ಉಡುಪಿ| ಸೆ. 4, 5 ರಂದು ಶ್ರೀಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿ: ಪೊಲೀಸ್ ಬಂದೋಬಸ್ತ್
ಉಡುಪಿ: ಉಡುಪಿಯಲ್ಲಿ ಸೆ. 4, 5 ರಂದು ನಡೆಯಲಿರುವ ಶ್ರೀಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿ ಪ್ರಯುಕ್ತ ಸಾರ್ವಜನಿಕರ ಸುರಕ್ಷತೆ, ಅಹಿತಕರ ಘಟನೆ, ಕಳ್ಳತನಕ್ಕೆ ತಡೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಉಡುಪಿ ನಗರದ ಪ್ರಸಿದ್ಧ ವಿಟ್ಲ ಪಿಂಡಿ/ಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಅಂಗವಾಗಿ ಸಾರ್ವಜನಿಕರ ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸುಗಮ ಸಂಚಾರ ವ್ಯವಸ್ಥೆಯನ್ನು ನಿರ್ವಹಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.
ಫಿಂಗರ್ ಪ್ರಿಂಟ್ ಸ್ಕ್ಯಾನರ್: ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ಸಾವಿರಾರು ಮಂದಿ ಭಕ್ತಾಗಳು ಭಾಗವಹಿಸುವ ನಿರೀಕ್ಷೆ ಯಿದ್ದು, ಭಕ್ತಾಗಳಿಗೆ ಯಾವುದೇ ಅಡ್ಡಿ ಆತಂಕವಿಲ್ಲದೇ ದೇವರ ದರ್ಶನವನ್ನು ಕಣ್ತುಂಬಿಕೊಳ್ಳಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಈ ಹಿಂದಿನ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರ ಗುರುತಿಸುವಿಕೆ ಮತ್ತು ನಿಗಾ ಇಡುವುದಕ್ಕೆ ಫಿಂಗರ್ ಪ್ರಿಂಟ್ ಸ್ಕ್ಯಾನರ್‌ಗಳನ್ನು ಬಳಸಲಾಗುತ್ತಿದೆ. ಡ್ರೋನ್ ಕ್ಯಾಮೆರಾಗಳ ಮೂಲಕ ಕಾರ್ಯಕ್ರಮದ ಸಂಪೂರ್ಣ ಪ್ರದೇಶದ ಮೇಲೆ ನಿಗಾ ವಹಿಸಲಾಗುತ್ತದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಅವರ ನೇತೃತ್ವದಲ್ಲಿ ಎಸ್ಪಿ 1, ಹೆಚ್ಚುವರಿ ಪೊಲೀಸ್ ಅಧೀಕ್ಷಕ 1, ಡಿವೈಎಸ್ಪಿ 2, ಪೊಲೀಸ್ ಇನ್ಸ್ಪೆಕ್ಟರ್ 6, ಪೊಲೀಸ್ ಸಬ್ ಇನ್ಸ್ಪೆಕ್ಟರ್‌ಗಳು 25, ಸಹಾಯಕ ಸಬ್ ಇನ್ಸ್ಪೆಕ್ಟರ್ 35, ಹೆಡ್ ಕಾನ್ಸ್ಟೇಬಲ್/ಪೊಲೀಸ್ ಕಾನ್ಸ್ಟೇಬಲ್/ಮಹಿಳಾ ಪೊಲೀಸ್ ಸಿಬ್ಬಂದಿ 186 ಹಾಗೂ 50 ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಹೆಚ್ಚುವರಿ ಭದ್ರತೆಗಾಗಿ 1 ಕೆಎಸ್‌ಆರ್‌ಪಿ ತುಕಡಿ (ತಲಾ 25 ಮಂದಿ), 9 ಡಿಎಆರ್ ತುಕಡಿ (ತಲಾ 10 ಮಂದಿ), 3 ಅಗ್ನಿಶಾಮಕ ದಳದ ತಂಡಗಳು, 2 ಆಂಬ್ಯುಲೆನ್ಸ್ ಹಾಗೂ 3 ಡ್ರೋನ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಪಾರ್ಕಿಂಗ್ ಪ್ರತ್ಯೇಕ ವ್ಯವಸ್ಥೆ: ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಭಕ್ತರಿಗೆ ಹಾಗೂ ಸುಗಮ ಸಂಚಾರದ ನಿಟ್ಟಿನಲ್ಲಿ ನಗರದ ಒಟ್ಟು 7 ಕಡೆಗಳಲ್ಲಿ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆಯನ್ನು ಮಾಡಲಾಗಿದೆ.
ಎಂ.ಜಿ.ಎಂ. ಮೈದಾನ, ಶ್ರೀಕೃಷ್ಣಮಠ ರಾಜಾಂಗಣ ಪಾರ್ಕಿಂಗ್ ಸ್ಥಳ, ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನ ಪಾರ್ಕಿಂಗ್ ಸ್ಥಳ, ಬೀಡಿನಗುಡ್ಡೆ ಮೈದಾನ, ಬೀಡಿನಗುಡ್ಡೆ ಕ್ರೀಡಾಂಗಣ, ವಿದ್ಯೋದಯ ಶಾಲೆ ಪಾರ್ಕಿಂಗ್ ಸ್ಥಳ, ಮಾಂಡವಿ ರಾಯಲ್ ಗಾರ್ಡನ್ ಪಾರ್ಕಿಂಗ್ ಸ್ಥಳದಲ್ಲಿ ವ್ಯವಸ್ಥೆಯನ್ನು ಮಾಡಲಾಗಿದೆ.
45 ಕಡೆ ಸಿಸಿ ಟಿವಿ: ಜನಸಂದಣಿ ನಿಯಂತ್ರಣ ಮತ್ತು ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅಕ್ಕಪಡೆ ಮತ್ತು ಸ್ವಯಂಸೇವಕರನ್ನು ನೇಮಿಸಿಕೊಳ್ಳಲಾಗಿದೆ. ಮಹೋತ್ಸವದ ಭದ್ರತೆಯನ್ನು ಮತ್ತಷ್ಟು ಬಲಪಡಿ ಸಲು ನಗರದ ವಿವಿಧ ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿಯಾಗಿ 45 ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿ ಸಲಾಗಿದ್ದು, ಕಣ್ಗಾವಲು ನಡೆಸಲಾಗುತ್ತಿದೆ. 12 ಸಾರ್ವಜನಿಕ ಘೋಷಣಾ ವ್ಯವಸ್ಥೆಗಳನ್ನು ಬಳಸಿಕೊಳ್ಳಲಾಗಿದೆ.
"ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ, ಸಂಚಾರ ನಿಯಮಗಳನ್ನು ಪಾಲಿಸಿ ಹಾಗೂ ಸೂಚನೆಗಳನ್ನು ಅನುಸರಿಸುವ ಮೂಲಕ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲ ಪಿಂಡಿ ಮಹೋತ್ಸವವನ್ನು ಶಾಂತಿಯುತ ಹಾಗೂ ಸುರಕ್ಷಿತವಾಗಿ ನಡೆಯುವಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ".
-ಹರಿರಾಂ ಶಂಕರ್, ಜಿಲ್ಲಾ ಪೊಲೀಸ್ ಅಧಿಕ್ಷಕರು, ಉಡುಪಿ ಜಿಲ್ಲೆ.