯಲ್ಲಿ ನಿಲ್ಲಿಸಿ ನಂತರ ಸಂಚಾರ ಮುಂದುವರೆಸಬೇಕು.

*ಉಡುಪಿಯಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುವ ರಾತ್ರಿ ಪ್ರಯಾಣಿಕ ಬಸ್ಸುಗಳು ರಾತ್ರಿ 9 ಗಂಟೆ ನಂತರ ಉಡುಪಿಯಿಂದ ಹೊರಡಬೇಕು.

*ಮಂಗಳೂರು-ಉಡುಪಿ ಮಾರ್ಗವಾಗಿ ಅಪರಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಎಲ್ಲಾ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಈ ಅಧಿಸೂಚನೆಯನ್ನು ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮ 1989ರ ನಿಯಮ 221 5(ಎ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor