ಕುಂದಾಪುರ, ಅ.27: ಕೋಡಿಯ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಪರಿಸರ ಸಂರಕ್ಷಣೆ ಮತ್ತು ನೈರ್ಮಲ್ಯದ ಜಾಗೃತಿಯ ಉದ್ದೇಶದಿಂದ ಸತತವಾಗಿ ನಡೆಸಿಕೊಂಡು ಬರಲಾಗುತ್ತಿರುವ ’ಸ್ವಚ್ಛ ಕಡಲತೀರ ಹಸಿರು ಕೋಡಿ’ ಅಭಿಯಾನವು ಈಗ ಮಹತ್ವದ ಮೈಲಿಗಲ್ಲನ್ನು ತಲುಪಿದೆ. ಅ.31ರಂದು ಬೆಳಗ್ಗೆ 7ರಿಂದ ಬೆಳಗ್ಗೆ 10 ಗಂಟೆಯವರೆಗೆ 50ನೇ ತಿಂಗಳ ಕೋಡಿ ಬೀಚ್ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ.

ಕುಂದಾಪುರದ ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಡಾ. ಆಸಿಫ್ ಬ್ಯಾರಿ ಮಾತನಾಡಿ, 2021ರ ಸೆ.29ರಂದು ’ವಿಶ್ವ ಹಸಿರು ಕಟ್ಟಡಗಳ ಸಪ್ತಾಹ’ದ ಅಂಗವಾಗಿ ಆರಂಭಗೊಂಡ ಈ ಸ್ವಚ್ಛ ಕಡಲ ತೀರ-ಹಸಿರು ಕೋಡಿಯ 49 ತಿಂಗಳು ಪೂರ್ಣಗೊಂಡು, ಈಗ ಸ್ವಚ್ಛತಾ ಕಾಯಕದ 50 ನೇ ಆವೃತ್ತಿಯ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ವಿದ್ಯಾರ್ಥಿಗಳಲ್ಲಿ, ಸಾರ್ವಜನಿಕರಲ್ಲಿ ಪರಿಸರ ಪ್ರಜ್ಞೆ, ಸೇವಾ ಮನೋಭಾವದ ಜತೆಗೆ ಸ್ವಚ್ಛತೆಯ ಬಗ್ಗೆ ನಮ್ಮೆಲ್ಲರ ಜವಾಬ್ದಾರಿ ಹಾಗೂ ಹೊಣೆಗಾರಿಕೆಯನ್ನು ಮೂಡಿಸುವ ನಿಟ್ಟಿನಲ್ಲಿ 6 ವರ್ಷಗಳ ಹಿಂದೆ ಈ ಅಭಿಯಾನ ಆರಂಭಿಸಲಾಗಿತ್ತು ಎಂದರು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ರೆಹಮಾನ್ ಬ್ಯಾರಿ ಮಾತನಾಡಿ, ಕಡಲತೀರ ಸುಂದರೀಕರಣ, ಕಡಲಾಮೆಯಂತಹ ಜಲಚರ ಜೀವಿಗಳಿಗೆ ಕಸಮುಕ್ತ ಹಾಗೂ ಮಾಲಿನ್ಯ ಮುಕ್ತ ಪರಿಸರ ಒದಗಿಸುವುದು ಮತ್ತು ಪ್ರವಾಸಿಗರಿಗೆ ಶುಚಿತ್ವ ಪೂರ್ಣ ವಾತಾವರಣ ನಿರ್ಮಿಸುವುದು ಈ ಅಭಿಯಾನದ ಪ್ರಮುಖ ಗುರಿಯಾಗಿದೆ. ಅದಲ್ಲದೆ, ಈ ಪರಿಸರ ಸಂರಕ್ಷಣೆಯ ಮಹತ್ಕಾರ್ಯವನ್ನು ರಾಷ್ಟ್ರಮಟ್ಟದ ಚಳವಳಿಯನ್ನಾಗಿ ಉತ್ತೇಜಿಸುತ್ತಾ, ಮುಂದಿನ ಪೀಳಿಗೆಯನ್ನು ’ಸ್ವಚ್ಛ ಹಸಿರು ಭಾರತ’ದತ್ತ ಪ್ರೇರೇಪಿಸಲು ಹಾಗೂ ಕೇಂದ್ರ ಸರಕಾರದ ’ಸ್ವಚ್ಛ ಭಾರತ್’, ’ಮಿಷನ್ ಲೈಫ್’ ಮತ್ತು ’ಜನ್ ಭಾಗಿದಾರಿ’ ಯೋಜನೆಗಳಿಗೆ ಬೆಂಬಲ ಸೂಚಿಸಲು ಈ ಕಾರ್ಯಕ್ರಮ ವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದವರು ಮಾಹಿತಿ ನೀಡಿದರು.

ಈ ಸ್ವಚ್ಛತಾ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದು, ಸರಕಾರಿ ಹಾಗೂ ಖಾಸಗಿ ಇಲಾಖೆಗಳು, ವಿವಿಧ ಸಂಘ-ಸಂಸ್ಥೆಗಳು, ಎನ್.ಜಿ.ಓ. ಸದಸ್ಯರು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕ ರಕ್ಷಕ ಸಂಘದ ಸದಸ್ಯರು, ಊರ ನಾಗರಿಕ ವೃಂದ, ವಿವಿಧ ಶಾಲಾ-ಕಾಲೇಜಿನ ಇಕೋ ಕ್ಲಬ್, ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ ಗೈಡ್ಸ್, ರೇಂಜರ್ಸ್ ಮತ್ತು ರೋವರ್ಸ್ ಹಾಗೂ ಇತರ ವಿದ್ಯಾರ್ಥಿಗಳು, ಪೋಷಕರು ಹಾಗೂ ಪರಿಸರ ಪ್ರೇಮಿಗಳು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬ್ಯಾರಿಸ್ ಪದವಿ ಪೂರ್ವ ಕಾಲೇಜಿನ ಅಕಾಡೆಮಿಕ್ ಡೀನ್ ಡಾ.ಪೂರ್ಣಿಮಾ ಶೆಟ್ಟಿ ತಿಳಿಸಿದರು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಅಶ್ವಿನಿ ಶೆಟ್ಟಿ ಮಾತನಾಡಿ, ಬೃಹತ್ ಜಾಗೃತಿ ಅಭಿಯಾನದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದು, ನಮ್ಮ ಶಿಕ್ಷಣ ಸಂಸ್ಥೆಯ 800ಕ್ಕೂ ಮಿಕ್ಕಿ ವಿದ್ಯಾರ್ಥಿಗಳೊಂದಿಗೆ ಅಂದಾಜು ಸಾವಿರಕ್ಕೂ ಮಿಕ್ಕಿ ಮಂದಿ ಈ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಹಳವಳ್ಳಿಯಿಂದ ಕೋಡಿಯ ಸೀವಾಕ್ ನವರೆಗಿನ 4 ಕಿ.ಮೀ. ವ್ಯಾಪ್ತಿಯ ಬೀಚ್ ನಲ್ಲಿ ಸ್ವಚ್ಛತೆ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ಯಾರಿಸ್ ಬಿ.ಎಡ್ ಹಾಗೂ ಡಿ.ಎಡ್ ಪ್ರಾಂಶುಪಾಲೆ ಡಾ.ಫಿರ್ದೋಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor